ಕಾಂಗ್ರೆಸ್‌ನಿಂದ ಹಿಂದೂಗಳ ಭಾವನೆಗೆ ಧಕ್ಕೆ

| Published : Sep 14 2025, 01:04 AM IST

ಕಾಂಗ್ರೆಸ್‌ನಿಂದ ಹಿಂದೂಗಳ ಭಾವನೆಗೆ ಧಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ನಿರ್ವಹಿಸುತ್ತಿದ್ದು, ಗಣೇಶನ ಪ್ರತಿಮೆಯ ಮೇಲೆ ಕಲ್ಲು ತೂರಾಟ ಮಾಡಿದವರು, ಉಗಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು ಹಿಂದೂಗಳನ್ನು ಕೆಳದರ್ಜೆಯ ಪ್ರಜೆಗಳಂತೆ ನೋಡುತ್ತಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಿಸಬೇಕು, ಈ ಮೂಲಕ ಅಕ್ರಮ ಮತದಾನವನ್ನು ತಡೆಗಟ್ಟಬಹುದಾಗಿದೆ ಎಂದು ಬಿಜೆಪಿ ಮುಖಂಡ ವೇಣುಗೋಪಾಲ್ ನುಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸೇವಾ ಪಾಕ್ಷಿಕ ಮತ್ತು ತಾಲೂಕು ಕಾರ್ಯಗಾರದಲ್ಲಿ ಅವರು ಮಾತನಾಡಿ, ಪ್ರಧಾನಿ ನರೇಂದ್ರಮೋದಿ ದಿನದ ೧೮ ಗಂಟೆ ಕೆಲಸ ನಿರ್ವಹಿಸುವುದರ ಮೂಲಕ ದೇಶವನ್ನು ಉತ್ತುಂಗಕ್ಕೆ ಏರಿಸಲು ಪ್ರಯತ್ನಿಸುತ್ತಿದ್ದು, ದೇಶದ ಉಜ್ವಲ ಭವಿಷ್ಯತ್ತಿಗಾಗಿ ದುಡಿಯುತ್ತಿರುವ ಧೀಮಂತ ನಾಯಕರಾಗಿದ್ದಾರೆ ಎಂದರು.

ಹಿಂದುಗಳ ಭಾವನೆಗೆ ಧಕ್ಕೆ

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ನಿರ್ವಹಿಸುತ್ತಿದ್ದು, ಗಣೇಶನ ಪ್ರತಿಮೆಯ ಮೇಲೆ ಕಲ್ಲು ತೂರಾಟ ಮಾಡಿದವರು, ಉಗಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು ಹಿಂದೂಗಳನ್ನು ಕೆಳದರ್ಜೆಯ ಪ್ರಜೆಗಳಂತೆ ನೋಡುತ್ತಿದೆ. ರಾಜ್ಯದ ಕಾಂಗ್ರೇಸ್ ಸರ್ಕಾರ ದೇಶ ದ್ರೋಹಿಗಳಿಗೆ ಉತ್ತೇಜನ ನೀಡುತ್ತಿದ್ದು, ಗಣೇಶನ ಮೆರವಣಿಗೆಯಲ್ಲಿ ಕಲ್ಲುತೂರಾಟ ಮಾಡುವವರು, ದೇಶದಲ್ಲಿ ಕಿಚ್ಚು ಅಚ್ಚುವವರ ಪರವಾಗಿ ಕೆಲಸ ನಿರ್ವಹಿಸುತ್ತಿದ್ದು ದೇಶವನ್ನು ಒಡೆಯುವ ಸಂಘಟನೆಗಳಿಗೆ ಬೆಂಬಲವಾಗಿ ನಿಲ್ಲುವುದರ ಮೂಲಕ ಮುಸ್ಲಿಂರ ತುಷ್ಠಿಕರಣಕ್ಕೆ ಮುಂದಾಗಿದೆಯೆಂದರು.

ಹಿಂದೂ ಧರ್ಮ, ಸಂಸ್ಕೃತಿಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕ್ರಿಶ್ಚಿಯನ್ನರು, ಮುಸಲ್ಮಾನರು ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುವ ಕೆಲಸಕ್ಕೆ ಕಾಂಗ್ರೆಸ್‌ ಬೆಂಬಲವಾಗಿ ನಿಂತಿದೆ. ಹಿಂದೂಗಳಿಗೆ ಹಬ್ಬ ಹರಿದಿನಗಳನ್ನು ಆಚರಿಸಲು ಹಲವು ಷರತ್ತುಗಳನ್ನು ವಿಧಿಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಕಾಂಗ್ರೇಸ್ ಪಕ್ಷ ಮಾಡುತ್ತಿದೆಯೆಂದರು.

ಕ್ರಿಶ್ಚಿಯನ್‌ ಧರ್ಮಕ್ಕೆ ಉತ್ತೇಜನ

ಕ್ರಿಶ್ಚಿಯನ್‌ ಧರ್ಮಕ್ಕೆ ಉತ್ತೇಜಿಸಲು ೪೭ ಹೊಸ ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸಿದ್ದು ಈಗ ಜಾತಿಗಣತಿ ಮಾಡಲು ಮುಂದಾಗಿದೆ. ಹಲವು ಮುಸಲ್ಮಾನರು ರಾಜ್ಯದ ಹಲವೆಡೆ ಮತದಾರರ ಗುರುತಿನ ಚೀಟಿ ಹೊಂದಿದ್ದು ಹೆಚ್ಚಿನ ಸಂಖ್ಯೆಯ ಜನಸಂಖ್ಯೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಮುಂದಾಗಿರುವುದು ದುರದುಷ್ಟಕರವೆಂದರು.

