ದೇಶದ ಬಹುತೇಕ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕಾರಣ: ಸಂಗಮೇಶ್ವರ್

| Published : Dec 29 2023, 01:32 AM IST

ದೇಶದ ಬಹುತೇಕ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕಾರಣ: ಸಂಗಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯಕ್ಕೂ ಮುನ್ನ, ಸ್ವಾತಂತ್ರ್ಯದ ನಂತರವೂ ಉಳಿದಿರುವ ಕಾಂಗ್ರೆಸ್‌ ಪಕ್ಷವು ಭಾರತ ದೇಶಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ದೇಶದ ಬಹುತೇಕ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಭದ್ರಾವತಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಭದ್ರಾವತಿ

ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಭಾರತದ ಬಹುತೇಕ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.

ನಗರದ ಶಾಸಕರ ಗೃಹ ಕಚೇರಿ ಆವರಣದಲ್ಲಿ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಧ್ವಜಾರೋಹಣ ಮತ್ತು ಪ್ರತಿಜ್ಞೆ ಸ್ವೀಕಾರ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸದಾ ದೇಶದ ಜನರ ಹಿತರಕ್ಷಣೆ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ. ಸರ್ಕಾರ ಅನುಷ್ಠಾನಗೊಳಿಸಿರುವ ಅಭಿವೃದ್ಧಿ ಕಾರ್ಯಗಳು, ರೂಪಿಸಿರುವ ಯೋಜನೆಗಳು ಇಂದಿಗೂ ದೇಶಕ್ಕೆ ಮಾದರಿಯಾಗಿವೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮಿಗಳ ಪರವಾಗಿದೆಯೇ ಹೊರತು, ರೈತಪರವಾಗಿಲ್ಲ. ರೈತರ ಸಾಲಮನ್ನಾ ನಿರ್ಲಕ್ಷಿಸುವ ಕೇಂದ್ರ ಸರ್ಕಾರ, ಉದ್ಯಮಿಗಳ ಸಾಲಮನ್ನಾಕ್ಕೆ ಆಸಕ್ತಿ ತೋರುತ್ತದೆ. ಇದು ಜನಪರ ಕಾಳಜಿ ಇಲ್ಲದ ಸ್ವಾರ್ಥ ಸರ್ಕಾರ ಎಂದು ಆರೋಪಿಸಿದರು.

ಸಂಘರ್ಷ ಸೃಷ್ಟಿಸಬಾರದು:

ಎಚ್.ಡಿ. ದೇವೆಗೌಡ ಅವರು ಪ್ರಧಾನಿ ಆಗುವಲ್ಲಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು 2 ಬಾರಿ ಮುಖ್ಯಮಂತ್ರಿ ಆಗುವಲ್ಲಿ ಕಾಂಗ್ರೆಸ್ ಸಹಕಾರವಿದೆ. ಆದರೆ. ಇದನ್ನು ಮರೆತು ಇದೀಗ ಜೆಡಿಎಸ್, ಬಿಜೆಪಿ ‘ಬಿ’ ಟೀಂನಂತೆ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿ ಅಭಿವೃದ್ಧಿ ಮೂಲಕ ಹಿಂದೂಗಳ ಮನಗೆಲ್ಲಲಿ. ಆದರೆ, ಹಿಂದೂತ್ವದ ಹೆಸರಿನಲ್ಲಿ ಸಂಘರ್ಷಗಳನ್ನು ಸೃಷ್ಟಿಸಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಪಕ್ಷದ ಹಿರಿಯ ಮುಖಂಡರಾದ ಬಲ್ಕೀಷ್ ಬಾನು ಮಾತನಾಡಿ, ದೇಶ ಸಂಕಷ್ಟದಲ್ಲಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆದಿರುವಂತೆಯೇ ರಾಷ್ಟ್ರದಲ್ಲೂ ಬಿಜೆಪಿ ಕಿತ್ತೊಗೆಯಲು ಕಾರ್ಯಕರ್ತರು ಪಣತೊಡೋಣ. ಪಕ್ಷ ಇದ್ದರೆ ಕಾರ್ಯಕರ್ತರು ಎಂಬುದನ್ನು ಎಲ್ಲಾ ಕಾರ್ಯಕರ್ತರು ತಿಳಿದುಕೊಳ್ಳಬೇಕೆಂದು ಕರೆ ನೀಡಿದರು.

ಪಕ್ಷದ ನಗರ ಘಟಕ ಅಧ್ಯಕ್ಷ ಎಸ್.ಕುಮಾರ್ ಅಧ್ಯಕ್ಷತೆ ವಹಿಸಿ, ಸ್ಥಳೀಯವಾಗಿ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳ ಮುಖಂಡರುಗಳ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶಾಸಕರ ಆಪ್ತ ಸಹಾಯಕ ಈಶ್ವರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಶಾಸಕರು ಧ್ವಜಾರೋಹಣ ನೆರವೇರಿಸಿದ ನಂತರ ಸಭಾ ಕಾರ್ಯಕ್ರಮ ನಡೆಸಲಾಯಿತು.

ಪಕ್ಷದ ಹಿರಿಯ ಕಾರ್ಯಕರ್ತರಾದ ಎ.ಎನ್. ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾದಳ ಕಾರ್ಯಕರ್ತರು, ಮುಖಂಡರು ಇನ್ನಿತರರು ಪಾಲ್ಗೊಂಡಿದ್ದರು.

ಪಕ್ಷದ ಮುಖಂಡರಾದ ಸುಕನ್ಯಾ, ಸಿ.ಎಂ. ಸಾಧಿಕ್, ಚನ್ನಪ್ಪ, ಎಚ್.ರವಿಕುಮಾರ್, ಬಿ.ಗಂಗಾಧರ್, ಅಮೀರ್‌ ಜಾನ್, ಲಕ್ಷ್ಮೀದೇವಿ, ಅಂತೋಣಿ ವಿಲ್ಸನ್ ಇನ್ನಿತರರು ಉಪಸ್ಥಿತರಿದ್ದರು. ಸಿ.ಜಯಪ್ಪ ಕಾರ್ಯಕ್ರಮ ನಿರೂಪಿಸಿ, ಜುಂಜ್ಯಾನಾಯ್ಕ ವಂದಿಸಿದರು.

- - - -ಡಿ28ಬಿಡಿವಿಟಿ4:

ಭದ್ರಾವತಿಯಲ್ಲಿ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಪಕ್ಷದ ಧ್ವಜಾರೋಹಣ ನೆರವೇರಿಸಿದರು.