ಕಾಂಗ್ರೆಸ್ ಸರ್ವರನ್ನು ಸಮಾನವಾಗಿ ಕಾಣುತ್ತದೆ. ಕಾಂಗ್ರೆಸ್‌ ಬರೀ ಅಲ್ಪಸಂಖ್ಯಾತ ಸಮುದಾಯಗಳಿಗೆ ಅನುದಾನವನ್ನು ನೀಡಿಲ್ಲ, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಗಜೇಂದ್ರಗಡ: ಕಾಂಗ್ರೆಸ್ ಸರ್ಕಾರ ಸರ್ವರೂ ಸಮಾನರು ಎಂಬ ತತ್ವದಡಿ ಆಡಳಿತ ನಡೆಸುತ್ತಿದೆ. ಅದೇ ರೀತಿ ಪಟ್ಟಣದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಪಟ್ಟಣದ ೧ನೇ ವಾರ್ಡಿನ ಅಡೇಕಾರ ಓಣಿಯಲ್ಲಿ ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರ, ಸೈಯದ್ ಶಹಾ ಮಹೆಬೂಬ ಸುಭಾನಿ ಸಮುದಾಯ ಭವನ ನಿರ್ಮಾಣ ಭೂಮಿಪೂಜೆ ಹಾಗೂ ಪುರಸಭೆ ಮಾಜಿ ಸದಸ್ಯ ರಾಜು ಸಾಂಗ್ಲೀಕರ ಅವರಿಂದ ನಡೆದ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.ಜನಪರ ಕಾರ್ಯಗಳನ್ನು ಮಾಡುವ ಜನಪ್ರತಿನಿಧಿಗಳಿಗೆ ಜನತೆ ಬೆಂಬಲ ನೀಡುತ್ತಾರೆ ಎಂಬುದಕ್ಕೆ ರಾಜು ಸಾಂಗ್ಲೀಕರ ಅವರ ಕೃತಜ್ಞತಾ ಸಮಾರಂಭದಲ್ಲಿ ಸೇರಿರುವ ಜನತೆಯೇ ಸಾಕ್ಷಿ. ರಾಜು ಸಾಂಗ್ಲೀಕ ಅವರು ಸಮಾಜಸೇವೆ ಜತೆಗೆ ಪಕ್ಷ ಸಂಘಟನೆಯಲ್ಲಿ ಒತ್ತು ನೀಡಿದ್ದಾರೆ. ಹೀಗಾಗಿ ಪಟ್ಟಣದ ಸರ್ಕಾರಿ ಸಮುದಾಯದ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಲು ಹಾಗೂ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.

ಕಾಂಗ್ರೆಸ್ ಸರ್ವರನ್ನು ಸಮಾನವಾಗಿ ಕಾಣುತ್ತದೆ. ಕಾಂಗ್ರೆಸ್‌ ಬರೀ ಅಲ್ಪಸಂಖ್ಯಾತ ಸಮುದಾಯಗಳಿಗೆ ಅನುದಾನವನ್ನು ನೀಡಿಲ್ಲ, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮುಖ್ಯಮಂತ್ರಿ ನಿಧಿಯಿಂದ ಅಂದಾಜು ₹೬ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನವನ್ನು ನೀಡುತ್ತೇನೆ. ಪಟ್ಟಣದಲ್ಲಿ ನಿರಾಶ್ರಿತರಿಗೆ ಮನೆಗಳನ್ನು ನೀಡುವ ಯೋಜನೆ ಪ್ರಗತಿಯಲ್ಲಿದ್ದು, ಪ್ರತಿ ಕುಟುಂಬಕ್ಕೂ ಸೂರು ನೀಡುವ ಗುರಿ ಅಂತಿಮ ಹಂತದಲ್ಲಿದೆ ಎಂದರು.ಪುರಸಭೆ ಮಾಜಿ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ಪುರಸಭೆ ಸದಸ್ಯನಾಗುವ ಮುನ್ನ ನೀಡಿದ ಭರವಸೆ ಹಾಗೂ ವಾರ್ಡಿನಲ್ಲಿ ಕೈಗೊಂಡ ಕೆಲಸ ಕಾರ್ಯಗಳ ಕುರಿತು ಮಾತನಾಡಿದರು.

ಮುಖಂಡರಾದ ಎಚ್.ಎಸ್. ಸೋಂಪುರ, ವೀರಣ್ಣ ಶೆಟ್ಟರ, ದಾವಲ ತಾಳಿಕೋಟಿ, ಹಸನ ತಟಗಾರ, ಬಸವರಾಜ ಕೊಟಗಿ ಮಾತನಾಡಿದರು. ಟಕ್ಕೇದ ದರ್ಗಾದ ನಿಜಾಮುದ್ದೀನ್‌ಶಾ ಮಕಾನದಾರ ಸಾನ್ನಿಧ್ಯ ವಹಿಸಿದ್ದರು. ಅಶೋಕ ಬಾಗಮಾರ, ಸಿದ್ದಪ್ಪ ಬಂಡಿ, ಮುರ್ತುಜಾ ಡಾಲಾಯತ್, ಎ.ಡಿ. ಕೋಲಕಾರ, ಶ್ರೀಧರ ಬಿದರಳ್ಳಿ, ತಾರಾಸಿಂಗ್ ರಾಠೋಡ, ಶರಣಪ್ಪ ಚಳಗೇರಿ, ರಾಜೇಸಾಬ ಯಲಬುರ್ಗಿ, ಡಾ. ಜೀತೇಂದ್ರ ಘೋರ್ಪಡೆ ಸೇರಿ ಇತರರು ಇದ್ದರು.

ಧನಸಹಾಯ...

ರಾಜು ಸಾಂಗ್ಲೀಕರ ಅವರು ಪಟ್ಟಣದ ೧ನೇ ವಾರ್ಡಿನ ಪುರಸಭೆ ಸದಸ್ಯರಾಗಿದ್ದ ವೇಳೆ ತಮಗೆ ಬಂದಿದ್ದ ಐದು ವರ್ಷದ ಪುರಸಭೆಯ ಗೌರವಧನ ₹೭೨ ಸಾವಿರ ಹಾಗೂ ವೈಯಕ್ತಿಕ ₹೨೮ ಸಾವಿರ ಹಣ ಸೇರಿಸಿ ವಾರ್ಡಿನ ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹೫೦ ಸಾವಿರ ಮತ್ತು ಸೈಯದ್ ಶಹಾ ಮಹೆಬೂಬ ಸುಭಾನಿ ಸಮುದಾಯ ಭವನ ನಿರ್ಮಾಣಕ್ಕೆ ₹೫೦ ಸಾವಿರ ಧನಸಹಾಯ ನೀಡಿದರು.

ರಾಜು ಸಾಂಗ್ಲೀಕರ ಅವರು ತಮ್ಮ ಅಮರಜ್ಯೋತಿ ಚಾರಿಟಬಲ್ ಟ್ರಸ್ಟ್ ಮೂಲಕ ಸ್ಥಾಪಿಸಲು ಉದ್ದೇಶಿಸಿರುವ ವೃದ್ಧಾಶ್ರಮಕ್ಕೆ ಎಸ್.ಆರ್. ಪಾಟೀಲ್ ಪ್ರತಿಷ್ಠಾನದ ಮೂಲಕ ₹೧೦ ಲಕ್ಷ ನೀಡುವುದಾಗಿ ಶಾಸಕ ಜಿ.ಎಸ್. ಪಾಟೀಲ ಘೋಷಿಸಿದರು.