ದೇಶಾದ್ಯಂತ ಆಸ್ಪತ್ರೆ, ವಿಮಾನ ನಿಲ್ದಾಣ, ರಸ್ತೆ, ಸೇತುವೆ, ಕ್ರೀಡಾಂಗಣ ಸೇರಿದಂತೆ 400ಕ್ಕೂ ಹೆಚ್ಚು ಯೋಜನೆಗಳಿಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರನ್ನಿಡಲಾಗಿದೆ. ಇಂಥ ಕಾಂಗ್ರೆಸ್ಸಿಗೆ ಮಹಾತ್ಮ ಗಾಂಧೀಜಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹರಿಹಾಯ್ದರು.

- ಬಿಜೆಪಿಯಿಂದ ವಿಬಿ- ಜಿ ರಾಮ್ ಜಿ ಯೋಜನೆ ವಿಚಾರ ಸಂಕಿರಣದಲ್ಲಿ ಈರಣ್ಣ ಕಡಾಡಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶಾದ್ಯಂತ ಆಸ್ಪತ್ರೆ, ವಿಮಾನ ನಿಲ್ದಾಣ, ರಸ್ತೆ, ಸೇತುವೆ, ಕ್ರೀಡಾಂಗಣ ಸೇರಿದಂತೆ 400ಕ್ಕೂ ಹೆಚ್ಚು ಯೋಜನೆಗಳಿಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರನ್ನಿಡಲಾಗಿದೆ. ಇಂಥ ಕಾಂಗ್ರೆಸ್ಸಿಗೆ ಮಹಾತ್ಮ ಗಾಂಧೀಜಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹರಿಹಾಯ್ದರು.

ನಗರದ ವಿನೋಬ ನಗರದ ದಾ-ಹ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ವಿಬಿ- ಜಿ ರಾಮ್ ಜಿ ಯೋಜನೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ಸಿಗರಿಗೆ ಭ್ರಷ್ಟಾಚಾರ, ಲೂಟಿ, ಹಗರಣ ಮಾಡಲು ಉದ್ಯೋಗ ಖಾತ್ರಿ ಯೋಜನೆಯು ಚಿನ್ನದ ಮೊಟ್ಟೆ ಇಡುವ ಕೋಳಿಯಂತಿತ್ತು. ಹಾಗಾಗಿಯೇ ಕೇಂದ್ರದ ಹೊಸ ನಡೆಗೆ ವಿರೋಧಿಸುತ್ತಿದ್ದಾರೆ. ವಿಬಿ ಜಿ ರಾಮ್ ಜಿ ಕಾಯ್ದೆ ಈಗಿನದ್ದೇನೂ ಅಲ್ಲ. ಕಾಲಕ್ಕೆ ಅನುಗುಣವಾಗಿ ಹೆಸರನ್ನೇ ಬದಲಿಸಲಾಗಿದೆ. ಕಾಂಗ್ರೆಸ್‌ನವರು ಕಾನೂನು ಜಾರಿಗೆ ತಂದಿರಲಿಲ್ಲ. ಅದನ್ನು ನಾವು ಕಾನೂನು ಮಾಡಿದ್ದೇವೆ. 2047ರ ವಿಕಸಿತ ಭಾರತದ ದೂರದೃಷ್ಟಿಯೊಂದಿಗೆ ಕೆಲವೊಂದಿಷ್ಟು ಮಾರ್ಪಾಡು ಮಾಡಿ, ಯೋಜನೆ ರೂಪಿಸಲಾಗಿದೆ. ಕಾಂಗ್ರೆಸ್ 2009ರ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ನರೇಗಾ ಯೋಜನೆಗೆ ಮಹಾತ್ಮ ಗಾಂಧಿಗೆ ಹೆಸರನ್ನು ಸೇರಿಸಿ, ಬದಲಿಸಿತ್ತು ಎಂದು ದೂರಿದರು.

ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಗ್ರಾಪಂ ಮಟ್ಟಕ್ಕೆ ನಾವೆಲ್ಲರೂ ಹೋಗಿ ಗ್ರಾಪಂ, ತಾಪಂ, ಜಿಪಂ ಸದಸ್ಯರು, ಮುಖಂಡರ ಬಳಿ ಹೋಗಿ ವಿಬಿ ಜಿ ರಾಮ್‌ ಜಿ ಯೋಜನೆ ಬಗ್ಗೆ ತಿಳಿಸುವ ಕೆಲಸ ಮಾಡಬೇಕು. ಈ ಮೂಲಕ ನಮ್ಮ ಕೇಂದ್ರ ಸರ್ಕಾರವನ್ನು ಭದ್ರಪಡಿಸಬೇಕು. 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳು ಹಾಗೂ 2029ರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಜಿಲ್ಲೆಯ 8ಕ್ಕೆ ಎಂಟೂ ವಿಧಾನಸಭಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ದಾವಣಗೆರೆ ಲೋಕಸಭಾ ಕ್ಷೇತ್ರವನ್ನೂ ಗೆಲ್ಲುತ್ತೇವೆ. ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲೂ ಗೆಲ್ಲುತ್ತೇವೆ. ಮೊದಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ, ಎಂ.ಬಸವರಾಜ ನಾಯ್ಕ, ಹಿರಿಯ ಮುಖಂಡರಾದ ಯಶವಂತ ರಾವ್ ಜಾಧವ್, ಟಿ.ಶ್ರೀನಿವಾಸ ದಾಸಕರಿಯಪ್ಪ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ತುಮ್ಕೋಸ್ ಅಧ್ಯಕ್ಷ ಬಿ.ಕೆ.ಶಿವಕುಮಾರ, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ಕೆ.ಎಂ.ಸುರೇಶ, ದೇವರಮನಿ ಶಿವಕುಮಾರ, ಮುರುಗೇಶ, ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಎಚ್.ಪಿ.ವಿಶ್ವಾಸ, ರಾಜನಹಳ್ಳಿ ಶಿವಕುಮಾರ, ಅಣ್ಣೇಶ, ಅನಿಲಕುಮಾರ್, ಎಚ್.ಸಿ.ಜಯಮ್ಮ ಇತರರು ಇದ್ದರು.

- - -

(ಟಾಪ್‌ ಕೋಟ್‌) ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಶೇ.40ರಷ್ಟು ಅನುದಾನ ಭರಿಸಲಾಗದ ಕಾಂಗ್ರೆಸ್ ಸರ್ಕಾರ ವಿನಾಕಾರಣ ಅಪಪ್ರಚಾರದಲ್ಲಿ ತೊಡಗಿದೆ. ಬಿಜೆಪಿಯಿಂದ ಗಾಂಧೀಜಿಗೆ ಅಪಮಾನವಾಗಿಲ್ಲ. ನಾಟಕೀಯವಾಗಿ ಗಾಂಧೀಜಿ ಹೆಸರು ಬಳಸುತ್ತಿರುವ ಕಾಂಗ್ರೆಸಿಗರೇ ನಕಲಿಗಳು. ಇಂತಹವರು ಬಿಜೆಪಿ ಏನೇ ಮಾಡಿದರೂ ವಿರೋಧಿಸುವ ಕೆಲಸ ಮಾಡುತ್ತಿದೆಯಷ್ಟೇ.

- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.

- - -

-29ಕೆಡಿವಿಜಿ17.ಜೆಪಿಜಿ:

ವಿಚಾರ ಸಂಕಿರಣವನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿದರು. ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ. ಎನ್.ರಾಜಶೇಖರ ನಾಗಪ್ಪ, ಡಾ.ಶಿವಯೋಗಿಸ್ವಾಮಿ, ರೇಣುಕಾಚಾರ್ಯ ಇತರರು ಇದ್ದರು.