ದೇಶದ ಉಳಿವಿಗಾಗಿ ಬಿಜೆಪಿ ಸದಾ ಮುಂದಾಗಿದ್ದು ಹಿಂದು ಧರ್ಮ, ಹಿಂದುತ್ವ, ಸಂಸ್ಕೃತಿ, ಆಚಾರ-ವಿಚಾರ, ಧರ್ಮಪಾಲನೆಯಲ್ಲಿ ಸದಾ ತೊಡಗಿಸಿಕೊಂಡಿದ್ದು ಪ್ರತಿಯೊಬ್ಬ ಹಿಂದೂವಿನ ರಕ್ಷಣೆಗೆ ಪಕ್ಷ ಕಟಿಬದ್ಧವಾಗಿದೆ. ಸಾಂಸ್ಕೃತಿಕ ಸಂಘಟನೆ, ಧಾರ್ಮಿಕ ಸ್ಥಳಗಳ ರಕ್ಷಣೆ ಮತ್ತು ಅವುಗಳನ್ನು ಉಳಿಸಿ ಬೆಳೆಸುವಲ್ಲೂ ಪ್ರಮುಖ ಪಾತ್ರವಹಿಸಿದ ಏಕೈಕ ಪಕ್ಷ ಬಿಜೆಪಿ ಎಂದು ನುಡಿದರು.

17ರಂದು ಮೋದಿ ಹುಟ್ಟುಹಬ್ಬ

ಸೆ೧೭ ರಂದು ಪ್ರಧಾನಿ ನರೇಂದ್ರಮೋದಿರ ಹುಟ್ಟ ಹಬ್ಬದ ಹಿನ್ನೆಲೆಯಲ್ಲಿ ಹಾಗೂ ಅಕ್ಟೋಬರ್‌ ೨ರಂದು ಗಾಂಧೀಜಯಂತಿ ವರೆಗೆ ಬಿಜೆಪಿ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆ. ರಕ್ತದಾನ, ಸ್ವಚ್ಛತಾ ಅಭಿಯಾನ, ಗಿಡನೆಡುವುದು, ಮೋದಿಯವರ ಸಾಕ್ಷ್ಯ ಚಿತ್ರ, ೫ ಕಿ.ಮೀ ಮ್ಯಾರಾಥಾನ್, ದಿವ್ಯಾಂಗರಿಗೆ ಸನ್ಮಾನ ಕಾರ್ಯಕ್ರಮ, ಕ್ರೀಡಾ ಸ್ಪರ್ಧೆ, ಚಿತ್ರಕಲೆ, ಕ್ರೀಡಾಪ್ರಚಾರ, ಪಂಡಿತ್ ದೀನ್ ದಯಾಳ್ ಉಪೋದ್ಯಾಯರ ಚಿಂತನೆ ಇತ್ಯಾದಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಈ ೧೫ ದಿನಗಳ ಅವಧಿಯಲ್ಲಿ ಬೂತ್ ಮಟ್ಟದಿಂದ ಕೈಗೊಳ್ಳಲಾಗುವುದು ಎಂದರು.

ಪಕ್ಷದ ಜಿಲ್ಲಾ ಸಂಚಾಲಕ ಸುರೇಂದ್ರಗೌಡ ಮಾತನಾಡಿ, ಸನಾತನ, ಹಿಂದುತ್ವ, ಹಿಂದೂ ರಕ್ಷಣೆ ಆಚಾರ ವಿಚಾರ, ಹಿಂದೂ ಧಾರ್ಮಿಕ ಆಚರಣೆಗಳು ಹಳ್ಳಿಹಳ್ಳಿಯಲ್ಲೂ ಬೇರೂರಿದ್ದು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು ಕಲ್ಪಿಸುವ ದೂರದೃಷ್ಟಿ ಹೊಂದಿರುವ ಏಕೈಕ ಪಕ್ಷ ಬಿಜೆಪಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಚಾಲಕ ಲಕ್ಷ್ಮೀನಾರಾಯಣ ಗುಪ್ತಾ, ನಗರ ಘಟಕ ಅಧ್ಯಕ್ಷ ಗೋವಿಂದರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜಣ್ಣ, ಜಿಲ್ಲಾ ಸಂಚಾಲಕ ಮಹೇಶ್ ಬೈ, ನಿಕಟಪೂರ್ವ ಅಧ್ಯಕ್ಷ ಶಿವಾರೆಡ್ಡಿ, ಕೆ.ಎಂ.ರಾಜಶೇಖರ್‌ರೆಡ್ಡಿ, ಗೋಕುಲ್ ಶ್ರೀನಿವಾಸ್, ಗಾಜಲ ಶಿವ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ ಸುರೇಶ್, ಮಣಿಕಂಠ, ಪಾತೇಪಲ್ಲಿ ಶಿವಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.