ಲೋಕಸಭೆ ಚುನಾವಣೆ 25 ವರ್ಷದಿಂದ ಕೂಡ್ಲಿಗಿಯಲ್ಲಿ ಕಾಂಗ್ರೆಸ್‌ಗೆ ಲೀಡ್‌ ಸಿಕ್ಕಿಲ್ಲ

| Published : Apr 01 2024, 12:46 AM IST

ಲೋಕಸಭೆ ಚುನಾವಣೆ 25 ವರ್ಷದಿಂದ ಕೂಡ್ಲಿಗಿಯಲ್ಲಿ ಕಾಂಗ್ರೆಸ್‌ಗೆ ಲೀಡ್‌ ಸಿಕ್ಕಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

15 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿದೆ. ಜನಾನುರಾಗಿ ವೈದ್ಯರಾಗಿರುವ ಎನ್‌.ಟಿ. ಶ್ರೀನಿವಾಸ್‌ ಅಭೂತಪೂರ್ವ ಜಯ ದಾಖಲಿಸಿದ್ದಾರೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಕಳೆದ 25 ವರ್ಷಗಳಿಂದಲೂ ಕೂಡ್ಲಿಗಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸುತ್ತ ಬಂದಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಇಲ್ಲಿ ಲೀಡ್‌ ಲಭಿಸಲೇ ಇಲ್ಲ. ಕಾಂಗ್ರೆಸ್‌ ಅಭ್ಯರ್ಥಿಯೇ ಗೆದ್ದಿದ್ದರೂ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಗೇ ಲೀಡ್‌.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಧಿಕ ಲೀಡ್‌ನಿಂದ ಗೆದ್ದಿದ್ದ ಶಾಸಕ ಡಾ. ಎನ್‌.ಟಿ.ಶ್ರೀನಿವಾಸ್‌ ಅವರಿಗೆ ಕಳೆದ 25 ವರ್ಷಗಳ ಹಿನ್ನಡೆಯನ್ನು ಮುರಿದು ಪಕ್ಷದ ಅಭ್ಯರ್ಥಿ ತುಕಾರಾಮ ಅವರಿಗೆ ಲೀಡ್‌ ಕೊಡಿಸುವ ಸವಾಲು ಎದುರಾಗಿದೆ.

15 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿದೆ. ಜನಾನುರಾಗಿ ವೈದ್ಯರಾಗಿರುವ ಎನ್‌.ಟಿ. ಶ್ರೀನಿವಾಸ್‌ ಅಭೂತಪೂರ್ವ ಜಯ ದಾಖಲಿಸಿದ್ದಾರೆ. 1999 ರಿಂದಲೇ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೂ ಲೋಕಸಭೆಯಲ್ಲಿ ಜನಮತ ಬಿಜೆಪಿ ಪರವಾಗಿರುತ್ತಿತ್ತು. ಈಗ ಲೋಕಸಭೆ ಚುನಾವಣೆಯಲ್ಲೂ ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಕೊಡಿಸುವ ಹೊಣೆಗಾರಿಕೆ ಶಾಸಕ ಶ್ರೀನಿವಾಸ್‌ ಅವರ ಮೇಲೆ ಇದೆ. ಈ ಹೊಣೆಗಾರಿಕೆಯನ್ನು ಸ್ಥಳೀಯ ಶಾಸಕರು ಯಾವ ರೀತಿ ನಿಭಾಯಿಸುತ್ತಾರೆ ಎಂಬ ಕುತೂಹಲ, ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಉಗ್ರಪ್ಪ ಸಂಸದರಾಗಿರುವುದನ್ನು ಬಿಟ್ಟರೆ ಕರುಣಾಕರ ರೆಡ್ಡಿ, ಜೆ.ಶಾಂತಾ, ಶ್ರೀರಾಮುಲು, ದೇವೇಂದ್ರಪ್ಪ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದವರು. ಉಪಚುನಾವಣೆಯಲ್ಲಿ ವಿ.ಎಸ್. ಉಗ್ರಪ್ಪ ಗೆದ್ದರೂ ಆ ಸಮಯದಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ 11 ಸಾವಿರಕ್ಕೂ ಹೆಚ್ಚು ಮತಗಳು ಬಿಜೆಪಿ ಅಭ್ಯರ್ಥಿಗೆ ಲೀಡ್ ಬಂದಿತ್ತು ಎಂಬುದು ವಿಶೇಷ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೂಡ್ಲಿಗಿ ಕ್ಷೇತ್ರದಿಂದ 25 ಸಾವಿರ ಲೀಡ್ ಸಿಕ್ಕಿತ್ತು. 25 ವರ್ಷಗಳ ನಂತರ ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ಡಾ.ಶೀನಿವಾಸ್ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಈಗ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಲೀಡ್ ತೋರಿಸುವ ಅನಿವಾರ್ಯತೆ ಎದುರಾಗಿದೆ.

ಶಾಸಕ ಶ್ರೀನಿವಾಸ್‌ ಅವರಿಗೂ ಇದು ಗೊತ್ತು. ಅದಕ್ಕಾಗಿಯೇ ಅವರು ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಅಭ್ಯರ್ಥಿ ಪರವಾಗಿ ಮತದಾರರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಜನತೆಯ ಮನವೊಲಿಸುವುದು ಹಳ್ಳಿಗಳಲ್ಲಿ ಸಣ್ಣಪುಟ್ಟ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದನ್ನು ಶಾಸಕರು ಮಾಡುತ್ತಿದ್ದಾರೆ. ಸಣ್ಣಪುಟ್ಟ ಸಮುದಾಯಗಳ ಮುಖಂಡರನ್ನು ಕರೆಸಿ ಅವರಿಗೆ ನಾನಿದ್ದೇನೆ, ನೀವು ನಮ್ಮ ಜೊತೆ ಇರಿ ಎಂದು ಹೇಳುತ್ತಿದ್ದಾರೆ.

ಲೋಕಸಭೆ ಚುನಾವಣೆಯಲ್ಲೂ ಮತದಾರರು ಅತೀ ಹೆಚ್ಚು ಅಂತರದಿಂದ ಪಕ್ಷದ ಅಭ್ಯರ್ಥಿಗೆ ಲೀಡ್ ನೀಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಗೆಲ್ಲುವ ವಿಶ್ವಾಸ ಇದೆ ಎನ್ನುತ್ತಾರೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.

25 ವರ್ಷಗಳಿಂದ ಬಳ್ಳಾರಿ ಲೋಕಸಭೆ ಚುನಾವಣೆಗಳಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಅತೀಹೆಚ್ಚು ಲೀಡ್ ಬಂದಿದೆ. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಲೀಡ್ ಆಗಲಿದೆ. ಶ್ರೀರಾಮುಲು ಸಂಸದರಾಗುತ್ತಾರೆ ಎನ್ನುತ್ತಾರೆ ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಬಣವಿಕಲ್ಲು ರಾಜು.