ಹುಬ್ಬಳ್ಳಿ:
ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಇಂದು ರಾಮನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯಯಲ್ಲಿ ನಡೆದ ದೇಣಿಗೆ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಿ ಕಾನೂನು ಪ್ರಕಾರ ತನಿಖೆ ನಡೆಸಲಾಗುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರಾಮಮಂದಿರ ಕಟ್ಟಿ ಲೂಟಿ ಮಾಡಿದ್ದಾರೆಂದು ಅವರನ್ನು ಮಹಮ್ಮದ್ ಘಜ್ನಿಗೆ ಹೋಲಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿಕೆಗೆ ತಿರುಗೇಟು ನೀಡಿದ ಜೋಶಿ, ಅವರಿಗೆ ಸಾಮಾನ್ಯ ಜ್ಞಾನವಿಲ್ಲವಿಲ್ಲ. ಮಹಮ್ಮದ್ ಘಜ್ನಿ ಹಾಗೂ ಬಾಬರ್ ಪೂಜೆ ಮಾಡಿದವರು ರಾಮಮಂದಿರದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಹರಿಪ್ರಸಾದ್ ಅವರು ಈ ಹಿಂದೆ ಮಂತ್ರಿ ಸ್ಥಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಡ್ಡಿ ಬಗ್ಗೆ ಮಾತನಾಡಿದ್ದರು ಎಂದು ಆರೋಪಿಸಿದರು.ಭಾಷೆಯ ಹಿಡಿತವಿರಲಿ:
ರಾಮಮಂದಿರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಬಳಸುತ್ತಿರುವ ಭಾಷೆ ಸಾರ್ವಜನಿಕ ಜೀವನದ ಸಂಸ್ಕೃತಿಗೆ ವಿರುದ್ಧವಾಗಿದೆ. ಸಾರ್ವಜನಿಕವಾಗಿ ಮಾತನಾಡುವಾಗ ಕನಿಷ್ಠ ಶಿಷ್ಟಾಚಾರ ಪಾಲಿಸಬೇಕು. ಆದರೆ, ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಗಮನ ಸೆಳೆಯಲು ಹೇಳಿಕೆ:
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಈ ವಿಚಾರ ವಿಷಯಾಂತರ ಮಾಡಲು ಕಾಂಗ್ರೆಸ್ ನಾಯಕರು ಆರ್‌ಎಸ್ಎಸ್ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಸಂಘ ಪರಿವಾರದವರು ಈ ಬಗ್ಗೆ ಉತ್ತರಿಸಿದ್ದಾರೆ. ಹಿಂದೆ ನಾಲ್ಕೈದು ಬಾರಿ ನಿಷೇಧ ಮಾಡಿದಾಗ ನ್ಯಾಯಾಲಯವು ಛೀಮಾರಿ ಹಾಕಿದೆ. ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಲು ಕಾಂಗ್ರೆಸ್ಸಿಗರು ಸಂಘದ ಕುರಿತು ಹೇಳಿಕೆ ನೀಡುತ್ತಿದ್ದಾರೆ ಎಂದರು.ವಿರೋಧಿಸುವುದೇ ಕೆಲಸ:
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಎಸ್ಐಆರ್ ವಿರೋಧಿಸುತ್ತಿದೆ. ದೇಶದಲ್ಲೆಡೆ ಕಾಂಗ್ರೆಸ್ ಸೋಲು ಅನುಭವಿಸುತ್ತಿರುವುದರಿಂದ ಈ ರೀತಿ ಇಲ್ಲದ ಸಲ್ಲದ ಹೇಳಿಕೆ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತದೆ ಎಂದ ಅವರು, ಕೇರಳ ಹಾಗೂ ಜಮ್ಮು ಕಾಶ್ಮೀರದಲ್ಲಿ ಎಸ್ಐಆರ್ ಸ್ವಾಗತಿಸಲಾಗಿದೆ. ತಮಗೆ ಅನುಕೂಲವಾದಲ್ಲಿ ಸ್ವಾಗತ, ಆಗದ ಕಡೆ ವಿರೋಧ ಮಾಡುವುದೇ ಕಾಂಗ್ರೆಸ್ ಕೆಲಸ ಎಂದು ಜೋಶಿ ವ್ಯಂಗ್ಯವಾಡಿದರು.ಶಾಸಕ ಸಂತೋಷ ಲಾಡ್‌ಗೆ ಬಿಜೆಪಿ ನಾಯಕರನ್ನು ಟೀಕಿಸುವುದೇ ಕೆಲಸ. ಪ್ರಧಾನಿ ಹಾಗೂ ನನ್ನನ್ನು ಟೀಕಿಸಿದರೂ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದ ಅವರು ಯಾವ ಸರ್ಕಾರ ಎಷ್ಟು ಅಭಿವೃದ್ಧಿ ಮಾಡಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ದೇಶದಲ್ಲಿ ಅಭಿವೃದ್ಧಿ ಮಾಡಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಭ್ರಷ್ಟಾಚಾರ ಮಾಡಿದವರು, ಪ್ರಜಾಪ್ರಭುತ್ವ ಕತ್ತು ಹಿಸುಕಿದವರು ದೇಶದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದರು.