ಕಾಂಗ್ರೆಸ್‌ ಸರ್ಕಾರ ವಕ್ಫ್ ಹೆಸರಿನಲ್ಲಿ ಜಮೀನು ವಶಕ್ಕೆ ಪಡೆಯುತ್ತಿದೆ

| Published : Nov 23 2024, 12:31 AM IST

ಕಾಂಗ್ರೆಸ್‌ ಸರ್ಕಾರ ವಕ್ಫ್ ಹೆಸರಿನಲ್ಲಿ ಜಮೀನು ವಶಕ್ಕೆ ಪಡೆಯುತ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರವು ವಕ್ಪ್ ಹೆಸರಿನಲ್ಲಿ ರೈತರ ಜಮೀನು ಕಬಳಿಸುತ್ತಿರುವುದನ್ನು ಖಂಡಿಸಿ ಪಟ್ಟಣದ ತಾಲೂಕು ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರಿಂದ ನಮ್ಮ ಭೂಮಿ ನಮ್ಮ ಹಕ್ಕು ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ರಾಜ್ಯ ಸರ್ಕಾರವು ವಕ್ಪ್ ಹೆಸರಿನಲ್ಲಿ ರೈತರ ಜಮೀನು ಕಬಳಿಸುತ್ತಿರುವುದನ್ನು ಖಂಡಿಸಿ ಪಟ್ಟಣದ ತಾಲೂಕು ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರಿಂದ ನಮ್ಮ ಭೂಮಿ ನಮ್ಮ ಹಕ್ಕು ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.

ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ರಾಜ್ಯ ಸರ್ಕಾರ ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ, ಹಿಂದೂಗಳ ಮಠ, ಮಂದಿರಗಳ ಜಮೀನನ್ನು ವಶಕ್ಕೆ ಪಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ವಕ್ಫ್ ಬೋರ್ಡ್ ಎಂದರೆ ಜನಸಾಮಾನ್ಯರು ಹೆದರಿಕೊಂಡು ಓಡಾಡುವಂತಾಗಿದೆ. ಜನ ಸಾಮಾನ್ಯರ ಜಮೀನುಗಳು ಕಬಳಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಜಮೀರ್ ಅಹಮದ್‌ರ ಈ ನಿರ್ಣಯ ಜನರನ್ನು ಅಸುರಕ್ಷತೆಗೆ ತಳ್ಳುತ್ತಿದೆ ಎಂದರು.ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ಮಾತನಾಡಿ, ಈ ಜನ ವೀರೋಧಿ ನೀತಿಯನ್ನು ಹಾಗೂ ಬಡಜನತೆಯ ಅನ್ನ ನೀಡುವ ಬಿಪಿಎಲ್ ಪಡಿತರ ಚೀಟಿ ರದ್ದುಮಾಡಿ ಎಪಿಎಲ್ ಕಾರ್ಡ್ ನೀಡುತ್ತಿರುವುದರಿಂದ ರಾಜ್ಯದ ಲಕ್ಷಾಂತರ ಬಡ ಜನತೆಗೆ ತೊಂದರೆ ಉಂಟಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಪಡಿತರ ಅಕ್ಕಿ ನೀಡುತ್ತಿರುವ ಬಿಪಿಎಲ್ ಕಾರ್ಡ್ ರದ್ದತಿಯಿಂದ ಬಡ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗನ್ನು ಎಪಿಎಲ್ ಕಾರ್ಡ್ ಎಂದು ಘೋಷಿಸಿರುವುದನ್ನು ತಕ್ಷಣವೇ ಬಿಪಿಎಲ್ ಕಾರ್ಡ್ ಎಂದು ಘೊಷಣೆ ಮಾಡಬೇಕೆಂದು ತಿಳಿಸಿದರು. ತಾಲೂಕು ಮಂಡಲ ಅಧ್ಯಕ್ಷ ಡಾ.ದರ್ಶನ್ ಮಾತನಾಡಿ, ರಾಜ್ಯ ಸರ್ಕಾರ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ಕಿತ್ತುಕೊಂಡು ಅನ್ಯಾಯ ಎಸಗುತ್ತಿರುವುದಲ್ಲದೆ ಬಡ ರೈತರ ಜಮೀನುಗಳನ್ನು ಕಬಳಿಸುತ್ತಿದೆ. ವಕ್ಫ್ ಭೋಡ್ ಹೆಸರಿನಲ್ಲಿ ರೈತರ ಆಸ್ತಿ ಕಬಳಿಕೆ, ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಭ್ರಷ್ಠಾಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪಾವಗಡ ಮಂಡಲ ಅಧ್ಯಕ್ಷ ರಂಗನಾಥ್, ಮಧುಗಿರಿ ಮಂಡಲ ಅಧ್ಯಕ್ಷ ನಾಗೇಂದ್ರ, ಶಿರಾ ಮಂಡಲ ಅಧ್ಯಕ್ಷ ಚಿಕ್ಕಣ್ಣ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸ್ವಾಮಿ, ಪ.ಪಂ.ಸದಸ್ಯ ಪ್ರದೀಪ್‌ಕುಮಾರ್, ಮುಖಂಡರುಗಳಾದ ದಾಡಿ ವೆಂಕಟೇಶ್, ಹನುಮಂತರಾಜು, ಅರುಣ್, ಚೇತನ್, ರಾಜಣ್ಣ, ನಂದರಾಜು, ಸಿದ್ದರಾಜು, ಶ್ರೀರಾಮುಲು ನಾಯ್ಕ, ರವಿಕುಮಾರ್, ಸಿದ್ದನಂಜಪ್ಪ, ಚಂದ್ರಣ್ಣ, ಮೋಹನ್ ಸೇರಿದಂತೆ ಇನ್ನಿತರರು ಹಾಜರಿದ್ದರು.