ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ದಕ್ಷಿಣ ಕನ್ನಡ ಜಿಲ್ಲಾ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸಾವಿರ ಮತಗಳನ್ನು ಗಳಿಸಬೇಕಾಗಿದೆ. ಗಣಿತದ ಪ್ರಕಾರ ನಮಗೆ ಮತಗಳ ಸಂಖ್ಯೆ ಕಮ್ಮಿ ಇರಬಹುದು, ಆದರೆ ಕಾಂಗ್ರೆಸ್ ಪಕ್ಷಕ್ಕೆ ಆತ್ಮವಿಶ್ವಾಸ ಬಲವಾಗಿದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ, ಎಂಎಲ್‌ಸಿ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.ಅವರು ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜು ಪೂಜಾರಿ ಸೂಕ್ತ ಅಭ್ಯರ್ಥಿಯಾಗಿದ್ದು, ಇದು ಪಕ್ಷಾತೀತವಾದ ಚುನಾವಣೆ. ಪಕ್ಷದ ಚಿನ್ನೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಪಕ್ಷದ ಒಲವು ಇದ್ದವರಿಂದಲೂ ನಮಗೆ ಮತ ಸಿಗುತ್ತದೆ. ಬಿಜೆಪಿ ಅಭ್ಯರ್ಥಿ ಸ್ಥಳೀಯ ಸಂಸ್ಥೆಗಳ ಅನುಭವ ಹೊಂದಿಲ್ಲ, ಕಾಂಗ್ರೆಸ್ ಅಭ್ಯರ್ಥಿ ಸ್ಥಳೀಯ ಸಂಸ್ಥೆಗಳ ಸಂಪೂರ್ಣ ಚಿತ್ರಣ ಅರಿತಿದ್ದಾರೆ. ಸಹಕಾರಿ ರಂಗದಲ್ಲಿ ಎರಡು ಜಿಲ್ಲೆಗಳಲ್ಲಿ ಛಾಪು ಮೂಡಿಸಿದ್ದಾರೆ ಎಂದರು.ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಸುಮಾರು 900 ಮತ ಸಿಕ್ಕಿತ್ತು. ಬಿಜೆಪಿ ಶಾಸಕರಿಗೆ ಕೆಲಸ ಮಾಡಿ ಕೊಡುವ ಶಕ್ತಿ ಇಲ್ಲ ಅನ್ನುವ ಅಭಿಪ್ರಾಯ ಇದ್ದು, ವಿಧಾನ ಪರಿಷತ್‌ನಲ್ಲಿ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಬೇಕು. ಬಿಜೆಪಿ ಶಾಸಕರು ನಮ್ಮ ಸರ್ಕಾರ ಇಲ್ಲ ಎನ್ನುತ್ತಾರೆ. ವಿಧಾನಪರಿಷತ್ ಪ್ರಾತಿನಿಧ್ಯ ದೊರಕಿದರೆ ಜಿಲ್ಲೆಗೆ ಅನುಕೂಲವಾಗಲಿದೆ, ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ನಮ್ಮ ಅಭ್ಯರ್ಥಿ ಕೆಲಸಗಾರ, ಪಂಚಾಯಿತಿ ಸದಸ್ಯರಿಗೂ ಅದೇ ಅಭಿಪ್ರಾಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ರಾಜು ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.