ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಹೇರಿದ್ದೇ ಕಾಂಗ್ರೆಸ್‌

| Published : Jun 26 2024, 12:30 AM IST / Updated: Jun 26 2024, 12:31 AM IST

ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಹೇರಿದ್ದೇ ಕಾಂಗ್ರೆಸ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಯಬರೇಲಿಯಿಂದ 1971ರಲ್ಲಿ ಇಂದಿರಾ ಗಾಂಧಿ ಗೆದ್ದಿದ್ದು ಅಸಿಂಧು ಎಂದು ಅಲಹಾಬಾದ್‌ ನ್ಯಾಯಾಲಯ ನ್ಯಾಯಾಧೀಶ ಜಗನ್ ಮೋಹನ್ ಶರ್ಮ ತೀರ್ಪು ನೀಡಿದ್ದರು. ತೀರ್ಪಿನ ಹಿನ್ನೆಲೆ ಅಧಿಕಾರ ಉಳಿಸಿಕೊಳ್ಳಲು ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಇದು ನಮ್ಮ ಸಂವಿಧಾನ, ಪ್ರಜಾತಂತ್ರಕ್ಕೆ ಇಟ್ಟಂತಹ ಅತ್ಯಂತ ದೊಡ್ಡ ಕಪ್ಪುಚುಕ್ಕೆಯಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಶಾಸಕ ಅರವಿಂದ ಬೆಲ್ಲದ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

- ಈಗ ಬಾಬುಜೀ, ಅಂಬೇಡ್ಕರ್, ಸಂವಿಧಾನದ ಜಪ: ಹು-ಧಾ ಶಾಸಕ ಅರವಿಂದ ಬೆಲ್ಲದ್‌

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಯಬರೇಲಿಯಿಂದ 1971ರಲ್ಲಿ ಇಂದಿರಾ ಗಾಂಧಿ ಗೆದ್ದಿದ್ದು ಅಸಿಂಧು ಎಂದು ಅಲಹಾಬಾದ್‌ ನ್ಯಾಯಾಲಯ ನ್ಯಾಯಾಧೀಶ ಜಗನ್ ಮೋಹನ್ ಶರ್ಮ ತೀರ್ಪು ನೀಡಿದ್ದರು. ತೀರ್ಪಿನ ಹಿನ್ನೆಲೆ ಅಧಿಕಾರ ಉಳಿಸಿಕೊಳ್ಳಲು ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಇದು ನಮ್ಮ ಸಂವಿಧಾನ, ಪ್ರಜಾತಂತ್ರಕ್ಕೆ ಇಟ್ಟಂತಹ ಅತ್ಯಂತ ದೊಡ್ಡ ಕಪ್ಪುಚುಕ್ಕೆಯಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.

ನಗರದ ದಾ-ಹ ಸಹಕಾರ ಸಮುದಾಯ ಭವನದಲ್ಲಿ ಮಂಗಳವಾರ ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರು ಸಮಿತಿಯಿಂದ "ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ " ವಿಷಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಜಾಪ್ರಭುತ್ವದ ತೇರನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ತಳ್ಳದಂತೆ ಮನವಿ ಮಾಡಿದ್ದರು. ಆದರೆ, ಕಾಂಗ್ರೆಸ್ಸಿಗರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾತಂತ್ರದ ತೇರನ್ನು ಹಿಂದಕ್ಕೆ ಮಾತ್ರವಲ್ಲ, ಪಾತಾಳಕ್ಕೆ ತಳ್ಳಿದ್ದನ್ನೂ ಇತಿಹಾಸ ಮರೆಯುವುದಿಲ್ಲ ಎಂದು ಹೇಳಿದರು.

