2023ರ ವಿಧಾನಸಭೆ ಚುನಾವಣೆಯಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯರ ಜನಪ್ರಿಯತೆ ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಈ ಹಿಂದೆ ಅಹಿಂದ ನಾಯಕರನ್ನು ಮುಗಿಸಿದಂತೆ ಈಗಲೂ ನಡೆದುಕೊಂಡಿದೆ. ಸಿದ್ದರಾಮಯ್ಯರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ಕೊಡಿಸಿ, ಅಹಿಂದ ನಾಯಕನಿಗೆ ಅಪಮಾನ ಎಸಗಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಅಹಿಂದ ವರ್ಗವೂ ಸೇರಿದಂತೆ ರಾಜ್ಯದ ಜನರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ದೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಯುವ ನಾಯಕ ರಾಜನಹಳ್ಳಿ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಮುಂಬರುವ ದಿನಗಳಲ್ಲಿ ಅಹಿಂದ, ರಾಜ್ಯದ ಜನರಿಂದ ಕಾಂಗ್ರೆಸ್‌ಗೆ ತಕ್ಕ ಪಾಠ ಗ್ಯಾರಂಟಿ: ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

2023ರ ವಿಧಾನಸಭೆ ಚುನಾವಣೆಯಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯರ ಜನಪ್ರಿಯತೆ ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಈ ಹಿಂದೆ ಅಹಿಂದ ನಾಯಕರನ್ನು ಮುಗಿಸಿದಂತೆ ಈಗಲೂ ನಡೆದುಕೊಂಡಿದೆ. ಸಿದ್ದರಾಮಯ್ಯರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ಕೊಡಿಸಿ, ಅಹಿಂದ ನಾಯಕನಿಗೆ ಅಪಮಾನ ಎಸಗಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಅಹಿಂದ ವರ್ಗವೂ ಸೇರಿದಂತೆ ರಾಜ್ಯದ ಜನರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ದೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಯುವ ನಾಯಕ ರಾಜನಹಳ್ಳಿ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ 2023ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಹೆಚ್ಚು ಚರ್ಚೆಯಾಗಿದೆ. ಕಾಂಗ್ರೆಸ್ ಸ್ವಾರ್ಥ ರಾಜಕೀಯ ಹಾಗೂ ಕುರ್ಚಿ ಕಾದಾಟಕ್ಕೆ ಇಡೀ ಕರ್ನಾಟಕ ಅಭಿವೃದ್ಧಿಯೇ ಇಲ್ಲವಾಗಿದೆ. ಆಡಳಿತ ಸಂಪೂರ್ಣ ಕುಸಿದುಹೋಗಿದೆ. ಗ್ಯಾರಂಟಿಗಳ ನೆಪದಲ್ಲಿ ಮೂಲಸೌಕರ್ಯಕ್ಕೆ ಮೀಸಲಿದ್ದ ಹಣವನ್ನು ಕಸಿದುಕೊಂಡು, ಇಡೀ ರಾಜ್ಯವನ್ನು ಲಕ್ಷ ಕೋಟಿ ಸಾಲದ ಸುಳಿಗೆ ಸಿಲುಕಿಸಲಾಗಿದೆ. ಸಾಲದೇ ಭೀಕರ ವಿತ್ತೀಯ ಕೊರತೆಗೆ ದೂಡಿರುವ ಈ ಸರ್ಕಾರ, ಬೊಕ್ಕಸವನ್ನು ಸಂಪೂರ್ಣ ದಿವಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಗುತ್ತಿಗೆದಾರರ ₹34,000 ಕೋಟಿಗೂ ಅಧಿಕ ಬಿಲ್ ಬಾಕಿ ಉಳಿಸಿಕೊಂಡು 3,140ಕ್ಕೂ ಹೆಚ್ಚು ಕಾಮಗಾರಿಗಳ ನಿಲ್ಲಿಸಿರುವ ಕಾಂಗ್ರೆಸ್ಸಿಗರಿಗೆ ಜನರ ಹಿತಕ್ಕಿಂತ ತಮ್ಮ ಅಧಿಕಾರದ ದರ್ಪವೇ ಮೇಲಾಗಿದೆ. ಅಭಿವೃದ್ಧಿ ಶೂನ್ಯವಾಗಿರುವ ಈ ಆಡಳಿತ ವೈಫಲ್ಯದ ಕರಾಳಯುಗ ಆದಷ್ಟು ಬೇಗ ಅಂತ್ಯಗೊಳ್ಳಲಿ ಎಂದು ಕನ್ನಡಿಗರು ನಿತ್ಯವೂ ಪ್ರಾರ್ಥಿಸುತ್ತಿದ್ದಾರೆ. 10 ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಪೊಳ್ಳು ಭರವಸೆ ನೀಡಿ, ಅಧಿಕಾರಕ್ಕೆ ಬಂದ ಬಳಿಕ ಅಕ್ಕಿಯನ್ನೂ ಕೊಡದೇ, ಹಣವನ್ನೂ ನೀಡದೇ ನಯವಂಚಕತನ ಮೆರೆದ ಕಾಂಗ್ರೆಸ್ ಪಕ್ಷದ ಅವನತಿ ಶುರುವಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯದ ವಿವಿಧೆಡೆ ಸರ್ವರ್ ಸಮಸ್ಯೆ ಉಂಟಾಗಿದ್ದು, ಕೋಟ್ಯಂತರ ಬಡಕುಟುಂಬಗಳಿಗೆ ಈ ಬಾರಿ ಮೋದಿ ಸರ್ಕಾರ ನೀಡುವ ಅಕ್ಕಿಯು ತಿಂಗಳಾಂತ್ಯವಾದರೂ ಅವರ ಮನೆ ತಲುಪಿಲ್ಲ. ರಾಜ್ಯದಲ್ಲಿ ಇರುವ ಪಡಿತರ ಕಾರ್ಡ್‌ದಾರರಿಗೆ ಅಕ್ಕಿ ನೀಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ ತೊಲಗಿದರಷ್ಟೇ ಒಳಿತಾಗಲಿದೆ ಎಂದು ರಾಜನಹಳ್ಳಿ ಶಿವಕುಮಾರ್ ಹೇಳಿಕೆಯಲ್ಲಿ ದೂರಿದ್ದಾರೆ.

- - -

(ಬಾಕ್ಸ್‌) * ಅಹಿಂದ ಕೆಂಗಣ್ಣಿಗೆ ಗುರಿ ಇತಿಹಾಸ ನೋಡಿದರೆ ಎಸ್.ಬಂಗಾರಪ್ಪ, ಡಿ.ದೇವರಾಜ ಅರಸು, ಎಸ್.ಆರ್.ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ಜನಪ್ರಿಯತೆ ಸಹಿಸದೇ ಕಾಂಗ್ರೆಸ್ ತನ್ನ ಕುತಂತ್ರ ಬುದ್ಧಿ ತೋರಿಸಿತ್ತು. ಈಗ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದ ಅಧಿಕಾರದಿಂದ ಇಳಿಸಿ, ಅಹಿಂದ ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತಕ್ಕ ಬೆಲೆ ತೆರಲಿದೆ ಎಂದು ಶಿವಕುಮಾರ್‌ ಹೇಳಿದ್ದಾರೆ.

- - -

-30ಕೆಡಿವಿಜಿ31: ರಾಜನಹಳ್ಳಿ ಶಿವಕುಮಾರ್