ಅತೀ ಹೆಚ್ಚು ಸಂವಿಧಾನ ತಿದ್ದುಪಡಿ ಮಾಡಿದ್ದೇ ಕಾಂಗ್ರೆಸ್‌: ಸಿ.ಟಿ.ರವಿ

| Published : May 03 2024, 01:01 AM IST

ಅತೀ ಹೆಚ್ಚು ಸಂವಿಧಾನ ತಿದ್ದುಪಡಿ ಮಾಡಿದ್ದೇ ಕಾಂಗ್ರೆಸ್‌: ಸಿ.ಟಿ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಯಾ ಕೂಟಕ್ಕೆ ನೀತಿಯೂ ಇಲ್ಲ, ನೇತೃತ್ವವೂ ಇಲ್ಲ ಎಂದು ವ್ಯಂಗ್ಯವಾಡಿದ ಮಾಜಿ ಸಚಿವ ಸಿಟಿ ರವಿ

ಕನ್ನಡಪ್ರಭ ವಾರ್ತೆ ಬೆಳಗಾವಿಅತೀ ಹೆಚ್ಚು ಸಂವಿಧಾನ ತಿದ್ದುಪಡಿ ಮಾಡಿದ್ದೇ ಕಾಂಗ್ರೆಸ್‌. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದಾಗಿ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಚುನಾವಣೆಯಲ್ಲಿ ಸೋಲಿನ ಹತಾಶೆ ಕಾಡುತ್ತಿದೆ. ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಅಪಪ್ರಚಾರ ಮತ್ತು ಅಪನಂಬಿಕೆಯನ್ನು ಚುನಾವಣಾ ಪ್ರಚಾರದ ವಿಷಯ ಮಾಡಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ವಿರುದ್ಧ ಅಪಪ್ರಚಾರ ಮುಂದುವರೆಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷದ ಕಾಗವಾಡ ಕ್ಷೇತ್ರದ ಶಾಸಕರು ಮೋದಿ ಸತ್ತರೆ ಬೇರ್‍ಯಾರೂ ಪ್ರಧಾನಿ ಆಗಲ್ವೇನೋ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಲೀಡ್ ಕೊಟ್ಟರೇ ಕರೆಂಟ್ ಕಟ್ ಮಾಡುತ್ತೇವೆ ಎಂದು ಹೇಳಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ. ಇದು ಇವರ ಮೊಹಬ್ಬತ್ ಕೀ ದೂಕಾನ್‍ನ ಪ್ರೀತಿಯ ಮಾತುಗಳು ಎಂದು ವ್ಯಂಗ್ಯ ಮಾಡಿದರು.

ಕರ್ನಾಟಕದಲ್ಲಿ ಮೊದಲನೇ ಹಂತದ ಚುನಾವಣೆ ನಡೆದು 2ನೇ ಹಂತದ ಚುನಾವಣೆಯು ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿದೆ. ಬಿಜೆಪಿ 3 ವಿಷಯಗಳನ್ನು ಜನರ ಮುಂದಿಟ್ಟು ಮತಯಾಚಿಸುತ್ತಿದೆ. ನಮ್ಮ ಪಕ್ಷದ ನೀತಿ, ಪಕ್ಷದ ನೇತೃತ್ವ ಮತ್ತು ನಮ್ಮ ಬದ್ಧತೆಯನ್ನು ತಿಳಿಸುತ್ತಿದ್ದೇವೆ. ದೇಶ ಮೊದಲು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ನಮ್ಮ ನೀತಿ. ಬಡವರಿಗೆ ಬಲ ಕೊಡುವುದು ನಮ್ಮ ನೀತಿ. ಸಂವಿಧಾನದ ಆಶಯವನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸಿ ಕಟ್ಟಕಡೆಯ ಮನುಷ್ಯನಿಗೆ ತಲುಪಿಸುವುದು ನಮ್ಮ ನೀತಿ ಎಂದು ವಿವರಿಸಿದರು.

ಭಾರತ ಮತ್ತು ಭಾರತೀಯರನ್ನು ಸುರಕ್ಷಿತವಾಗಿಡುವುದು, ನಂ.1 ಆರ್ಥಿಕ ಶಕ್ತಿಯಾಗಿ ಭಾರತವನ್ನು ರೂಪಿಸುವುದು ನಮ್ಮ ನೀತಿ. ಇದಕ್ಕೆ ಅನುಗುಣವಾಗಿಯೇ ನಾವು ನಮ್ಮ ಸಾಧನೆ ತೋರಿಸಿದ್ದೇವೆ. 10 ವರ್ಷಗಳಲ್ಲಿ ತೆರಿಗೆ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯನ್ನು ತಂದಿದ್ದು, ಅದರ ಪರಿಣಾಮವಾಗಿ ಜಿಡಿಪಿ ಬೆಳವಣಿಗೆ ಮೂಲಕ ಭಾರತವು ವಿಶ್ವದ 5ನೇ ಶಕ್ತಿಯಾಗಿ ಬದಲಾಗಿದೆ. ದುರ್ಬಲ ಆರ್ಥಿಕ ಶಕ್ತಿಯಾಗಿದ್ದ ಭಾರತವು ಈ ಹಂತಕ್ಕೆ ಏರಿದೆ. ದೇಶಕ್ಕೆ ಹಾನಿ ಮಾಡುವ ಸಂಗತಿಗಳನ್ನು ಅಗತ್ಯ ತಿದ್ದುಪಡಿ ಮೂಲಕ ಬದಲಿಸಿದ್ದೇವೆ. ದೇಶದ ಭದ್ರತೆ, ಸಮಗ್ರತೆಗೆ ಹಾನಿ ಮಾಡುವ 370ನೇ ವಿಧಿ ರದ್ದು ಪಡಿಸಿ ಏಕ್ ಭಾರತ್ ಶ್ರೇಷ್ಠ ಭಾರತ್ ಘೋಷವಾಕ್ಯದೊಂದಿಗೆ ಭಾರತವನ್ನು ಆಡಳಿತಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಸಂವಿಧಾನದ ಅಡಿಯಲ್ಲಿ ಒಂದುಗೂಡಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ದೊಡ್ಡ ಸುಧಾರಣೆ ಮಾಡಲಾಗಿದೆ. ಗತಿಶಕ್ತಿ ಯೋಜನೆಯಡಿ ₹3 ಲಕ್ಷ ಕೋಟಿಯನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಿ ಭವಿಷ್ಯದ ಭಾರತ ಜಾಗತಿಕ ಸವಾಲನ್ನು ಎದುರಿಸಲು ಸಜ್ಜಾಗಿ ಮಾಡಿದ್ದೇವೆ. ಜಗತ್ತು ಮೆಚ್ಚಿರುವ ನೇತೃತ್ವ ನಮ್ಮ ನೇತೃತ್ವ. ಜಾಗತಿಕ ನಾಯಕರು ನಮ್ಮ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯದ ಅಧ್ಯಕ್ಷರು ಮೋದಿ ಈಸ್ ದಿ ಬಾಸ್ ಎಂದು ಸಾರ್ವಜನಿಕ ಸಭೆಯಲ್ಲೇ ಹೇಳಿದ್ದಾರೆ ಎಂದರು.

ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ್, ಎಂ.ಬಿ.ಜಿರಲಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾದ ಶರತ್ ಹೆಗಡೆ, ಎಫ್‌.ಎಸ್‌.ಸಿದ್ದನಗೌಡರ, ಬೆಳಗಾವಿ ಜಿಲ್ಲಾ ಮಾಧ್ಯಮ ಸಂಚಾಲಕ ಹನುಮಂತ ಕೊಂಗಾಲೆ ಉಪಸ್ಥಿತರಿದ್ದರು.

-------------

ಕಾಂಗ್ರೆಸ್‌ಗೆ ನಾಯಕ ಯಾರು? ನಿಮ್ಮ ಇಂಡಿಯಾ ಒಕ್ಕೂಟದ ನಾಯಕ ಯಾರು?. ನಿಮಗೆ ನೀತಿಯೂ ಇಲ್ಲ, ನೇತೃತ್ವವೂ ಇಲ್ಲ. ನಿಮ್ಮ ನೀತಿ ಏನೆಂಬುವುದನ್ನು ನಿಮ್ಮ ಮಾತುಗಳೇ ಸಾಬೀತುಪಡಿಸುತ್ತವೆ. ರಾಹುಲ್ ಗಾಂಧಿಯವರು ಮೊಹಬ್ಬತ್ ಕೆ ದೂಕಾನ್‍ನ ಮಾತನಾಡುತ್ತಿದ್ದರು. ಅವರ ಈ ದೂಕಾನ್‍ನಲ್ಲಿ ನಫರತ್‍ನ ಬಿಕರಿ ಆಗುತ್ತಿದೆ.

-ಸಿ.ಟಿ.ರವಿ, ಬಿಜೆಪಿ ನಾಯಕ.