ಇಂದಿರಾ ಗಾಂಧಿ ನಂತರ ಹಿರಿಯರಾಗಿದ್ದ ಬಾಬು ಜಗಜೀವನರಾಂ ಪ್ರಧಾನಿ ಆಗಬೇಕಿತ್ತು. ಆದರೆ, ಬಾಬುಜೀ ಅವರಿಗೆ ಪ್ರಧಾನಿ ಮಾಡಲು ಸಿದ್ಧರಿಲ್ಲದ ಕಾಂಗ್ರೆಸ್ ತುರ್ತು ಪರಿಸ್ಥಿತಿ ಜಾರಿಗೊಳಿಸಿತು. ಸಂವಿಧಾನಶಿಲ್ಪಿ ಅಂಬೇಡ್ಕರರನ್ನೇ ಎರಡು ಸಲ ಚುನಾವಣೆಯಲ್ಲಿ ಸೋಲಿಸಿದ, ಅಂಬೇಡ್ಕರ್ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ತುಂಡು ಜಾಗವನ್ನು ಸಹ ನೀಡದ ಕಾಂಗ್ರೆಸ್ ಪಕ್ಷ ಈಗ ಪದೇಪದೇ ಬಾಬು ಜಗಜೀವನ ರಾಂ, ಅಂಬೇಡ್ಕರ್ ಹೆಸರನ್ನು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

198 ಬಾರಿ ಸಂವಿಧಾನ ತಿದ್ದುಪಡಿ:

ಕಾಂಗ್ರೆಸ್ ಆಳ್ವಿಕೆಯಲ್ಲಿ 198 ಸಲ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಸಂವಿಧಾನದ 39ನೇ ವಿಧಿಗೆ 5.8.1975ರಲ್ಲಿ ತಿದ್ದುಪಡಿ ತರುವ ಮೂಲಕ ಪ್ರಧಾನಿ ಸೇರಿದಂತೆ ಕೆಲವಾರು ನಿಗದಿತ ಹುದ್ದೆಗಳಲ್ಲಿ ಇರುವವರನ್ನು ನ್ಯಾಯಾಲಯಗಳು ವಿಚಾರಣೆ ನಡೆಸುವಂತಹ ಅವಕಾಶವನ್ನೇ ಇಂದಿರಾ ಗಾಂಧಿ ಅಂದು ರದ್ದುಪಡಿಸಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ತಮಗೆ ಅನುಕೂಲ ಆಗುವಂತೆ ತಿದ್ದುಪಡಿ ತಂದರು. 40ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಮಾಧ್ಯಮಗಳ ಮೇಲೂ ನಿರ್ಬಂಧ ವಿಧಿಸಿದ್ದವರು ಇಂದಿರಾ ಗಾಂಧಿ. 42ನೇ ವಿಧಿಗೆ ತಿದ್ದುಪಡಿ ತಂದು, ಸಂವಿಧಾನಕ್ಕೆ ಮಾಡಲಾದ ಯಾವುದೇ ತಿದ್ದುಪಡಿಯನ್ನು ಯಾರೂ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲವೆಂಬ ಕಾನೂನನ್ನೇ ತಂದರು ಎಂದು ಆರೋಪಿಸಿದ ಅವರು, ಮೀಸಾ ಕಾಯ್ದೆಯಡಿ 1.1 ಲಕ್ಷ ಜನರನ್ನು ಬಂಧಿಸಿ, ಜೈಲಿಗೆ ಕಳಿಸುವ ಕೆಲಸವೂ ಕಾಂಗ್ರೆಸ್ ಆಳ್ವಿಕೆಯಲ್ಲಿ ಆಗಿತ್ತು ಎಂದರು.

ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕೋಲಾರ ಕ್ಷೇತ್ರದ ಮಾಜಿ ಸಂಸದ ಎಸ್.ಮುನಿಸ್ವಾಮಿ, ಹೈಕೋರ್ಟ್‌ನ ವಕೀಲ ವಿವೇಕ್ ರೆಡ್ಡಿ, ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಸಮುದಾಯ ಭವನದ ಅಧ್ಯಕ್ಷ ಎನ್.ಮುರುಗೇಶ ಆರಾಧ್ಯ, ಹಿರಿಯ ಮುಖಂಡ ಕೆ.ಬಿ.ಕೊಟ್ರೇಶ, ಕೃಷ್ಣಕುಮಾರ, ಗಂಗಾಧರ ಇತರರು ಇದ್ದರು.

- - - -25ಕೆಡಿವಿಜಿ9:

ಸಂವಾದ ಕಾರ್ಯಕ್ರಮವನ್ನು ಅರವಿಂದ ಬೆಲ್ಲದ್, ಎಸ್.ಮುನಿಸ್ವಾಮಿ, ರವಿನಾರಾಯಣ ಅವರು ಭಾರತ ಮಾತೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದರು.