ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸಿಗಿಲ್ಲ

| Published : Apr 15 2024, 01:30 AM IST

ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸಿಗಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ‌ ಕಳೆದುಕೊಂಡಿದ್ದಾರೆ

ಗದಗ: ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಆರಂಭವಾಗಿದೆ. ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ನವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಭಾನುವಾರ ಗದಗನಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಈ ಚುನಾವಣೆ ಮುಂದಿನ ಜನಾಂಗಕ್ಕೆ ನಡೆಯುತ್ತಿದೆ. ಮೋದಿ ಅವರು ಮುತ್ಸದ್ದಿ ನಾಯಕರು. ಅವರು ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾರೆ. ಹಿಂದಿನ ರಾಜಕಾರಣಿಗಳು ಯುವಕರು, ಬಡವರ ಬಗ್ಗೆ ಯೋಚನೆ ಮಾಡಲಿಲ್ಲ. ಕೇವಲ ಕೆಲವು ಜನರ ಓಲೈಕೆಗೆ ತುಷ್ಟೀಕರಣ ರಾಜಕಾರಣ ಮಾಡಿ ತಮ್ಮ ರಾಜಕಾರಣ ಮುಂದೆ ಮಾಡಿಕೊಂಡು ದೇಶವನ್ನು ಹಿಂದೆ ತಳ್ಳಿದ್ದಾರೆ ಎಂದರು.

ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರ ಎಚ್.ಸಿ. ಮಹದೇವಪ್ಪ ಸಂವಿಧಾನದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು, ಕಾಂಗ್ರೆಸ್‌ನವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ‌ ಕಳೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದರು. ಎಷ್ಟೋ ಜನರ ಕಗ್ಗೊಲೆಯಾಯಿತು. ಆರ್ಟಿಕಲ್ 42ಕ್ಕೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ, ಸಂವಿಧಾನಕ್ಕೆ ಮರ್ಯಾದೆ ಕೊಡದವರು ಕಾಂಗ್ರೆಸ್‌ನವರು ಈಗ ಸಂವಿಧಾನ ಬದಲಾಯಿಸುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮೋದಿ ಅವರು ಪ್ರಧಾನಿಯಾಗಿ ಸಂಸತ್ತು ನನಗೆ ದೇಗುಲ ಇದ್ದ ಹಾಗೆ, ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ ಎಂದು ಹೇಳಿದರು. ಯಾವುದೇ ಪಕ್ಷ ಎಷ್ಟೇ ಬಹುಮತ ಪಡೆದರೂ ಸಂವಿಧಾನದ ಮೂಲ ತತ್ವ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ 400ಕ್ಕೂ ಹೆಚ್ಚು ಸ್ಥಾನ ಪಡೆದಿತ್ತು. ಶಾಬಾನು ಪ್ರಕರಣದಲ್ಲಿ ಗಂಡನಿಂದ ವಿಚ್ಛೇದನ ಹೊಂದಿದ ಅವಳಿಗೆ ಜೀವನಾಂಶ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ತಪ್ಪಿಸಲು ಅಧಿಕಾರ ದುರುಪಯೋಗ ಪಡೆಸಿಕೊಂಡು ಸಂವಿಧಾನ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು.

ಭಾರತದಲ್ಲಿ ಬಡತನ ಈಗಲೂ ಇರಲು ಕಾರಣ ಕಾಂಗ್ರೆಸ್. 1972ರಲ್ಲಿ ಕಾಂಗ್ರೆಸ್ ಗರೀಬಿ ಹಠಾವೊ ಘೋಷಣೆ ಮಾಡಿತು. ಆದರೂ, ಇನ್ನೂ ಬಡತನ ಇದೆ ಅಂದರೆ ಅದಕ್ಕೆ ಕಾಂಗ್ರೆಸ್ ನೇರ ಕಾರಣ ಎಂದರು.

