ಸಾರಾಂಶ
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಸುರಪುರ ನಗರಕ್ಕೆ ಆಗಮಿಸಿ, ಅಗಲಿದ ಶಾಸಕ ನಾಯಕರಿಗೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸುರಪುರ ಶಾಸಕ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ದಿ. ರಾಜಾ ವೆಂಕಟಪ್ಪ ನಾಯಕ ಅವರ ಪರಿವಾರ ನಮ್ಮ ಜೊತೆಯಲ್ಲಿ ಅವಿನಾಭಾವ ಸಂಬಂಧ ಹೊಂದಿದ್ದರು, ಪಕ್ಷ ನಿಷ್ಠೆಗೆ ಇನ್ನೊಂದು ಹೆಸರು ಅವರು. ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಕ್ಷ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೊಡೋ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆಯವರು, ಅದನ್ನು ಮೊಟಕುಗೊಳಿಸಿ ಸುರಪುರ ನಗರಕ್ಕೆ ಆಗಮಿಸಿ, ಅಗಲಿದ ಶಾಸಕ ನಾಯಕರಿಗೆ ಅಂತಿಮ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಸುರಪುರ ಮತಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಎಲ್ಲಾ ಸಮಾಜಗಳಲ್ಲಿ ಶಾಂತಿ, ಸಾಮರಸ್ಯ ಮೂಡಿಸಿ, ಕಾಪಾಡಿಕೊಂಡು ಬರುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದಂತ ಶಿಸ್ತಿನ ಸಿಪಾಯಿ ಎಂದು ತಿಳಿಸಿದರು.4ನೇ ಬಾರಿಗೆ ಶಾಸಕರಾಗಿದ್ದ ಅವರು, ತಮಗೆ ಸಚಿವ ಸ್ಥಾನ ಸಿಗದಿದ್ದರೂ ನಿರಾಶರಾಗದೆ ಸದಾ ಕ್ರಿಯಾಶೀಲರಾಗಿ ಕ್ಷೇತ್ರದಲ್ಲಿ ಇನ್ನೂ ಆಗಬೇಕಾದ ಮಹತ್ವ ಯೋಜನೆಗಳು ಹಾಗೂ ಕಾಮಗಾರಿಗಳ ಬಗ್ಗೆ ನಮ್ಮ ಬಳಿ ಚರ್ಚಿಸಿ, ಪರಿಹಾರ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದರು ಎಂದು ಭಾವುಕರಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, ಪ್ರಿಯಾಂಕ್ ಖರ್ಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.