ದಾವಣಗೆರೆ: ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 100 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್‌ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ಬಾಷಾನಗರ, ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಶುಕ್ರವಾರ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂದು ಭರವಸೆ ನೀಡಿದರು.
ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಸ್ಥಳೀಯ ಮುಖಂಡರು, ಕಾರ್ಯಕರ್ತರು, ನೂರಾರು ಜನರು ಹಾಜರಿದ್ದರು.