ಮೋದಿ ಅವರು ಭಯೋತ್ಪಾದನೆ ಮುಕ್ತ ಮಾಡಿದ್ದಾರೆ. ಭಯೋತ್ಪಾದಕರ ಕೇಂದ್ರಗಳಿಗೆ ತೆರಳಿ ಧ್ವಂಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರಿಗೆ ಈಗ ಭಯ ಹುಟ್ಟಿದೆ. ನರೇಂದ್ರ ಮೋದಿ ಅವರ ಅಂತಹ ಪ್ರಬಲ ನಾಯಕರು. ಕಾಂಗ್ರೆಸ್‌ನಲ್ಲಿ ಪ್ರಧಾನಿಯಾಗಲು ಸಮರ್ಥ ನಾಯಕರಿಲ್ಲ. ಖರ್ಗೆ ಮಾಡಲು ರಾಜ್ಯ ಕಾಂಗ್ರೆಸ್ ‌ನಾಯಕರಿಗೆ ಮನಸ್ಸಿಲ್ಲ. ರಾಹುಲ್ ಗಾಂಧಿ ತಯಾರಿಲ್ಲ. ಮದುವೆ ಆಗಲು ಮದುಮಗ ಸಿದ್ಧನಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನವರು ಮತ್ತೆ ಗ್ಯಾರಂಟಿ ಬಗ್ಗೆ ಹೇಳುತ್ತಿದ್ದಾರೆ. ಜನರ ಮನೆಗೆ ನೀರು, ಕರೆಂಟ್, ರಸ್ತೆ, ರೈತರ ಹೊಲಕ್ಕೆ ವಿದ್ಯುತ್ ಇಲ್ಲದಿದ್ದರೆ ಎಷ್ಟು ದುಡ್ಡು ಕೊಟ್ಟರೂ ಏನು ಪ್ರಯೋಜನ? ಮೋದಿ ಅವರು ದುಡಿಮೆಯ ಬಗ್ಗೆ ಮಾತನಾಡುತ್ತಾರೆ. ತಾವೂ ದುಡಿಯುತ್ತಾರೆ. ಎಲ್ಲರನ್ನೂ ದುಡಿಯುವಂತೆ ಪ್ರೇರೇಪಿಸುತ್ತಿದ್ದಾರೆ ಎಂದರು. ಮಾಜಿ ಸಚಿವ ಕುಮಾರ ಬಂಗಾರಪ್ಪ, ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮುಂತಾದವರು ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ನಾನು ಸಿಎಂ ಆಗಿದ್ದಾಗ ಗದಗದ ಯಲವಿಗಿ ರೈಲ್ವೆ ಯೋಜನೆಗೆ ₹ 600 ಕೋಟಿ ಮೀಸಲಿಟ್ಟಿದ್ದೆ. ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೈಬಿಟ್ಟಿದ್ದಾರೆ. ಗದಗ ನಗರವನ್ನು ಔದ್ಯೋಗಿಕ ಕೇಂದ್ರವನ್ನಾಗಿ ಮಾಡುವ ಕನಸಿದೆ. ಟೆಕ್ಸ್ ಟೈಲ್ ಹಾಗೂ ಫುಡ್ ಪ್ರೊಸೆಸಿಂಗ್ ಉದ್ಯಮಕ್ಕೆ ಹೆಚ್ಚಿ‌ನ ಅವಕಾಶ ಇದೆ. ಸಿಂಗಟಾಲೂರು ಯೋಜನೆ ಮೂಲಕ ರೈತರ ಹೊಲಗಳಿಗೆ ನೀರು ಹರಿಸಿ ನೀರಾವರಿ ಮಾಡಲಾಗುವುದು. ಕೊವಿಡ್‌ನಲ್ಲಿ ಎಲ್ಲ ಜನರ ಜೀವ ಉಳಿಸಿ, ಅನ್ನ ಕೊಟ್ಟು, ನೀರು ಕೊಟ್ಡಿರುವ ನಾಯಕ ಮೋದಿ ಅವರಿಗೆ ಮತ ಹಾಕುವ ಮೂಲಕ ಋಣ ತೀರಿಸುವ ಕೆಲಸ ಪ್ರತಿಯೊಬ್ಬ ಮತದಾರ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.