ಸಾರಾಂಶ
ಚನ್ನಪಟ್ಟಣ: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಹಣ, ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನವನ್ನೇ ದೋಚಿದ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ದಲಿತ ಸಮುದಾಯದ ಮತಗಳನ್ನು ಕೇಳುವ ನೈತಿಕ ಹಕ್ಕಿಲ್ಲ. ನೀಚ ಕಾಂಗ್ರೆಸ್ಸಿಗರಿಗೆ ದಲಿತ ಕೇರಿಗಳಿಗೆ ಪ್ರವೇಶಿಸುವ ಯೋಗ್ಯತೆಯೂ ಇಲ್ಲ ಎಂದು ಪ್ರದೇಶ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಕೋಟಿ ಕೋಟಿ ಮೊತ್ತದಲ್ಲಿ ಬಾರ್, ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಖಾಸಗಿ ವ್ಯಕ್ತಿಗಳ ಅಕೌಂಟ್‌ಗೆ ವರ್ಗಾಯಿಸಿಕೊಂಡು ಲೂಟಿ ಮಾಡಿದ್ದಾರೆ. ಹಣ ದುರ್ಬಳಕೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು.ಅಂಬೇಡ್ಕರ್ ಅವರಿಂದಾಗಿ ದಲಿತ ಸಮುದಾಯ ಜಾಗೃತಗೊಂಡಿದೆ. ಅಂಬೇಡ್ಕರ್ ಅವರಿಗೆ ಮಾಡಿದ ಮೋಸವನ್ನು ಅಂಬೇಡ್ಕರ್ ಅನುಯಾಯಿಗಳಾದ ನಮ್ಮ ದಲಿತರಿಗೆ ಮಾಡಲಾಗುವುದಿಲ್ಲ. ಇದೀಗ ಉಪ ಚುನಾವಣೆಗೆ ಬರುತ್ತಿರುವ ಡಜನ್ ಸಚಿವರು, 30 ಕಾಂಗ್ರೆಸ್ ಶಾಸಕರನ್ನೂ ಚನ್ನಪಟ್ಟಣದಲ್ಲಿ ದಲಿತರು ಪ್ರತಿ ಊರಿನಲ್ಲೂ ಪ್ರಶ್ನೆ ಮಾಡಲು ಸಿದ್ಧರಾಗಿದ್ದಾರೆ. ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ತಿಳಿಸಿದರು.
ಭಾರತದ ಇತಿಹಾಸದಲ್ಲೇ ದಲಿತ ಕೇರಿಗಳಿಗೆ ಎಸ್‌ಇಪಿ, ಟಿಎಸ್‌ಪಿ ಅನುದಾನದಡಿ ಕಾಂಕ್ರೀಟ್ ರಸ್ತೆ ಮಂಜೂರು ಮಾಡಿದವರು ಕುಮಾರಸ್ವಾಮಿ ಅವರೇ ಹೊರತು ಕಾಂಗ್ರೆಸ್ ಸರ್ಕಾರವಲ್ಲ. ಯೋಗೇಶ್ವರ್ ನಿರ್ಲಕ್ಷ್ಯದ ಕಾರಣ ಸ್ಥಗಿತಗೊಂಡಿದ್ದ ಚನ್ನಪಟ್ಟಣ ಅಂಬೇಡ್ಕರ್ ಭವನಕ್ಕೂ 2 ಕೋಟಿ ರು. ಅನುದಾನ ನೀಡಿ, ಕಾಮಗಾರಿ ಪೂರ್ಣಗೊಳಿಸಿದ ಕೀರ್ತಿ ಕುಮಾರಸ್ವಾಮಿ ಅವರಿಗೇ ಸಲ್ಲಬೇಕು ಎಂದರು.ಯಾರ ಉದ್ಧಾರಕ್ಕೆ ಪಕ್ಷಾಂತರ? :
