ಗ್ಯಾರಂಟಿ ಇಲ್ಲದ ಕಾಂಗ್ರೆಸ್‌ ಸರ್ಕಾರ ಪಾಪರ್‌: ಕೆ.ಎಸ್.ಈಶ್ವರಪ್ಪ ಲೇವಡಿ

| Published : Feb 20 2024, 01:50 AM IST

ಗ್ಯಾರಂಟಿ ಇಲ್ಲದ ಕಾಂಗ್ರೆಸ್‌ ಸರ್ಕಾರ ಪಾಪರ್‌: ಕೆ.ಎಸ್.ಈಶ್ವರಪ್ಪ ಲೇವಡಿ
Share this Article
  • FB
  • TW
  • Linkdin
  • Email

ಸಾರಾಂಶ

ನುಡಿದಂತೆ ನಡೆದ ಸರ್ಕಾರವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ನಿರುದ್ಯೋಗಿ ಪದವೀಧರರಿಗೆ ಈವರೆಗೆ ಒಂದೇ ಒಂದು ರು. ನೀಡದೇ ಅವಮಾನಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಗೃಹಲಕ್ಷ್ಮಿಯಡಿ ಮಹಿಳೆಯರಿಗೆ 2 ಸಾವಿರ ರು. ಹಣ ನೀಡುತ್ತಿಲ್ಲ. ಸಮರ್ಪಕ ವಿದ್ಯುತ್ ಪೂರೈಸದ ಸಿಎಂ ಸಿದ್ದರಾಮಯ್ಯ ನಮ್ಮದು ನುಡಿದಂತೆ ನಡೆದ ಸರ್ಕಾರವೆಂದು ಯಾಕೆ ಹೇಳಿಕೊಳ್ಳುತ್ತೀರಿ?

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ನವರು ಹೇಳುವಂತೆ ರಾಜ್ಯದಲ್ಲಿ ಯಾವುದೇ ಗ್ಯಾರಂಟಿಗಳ ಅಲೆಯೇ ಇಲ್ಲ, ಇದೇ ಗ್ಯಾರಂಟಿಗಳಿಂದಲೇ ರಾಜ್ಯ ಸರ್ಕಾರ ಪಾಪರ್ ಆಗಿದೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಇಲ್ಲದ ಕಾಂಗ್ರೆಸ್ ಪಕ್ಷದವರು ತಾವೇ ಘೋಷಿಸಿದಂತೆ ಗ್ಯಾರಂಟಿ ನೀಡದಿರುವುದರಿಂದಲೇ ಲೋಕಸಭೆ ಚುನಾವಣೆಯಲ್ಲಿ ಸೋಲುತ್ತಾರೆ ಎಂದರು.

ನುಡಿದಂತೆ ನಡೆದ ಸರ್ಕಾರವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ನಿರುದ್ಯೋಗಿ ಪದವೀಧರರಿಗೆ ಈವರೆಗೆ ಒಂದೇ ಒಂದು ರು. ನೀಡದೇ ಅವಮಾನಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಗೃಹಲಕ್ಷ್ಮಿಯಡಿ ಮಹಿಳೆಯರಿಗೆ 2 ಸಾವಿರ ರು. ಹಣ ನೀಡುತ್ತಿಲ್ಲ. ಸಮರ್ಪಕ ವಿದ್ಯುತ್ ಪೂರೈಸದ ಸಿಎಂ ಸಿದ್ದರಾಮಯ್ಯ ನಮ್ಮದು ನುಡಿದಂತೆ ನಡೆದ ಸರ್ಕಾರವೆಂದು ಯಾಕೆ ಹೇಳಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

ನಾವು ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಶ್ರೀರಾಮನ ಗ್ಯಾರಂಟಿಯೊಂದಿಗೆ ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೂ ಹೋಗುತ್ತೇವೆ. ನಮ್ಮದು ಮೋದಿ, ರಾಮನ ಗ್ಯಾರಂಟಿ. ಮೋದಿ ಗ್ಯಾರಂಟಿ ರಾಜ್ಯದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಬಡವರು, ಮಹಿಳೆಯರು, ಹಿಂದುಳಿದವರು ಇತರರಿಗೆ ಏನನ್ನು ನಮ್ಮ ಸರ್ಕಾರ ಕೊಟ್ಟಿದೆಯೋ ಅದನ್ನೇ ನಾವು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಶಿವಮೊಗ್ಗ ಬಿಜೆಪಿ ಮುಖಂಡ ಎಸ್.ಈ.ಕಾಂತೇಶ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಹಿರಿಯ ಮುಖಂಡ ರಾದ ಎಂ.ಪಿ.ಕೃಷ್ಣಮೂರ್ತಿ ಪವಾರ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐರಣಿ ಅಣ್ಣೇಶ, ಅನಿಲಕುಮಾರ ನಾಯ್ಕ, ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ ಕೊಳೇನಹಳ್ಳಿ, ಜಿಲ್ಲಾ ವಕ್ತಾರರಾದ ಡಿ.ಎಸ್.ಶಿವಶಂಕರ, ಎಲ್.ಎನ್‌.ಕಲ್ಲೇಶ, ಕೆ.ಬಿ.ಕೊಟ್ರೇಶ, ಎಚ್.ಎಸ್.ಲಿಂಗರಾಜ, ಎಚ್.ವಿ.ವಿಶ್ವಾಸ್ ಇತರರಿದ್ದರು.

ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಭರವಸೆಯಿಂದ ಪಾಪರ್ ಆದ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಒಂದು ಸ್ಥಾನ ಗೆದ್ದಿದ್ದರು. ಈ ಬಾರಿ ಬಿಜೆಪಿ-ಜೆಡಿಎಸ್‌ ಮೈತ್ರಿಯ ಎನ್‌ಡಿಎ 28 ಸ್ಥಾನಗಳ ಗೆಲ್ಲುವ ಪ್ರಯತ್ನ ಮಾಡಲಿದೆ.

ಕೆ.ಎಸ್.ಈಶ್ವರಪ್ಪ, ಬಿಜೆಪಿ ಹಿರಿಯ ನಾಯಕಕುವೆಂಪು, ನಮ್ಮ ಸಂಸ್ಕೃತಿಗೆ ಅವಮಾನ: ಈಶ್ವರಪ್ಪ

ದಾವಣಗೆರೆ: ವಿಜಯಪುರ ಜಿಲ್ಲೆಯ ಕೆಲ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಕವಿ ಕುವೆಂಪುರ ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ.. ಎಂಬುದರ ಬದಲಿಗೆ ಧೈರ್ಯವಾಗಿ ಪ್ರಶ್ನಿಸು ಎಂಬುದಾಗಿ ಬರೆಸಿದ್ದು, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ, ಅನೇಕ ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದು, ಇತರೆ ವಿಷಯಗಳನ್ನು ಧೈರ್ಯವಾಗಿ ಪ್ರಶ್ನಿಸಬೇಕಾ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಶಾಲೆಗಳಲ್ಲಿ ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ ಎಂಬುದು ನಮ್ಮ ಸಂಸ್ಕೃತಿಯ ಪ್ರತೀಕ. ಅದನ್ನೂ ಕಾಂಗ್ರೆಸ್ಸಿನವರಿಗೆ ತಡೆದುಕೊಳ್ಳುವುದಕ್ಕೆ ಆಗಲ್ಲವೆಂದರೆ ಹೇಗೆ? ಏನು ಹೇಳಬೇಕು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದನ್ನು ಸ್ವಾಗತಿಸಿದರೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಒದ್ದಾಡುತ್ತಾ ವಿರೋಧ ಮಾಡಿದ್ದಾರೆ. ಸಮಾಜ ಕಲ್ಯಾಣ ಸಚಿವರಿಗೆ ಈ ವಿಚಾರದ ಬಗ್ಗೆ ಗೊತ್ತೇ ಇಲ್ಲ. ರಾಷ್ಟ್ರಕವಿ ಕುವೆಂಪುರಿಗೆ ಹಾಗೂ ನಮ್ಮ ಸಂಸ್ಕೃತಿಗೆ ಅಪಮಾನ ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ರಾಹುಲ್ ಗಾಂಧಿ ದೇಶದ ಜನತೆ ಕ್ಷಮೆ ಕೋರಲಿ

ಅಯೋಧ್ಯೆಯ ಶ್ರೀರಾಮ ಮಂದಿರ ದ್ಘಾಟನೆಗೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೆ ಆಹ್ವಾನಿಸಿಲ್ಲವೆಂಬ ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಕ್ಷಣವೇ ದೇಶ ವಾಸಿಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಾಕೀತು ಮಾಡಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಒಳಗೊಂಡಂತೆ ಅನೇಕ ಸ್ವಾಮೀಜಿಗಳ ಒಳಗೊಂಡಂತೆ ಅನೇಕರು ಭಾಗವಹಿಸಿದ್ದರು ಎನ್ನುವ ಮೂಲಕ ರಾಹುಲ್ ಗಾಂಧಿ ಟೀಕೆಗೆ ತಿರುಗೇಟು ನೀಡಿದರು. ಯಾರಿಗಾದರೂ ಮೇಲ್ನೋಟಕ್ಕೆ ಪರಿಶಿಷ್ಟ ಜಾತಿ, ಹಿಂದುಳಿದವರು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೀಗೆ ಕಾಂಗ್ರೆಸ್ಸಿನವರು ಒಂದು ಸುಳ್ಳನ್ನೇ ನೂರು ಸಲ ಹೇಳುವ ಮೂಲಕ ಸತ್ಯ ಮಾಡಲು ಹೊರಟವರು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.