ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸರ್ಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸದ ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರಲು ಹಿಂದಿನ ಚುನಾವಣೆಯಲ್ಲಿ ಸರ್ಕಾರಿ ನೌಕರರಿಗೆ ಭರಪೂರ ಭರವಸೆಯ ಮಾತನ್ನು ನೀಡಿ ಇದೀಗ ಜಾಣ ಮರೆವು ತೋರಿಸುತ್ತ ನೌಕರರ ಜೀವನದಲ್ಲಿ ನಾಟಕವಾಡುತ್ತ ದಿಕ್ಕೊಂದು ಸುದ್ದಿ ಹರಿಬಿಟ್ಟು ಎಲ್ಲರ ದಾರಿತಪ್ಪಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಆರೋಪಿಸಿದ್ದಾರೆ.ಇಂದು ಶಾಸಕಾಂಗ ಮತ್ತು ಕಾರ್ಯಾಂಗದ ನಡುವ ಬಹುದೊಡ್ಡ ಕಂದಕ ನಿರ್ಮಾಣವಾಗಿದ್ದು ಈ ಸರ್ಕಾರವು ತಮ್ಮ ಗ್ಯಾರಂಟಿ ಯೋಜನೆಗಳ ಕಾರ್ಯರೂಪಕ್ಕೆ ತರಲು ಇದೇ ಸರ್ಕಾರಿ ನೌಕರರು ಶ್ರಮಿಸಿದರೂ ಇದೇ ಯೋಜನೆಗಳಿಂದ ಸರ್ಕಾರಿ ನೌಕರರ ವೇತನವನ್ನೂ ನ್ಯಾಯಯುತವಾಗಿ ನೀಡದೆ ಮಾತನ್ನು ತಪ್ಪಿದೆ ಎಂದು ನಮೋಶಿ ದೂರಿದ್ದಾರೆ.
ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಸಹ ಜನ ಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. 7ನೇ ವೇತನ ಆಯೋಗದ ವರಧಿ ಜಾರಿ ಮಾಡದೇ ಸರ್ಕಾರಿ ನೌಕರರ ಹಕ್ಕನ್ನು ಕಸಿಯಲಾಗುತ್ತಿದೆ ಎಂದಿದ್ದಾರೆ.ಸರ್ಕಾರಿ ನೌಕರರ ವೇತನಗಳನ್ನು ಪರಿಷ್ಕರಿಸುವ ಸಲುವಾಗಿ ಸಾಮಾನ್ಯವಾಗಿ ಪ್ರತಿ 5 ವರ್ಷಕ್ಕೊಮ್ಮೆ ಹೊಸ ಆಯೋಗವನ್ನು ರಚಿಸಿ ಅದರ ಶಿಫಾರಸ್ಸಿನಂತೆ ವೇತನ ಪರಿಷ್ಕರಿಸುವುದ ಹಿಂದಿನಿಂದಿಲೂ ನಡೆದುಬಂದಿದೆ. ಇದಕ್ಕೂ ಮುನ್ನ ನಮ್ಮ ಭಾ.ಜ.ಪ ನೇತೃತ್ವದ ರಾಜ್ಯ ಸರ್ಕಾರವು ದಿನಾಂಕ: 19-11-2022ರಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರರಾವ್ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಹಿಸಲಾಯಿತು.
ಸಮಿತಿಯ ವರಧಿ ಬರುವುದ ತಡವಾಗಿದ್ದರಿಂದ ನೌಕರರ ಮನವಿಯನ್ನು ಪುರಸ್ಕರಿಸಿ ನಮ್ಮ ಭಾ.ಜ.ಪ ನೇತೃತ್ವದ ಸರ್ಕಾರವು ದಿನಾಂಕ: 01-04-2023ರಿಂದ ಅನ್ವಯವಾಗುವಂತೆ ಶೇ.17% ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಹಾಗೂ ಮಾತಿನಂತೆ ನಡೆದುಕೊಂಡಿತ್ತು.ಈಗಿನ ಕಾಂಗ್ರೆಸ್ ಸರಕಾರ ನೌಕರರಿಗೆ 7ನೇ ವೇತನ ಆಯೋಗ ಜಾರಿ ಹಾಗು ಹಳೇ ಪಿಂಚಣಿ ಹಾಗು ಆರೋಗ್ಯ ವಿಮೆಯ ಕುರಿತು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುತ್ತದೆ ಅಧಿಕಾರಕ್ಕೆ ಬಂದ ನಂತರವೂ ಈಗಿನ ಮುಖ್ಯಮಂತ್ರಿಗಳು ನೌಕರರ ಸಮಾವೇಶಗಳಲ್ಲಿ ನೌಕರರೆದುರಿಗೆ ಆಯೋಗ ಅಂತಿಮ ವರಧಿ ನೀಡಿದ ಕೂಡಲೇ ಅನುಷ್ಠಾನ ಮಾಡುವ ಭರವಸೆ ನೀಡಿದ್ದರು. ಆದರೆ, ರಾಜ್ಯ 7ನೇ ವೇತನ ಆಯೋಗವು ಅಂತಿಮವಾಗಿ ದಿನಾಂಕ: 16-03-2024ರಂದು ಶೇ.27.5 ಫಿಟ್‍ಮೆಂಟ್ ಸೌಲಭ್ಯದೊಂದಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರೂ ಇಂದಿಗೂ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆಂದು ನಮೋಶಿ ಪ್ರಶ್ನಿಸಿದ್ದಾರೆ.
ಆಯೋಗ ರಚನೆಯಾಗಿ 19 ತಿಂಗಳಾದರೂ ವೇತನ ಪರಿಷ್ಕರಣೆಯಾಗದೆ ಇತಿಹಾಸದಲ್ಲಿಯೇ ಹೆಚ್ಚು ಸಮಯ ತೆಗೆದುಕೊಂಡ ಕೆಟ್ಟ ದಾಖಲೆಯನ್ನು ಸರ್ಕಾರ ಮಾಡಿದೆ. ಚುನಾವಣೆಯಲ್ಲಿ ಸರ್ಕಾರಿ ನೌಕರರ ಪರವಾಗಿ ನೀಡಿದ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವ ಭರವಸೆಯೂ ಭರವಸೆಯಾಗಿಯೇ ಉಳಿದಿದೆ. ಪ್ರಸ್ತುತ ಹೊಸ ಪಿಂಚಣಿ ಯೋಜನೆಯಡಿ ನಿವೃತ್ತರಾಗಿರುವ ನೌಕರರಿಗೆ ಕೇವಲ 1500 ಪಿಂಚಣಿ ಸಿಗುತ್ತಿರುವುದ ಇದು ಸರ್ಕಾರ ಮಹಿಳೆಯರಿಗೆ ನೀಡುತ್ತಿರು ಭಾಗ್ಯಲಕ್ಷ್ಮೀ ಯೋಜನೆಗಿಂತಲೂ ಕಡಿಮೆ ಎಂದು ನಮೋಶಿ ಸರಕಾರದ ಧೋರಣೆ ಖಂಡಿಸಿದ್ದಾರೆ.ರಾಜ್ಯದ ಸರ್ಕಾರಿ ನೌಕರರ ಹಿತಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಈ ನೌಕರರು ತಮ್ಮ ಬೇಡಿಕೆಗೆ ಆಗ್ರಹಿಸಿ ನಡೆಯುವ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ನಮೋಶಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.