ಯೋಗೇಶ್ವರ್ ಅವರಿಗೆ ಎನ್‌ಡಿಎ ಮಿತ್ರಪಕ್ಷಗಳ ಪೈಕಿ ಮೊದಲಿಗೆ ಜೆಡಿಎಸ್‌ನಿಂದ ಟಿಕೆಟ್ ಅಂತಿಮವಾಗಿತ್ತು. ಅದಕ್ಕೆ ನಾನೇ ಸಾಕ್ಷಿ. ಅವರು ಬಿಜೆಪಿ ಚಿನ್ಹೆಯಡಿಯೇ ಸ್ಪರ್ಧೆ ಮಾಡಲು ಪಟ್ಟು ಹಿಡಿದಾಗಲೂ ಕುಮಾರಸ್ವಾಮಿ ಸಮ್ಮತಿಸಿದ್ದರು. ಆದರೆ, ಮೊದಲೇ ಮ್ಯಾಚ್‌ಫಿಕ್ಸಿಂಗ್ ಮಾಡಿಕೊಂಡಿದ್ದ ಯೋಗೇಶ್ವರ್ ಎಲ್ಲರಿಗೂ ಟೋಪಿ ಹಾಕಿ, ಹಾರಿಯೇಬಿಟ್ಟರು. ಯಾರ ಉದ್ಧಾರಕ್ಕಾಗಿ ಹೀಗೆ ಅವರು ಮೇಲಿಂದ ಮೇಲೆ ಪಕ್ಷಾಂತರ ಮಾಡುತ್ತಿದ್ದಾರೆ ಎಂದು ಡಾ.ಅನ್ನದಾನಿ ಪ್ರಶ್ನಿಸಿದರು.ಯೋಗೇಶ್ವರ್ ಅವರು ಹಿಂದೆ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ಅಂಬೇಡ್ಕರ್ ಭವನಗಳಿಗೆ ಮಂಜೂರಾಗಿದ್ದ ಅನುದಾನ ತಡೆಗೆ ಪತ್ರ ಕೊಟ್ಟಿದ್ದರು. ಅವರು ಎಂದಿಗೂ ದಲಿತ ಸಮುದಾಯದ ಹಿತ ಕಾಯ್ದವರಲ್ಲ. ದಲಿತರ ಅಭ್ಯುದಯಕ್ಕಾಗಿ ಒಂದೇ ಒಂದು ಕಾರ್ಯಕ್ರಮವನ್ನೂ ಇಲ್ಲಿ ಜಾರಿಗೊಳಿಸಿಲ್ಲ. ಹೀಗಾಗಿ ಅವರಿಗೆ ದಲಿತರ ವೋಟು ಕೇಳುವ ಹಕ್ಕಿಲ್ಲ ಎಂದು ಕಿಡಿ ಕಾರಿದರು.
ತಾತ, ಅಪ್ಪನ ಸಾಧನೆ ಶ್ರೀರಕ್ಷೆ:ಚನ್ನಪಟ್ಟಣಕ್ಕೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರಿಬ್ಬರ ಕೊಡುಗೆಗಳು ಮತ್ತು ಸಾಧನೆಗಳೇ ಇಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಅವರಿಗೆ ಶ್ರೀರಕ್ಷೆಯಾಗಿವೆ. ಪ್ರಸಕ್ತ ಉಪ ಚುನಾವಣೆಯಲ್ಲಿ ನಿಖಿಲ್ ಅವರ ಗೆಲುವು ನೂರಕ್ಕೆ ಇನ್ನೂರರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್‌ಗಾಂಧಿ ಅದಾದ ನಂತರ ಪ್ರಿಯಾಂಕಗಾಂಧಿ ವೈನಾಡಿನಿಂದ ಸ್ಪರ್ಧೆ ಮಾಡಿದ್ದಾರೆ. ಕೇರಳಕ್ಕೂ ಅವರಿಗೂ ಏನು ಸಂಬಂಧ? ಉತ್ತರ ಭಾರತದಿಂದ ಬಂದು ಅವರು ಕೇರಳದಲ್ಲಿ ಸ್ಪರ್ಧಿಸಬಹುದು ಎನ್ನುವುದಾದರೆ, ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಾತ ಮತ್ತು ಅಪ್ಪನ ಕರ್ಮಭೂಮಿಯಲ್ಲಿ ಸ್ಪರ್ಧಿಸುವುದು ಅಪರಾಧವೇ? ಈ ಬಗ್ಗೆ ಟೀಕಿಸುವುದು ಕಾಂಗ್ರೆಸ್ಸಿಗರ ಇಬ್ಬಂದಿ ನೀತಿಯಲ್ಲದೆ ಮತ್ತಿನ್ನೇನು? ಎಂದು ಅನ್ನದಾನಿ ವಾಗ್ದಾಳಿ ನಡೆಸಿದರು.ಬಾಕ್ಸ್..............
