ಕಾಂಗ್ರೆಸ್‌ ಸರ್ಕಾರದಿಂದ ಪದವೀಧರರ ಮೂಗಿಗೆ ತುಪ್ಪ ಸವರುವ ಕೆಲಸ: ಅರುಣ ಶಹಾಪುರ

| Published : May 29 2024, 12:59 AM IST

ಸಾರಾಂಶ

ರಾಜ್ಯದಲ್ಲಿನ ಶೈಕ್ಷಣಿಕ ಗೊಂದಲಕ್ಕೆ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರ ಉಡಾಫೆಯ ಮನೋಭಾವವೆ ಕಾರಣವಾಗಿದ್ದು, ಇವರಾರಿಗೂ ತಮ್ಮ ತಪ್ಪಿನ ಅರಿವಾಗುತ್ತಿಲ್ಲ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ರಾಜ್ಯ ಕಾಂಗ್ರೆಸ್‌ ಸರ್ಕಾರ ನೌಕರರು ಮತ್ತು ಪದವೀಧರರಿಗೆ ಹೊಸ ವೇತನ ನೀಡುವ ಕುರಿತು ಮೂಗಿಗೆ ತುಪ್ಪ ಸವರಿಸುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತ ಬಂದಿದೆ. ಸರ್ಕಾರದ ಈ ಧೋರಣೆ ಪದವೀಧರರನ್ನು ಕಂಗೆಡಿಸಿದೆ. ಹೀಗಾಗಿ, ಈ ಸಲದ ವಿಧಾನಪರಿಷತ್‌ ಚುನಾವಣೆಯಲ್ಲಿ ಸರ್ಕಾರಕ್ಕೆ ಸರಿಯಾದ ಬುದ್ಧಿ ಕಲಿಸುವತ್ತ ಅವರು ಮುಂದಾಗಿದ್ದಾರೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ಮಂಗಳವಾರ ಮಧ್ಯಾಹ್ನ ಪಟ್ಟಣದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರ್‌ನಾಥ ಪಾಟೀಲ್‌ ಅವರ ಪರ ಚುನಾವಣಾ ಪ್ರಚಾರ ಕೈಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿನ ಶೈಕ್ಷಣಿಕ ಗೊಂದಲಕ್ಕೆ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರ ಉಡಾಫೆಯ ಮನೋಭಾವವೆ ಕಾರಣವಾಗಿದ್ದು, ಇವರಾರಿಗೂ ತಮ್ಮ ತಪ್ಪಿನ ಅರಿವಾಗುತ್ತಿಲ್ಲ. ಈ ಕಾರಣದಿಂದ ಶಿಕ್ಷಣ ಕ್ಷೇತ್ರದ ಮಕ್ಕಳು ಮತ್ತು ನೌಕರರು ಸಿಬ್ಬಂದಿ ಅನಗತ್ಯ ತೊಂದರೆ ಅನುಭವಿಸುವಂತಾಗಿದೆ. ಈ ಇಬ್ಬರ ಬದಲಾವಣೆ ಮಾಡಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮರ್‌ನಾಥ ಬಹಳಷ್ಟು ಕೆಲಸ ಮಾಡಿ ತೋರಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮೂಲಭೂತ ಸೌಕರ್ಯ ನಿವಾರಣೆಗೆ ದೊಡ್ಡ ಬಗೆಯ ಯೋಜನೆ ರೂಪಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಸಲದ ಚುನಾವಣೆಲ್ಲಿ ಅಮರ್‌ನಾಥ ಪಾಟೇಲ್‌ ಖಂಡಿತ ಗೆಲುವು ಸಾಧಿಸಲಿದ್ದಾರೆ ಎಂದು ಅವರು ಹೇಳಿದರು.

ಜೂ. 3ರಂದು ನಡೆಯಲಿರುವ ವಿಧಾನ ಪರಿಷತ್‌ನ 6 ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಬರಲಿವೆ. ದುರಾಡಳಿತದ ಕಾಂಗ್ರೆಸ್‌ ಸರ್ಕಾರದ ವರ್ತನೆ ನೌಕರರು ಮತ್ತು ಪದವೀಧರರ ಬೇಸರಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿ ಬಿಜೆಪಿ ಪ್ರತಿಯೊಂದರಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ಕೊಟ್ಟೂರು ಬಿಜೆಪಿ ಅಧ್ಯಕ್ಷ ಪಿ. ಭರಮನಗೌಡ, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಎಸ್. ಈಶ್ವರಗೌಡ, ಜಿ. ಸಿದ್ದಯ್ಯ, ಮುಖಂಡರಾದ ಅಂಗಡಿ ಪಂಪಾಪತಿ, ಡೊಂಬಳ ಮಲ್ಲಿಕಾರ್ಜುನ, ಕೊಟ್ರೇಶ್‌, ಮತ್ತಿತರರು ಇದ್ದರು.