ಎಚ್‌ಡಿಡಿ, ಎಚ್‌ಡಿಕೆ ನೀರಾವರಿ ಹರಿಕಾರರು: ಡಾ. ಅನ್ನದಾನಿಚನ್ನಪಟ್ಟಣ: ತಾಲೂಕಿನಲ್ಲಿ ಯೋಗೇಶ್ವರ್ ಒಬ್ಬ ಸಾಮಾನ್ಯ ಶಾಸಕನ ಜವಾಬ್ದಾರಿ, ಕರ್ತವ್ಯಗಳನ್ನಷ್ಟೇ ನಿರ್ವಹಿಸಿದ್ದಾರೆ. ಒಂದೊಮ್ಮೆ ಎಚ್.ಡಿ.ದೇವೇಗೌಡ ಅವರು ಇಗ್ಗಲೂರು ಬ್ಯಾರೇಜ್ ನಿರ್ಮಾಣ ಮಾಡದೇ ಹೋಗಿದ್ದರೆ, ಯೋಗೇಶ್ವರ್ ಅವರು ಎಲ್ಲಿಂದ ಏತ ನೀರಾವರಿ ಯೋಜನೆ ಸಾಕಾರಗೊಳಿಸಲು ಸಾಧ್ಯವಾಗುತ್ತಿತ್ತು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ತುಂಬಿಸಿದ್ದು ಕೇವಲ 28 ಕೆರೆಗಳನ್ನು. ಆದರೆ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ 110ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದಾರೆ ಎಂದು ತಿಳಿಸಿದ ಅವರು, ಮಾಜಿ ಸಚಿವರಾದ ಎಂ.ವರದೇಗೌಡರ ಒತ್ತಾಸೆಯಂತೆ ದೇವೇಗೌಡ ಅವರು 1996ರಲ್ಲೇ ಇಗ್ಗಲೂರು ಬ್ಯಾರೇಜ್ ಕಾಮಗಾರಿ ಪೂರ್ಣಗೊಳಿಸಿದರು. ಬ್ಯಾರೇಜ್‌ಗೆ ದೇವೇಗೌಡರ ಕಳಕಳಿ, ಪರಿಶ್ರಮವೇ ಕಾರಣ. ಚನ್ನಪಟ್ಟಣಕ್ಕೆ ನಿಜವಾಗಿ ಮೊದಲ ನೀರಾವರಿ ಕೊಡುಗೆ ದೇವೇಗೌಡರಿಂದ ಆಗಿದೆ. ನಾವು ಬಿಜೆಪಿ ಸರ್ಕಾರದಲ್ಲಿ ಕಣ್ವ ಏತ ನೀರಾವರಿ ಯೋಜನೆಗೆ ಅನುದಾನ ಮಂಜೂರು ಮಾಡಿಕೊಟ್ಟ ಡಿ.ವಿ.ಸದಾನಂದಗೌಡ ಅವರನ್ನೂ ಮರೆಯುವಂತಿಲ್ಲ ಎಂದರು.ಕಾವೇರಿ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ 18 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲು ದೇವೇಗೌಡರ ಹೋರಾಟ ಕಾರಣ. ಹೆಚ್ಚುವರಿ ನೀರಿನ ಅವಕಾಶ ಬಳಸಿಕೊಳ್ಳಲೆಂದೇ ಕುಮಾರಸ್ವಾಮಿ ಅವರು 2018ರಲ್ಲಿ ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ನೀರಾವರಿ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು 540 ಕೋಟಿ ರು. ವೆಚ್ಚದಲ್ಲಿ ಮಂಜೂರು ಮಾಡಿದರು. ಆ ಕಾಮಗಾರಿ ಇನ್ನೇನು ಅಂತಿಮ ಹಂತಕ್ಕೆ ತಲುಪಿದ್ದು, ಇಡೀ ರಾಮನಗರ ಜಿಲ್ಲೆಗೆ ವರದಾನವಾಗಲಿದೆ ಎಂದರು.
ಸತ್ತೇಗಾಲದಿಂದ ನೀರು ಲಿಫ್ಟ್ ಮಾಡಿ, ಗುರುತ್ವಾಕರ್ಷಣೆ ಮುಖಾಂತರ ಇಗ್ಗಲೂರಿನಲ್ಲಿರುವ ಎಚ್.ಡಿ.ದೇವೇಗೌಡ ಬ್ಯಾರೇಜ್‌ಗೆ ತುಂಬಿಸುವುದು, ಅದಲ್ಲಿಂದ ಕಣ್ವ, ವೈ.ಜಿ.ಗುಡ್ಡ, ಮಂಚನಬಲೆ ಜಲಾಶಯಗಳನ್ನು ತುಂಬಿಸುವ ಉದ್ದೇಶ ಯೋಜನೆಯದ್ದಾಗಿದೆ. ಕಾಮಗಾರಿ ಪೂರ್ಣಗೊಂಡೊಡನೆ ರಾಮನಗರ ಜಿಲ್ಲೆಯಲ್ಲಿರುವ ಕಣ್ವ, ಅರ್ಕಾವತಿ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಗಡಿಯಲ್ಲಿ ಹರಿಯುವ ಶಿಂಷೆಯೂ ಮೈದುಂಬಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕಾವೇರಿ ಕೊಳ್ಳದಲ್ಲಿ ಅತಿವೃಷ್ಟಿ ಸಂಭವಿಸಿ, ಪ್ರವಾಹವೇ ಸಂಭವಿಸಿತು. ತಮಿಳುನಾಡಿಗೆ ನೂರಾರು ಟಿಎಂಸಿ ನೀರು ಹರಿದಾಗಲೂ ಶಿಂಷಾದಲ್ಲಿ ಹನಿ ನೀರು ಇರಲಿಲ್ಲ. ಹೀಗಾಗಿ ಶಿಂಷಾ ನದಿ ಅವಲಂಬಿತ ಏತ ನೀರಾವರಿ ಯೋಜನೆಗಿಂತ ಸತ್ತೇಗಾಲ ಕಾವೇರಿ ಯೋಜನೆ ಹೆಚ್ಚು ಉಪಯುಕ್ತವಾಗಲಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ಕುಮಾರಸ್ವಾಮಿ ಅವರು ಯೋಜನೆ ಸಾಕಾರಕ್ಕೆ ಅಡಿಗಲ್ಲು ಹಾಕಿದ್ದಾರೆ. ಭವಿಷ್ಯದಲ್ಲಿ ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಬವಣೆಯೂ ನೀಗಲಿದ್ದು, ಸಮೃದ್ಧ ನೀರಾವರಿ ಪ್ರದೇಶ ಇದಾಗಲಿದೆ ಎಂದು ಅನ್ನದಾನಿ ಹೇಳಿದರು.
1ಕೆಆರ್ ಎಂಎನ್ 7.ಜೆಪಿಜಿಪ್ರದೇಶ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.