ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿದ್ದು, 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ಏನೆಲ್ಲಾ ಯತ್ನ ನಡೆಸಬೇಕೆಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ ಹಾಗೂ ಅಭಿವೃದ್ಧಿ ಶೂನ್ಯವಾಗಿರುವುದರಿಂದ ಇದರ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ನಿಷ್ಕ್ರಿಯತೆ ಜೊತೆಗೆ ಭ್ರಷ್ಟಾಚಾರದ ಸರ್ಕಾರವಾಗಿದೆ. ಸುಪಾರಿ ಕಿಲ್ಲರ್ ಸರ್ಕಾರವಾಗಿದ್ದು, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಮಹಿಳೆಯರಿಗೆ ನೀಡುವ ಹಣದಲ್ಲಿ ವಂಚನೆ, ಗುತ್ತಿಗೆ ನೀಡಿಕೆಯಲ್ಲಿ ಶೇ.60 ಕಮಿಷನ್, ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಹೀಗಾಗಿ ಅನೇಕ ರೈತರದ್ದು ಸಾವಿನ ಮನೆಗಳಾಗಿ ಪರಿವರ್ತನೆಯಾಗಿದ್ದರ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದರು.
ಯುವಕರಿಗೆ ಉದ್ಯೋಗ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸಾವಿರ ದಿನಗಳಾದರೂ ಅಭಿವೃದ್ಧಿಯಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಹಣ ನೀಡಿದ್ದರೂ ಕೂಡ ಟೆಂಡರ್ ಕರೆಯದೆ ಇರುವುದರಿಂದ ಹಣ ಬಳಕೆಯಾಗುತ್ತಿಲ್ಲ. ಇದರ ಬಗ್ಗೆಯೂ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.ಬೆಂಗಳೂರು ಕಸದ ನಗರವಾಗಿದ್ದು, ಸ್ವಚ್ಛ ಮಾಡುವಂತೆ ಧ್ವನಿ ಎತ್ತುವ ಬಿಜೆಪಿ ಶಾಸಕರ ಮನೆ ಮುಂದೆಯೇ ಕಸ ಸುರಿಯುವ ಧಮ್ಕಿ ಹಾಕಲಾಗುತ್ತಿದೆ. ಕಸದ ರಾಶಿಗೆ ಯಾವುದೇ ಪರಿಹಾರವಿಲ್ಲ. ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ದುರಂಕಾರದಿಂದ ಉತ್ತರ ನೀಡುತ್ತಿದ್ದಾರೆ. ಇದರ ವಿರುದ್ಧವೂ ಹೋರಾಟ ನಡೆಸಲಾಗುತ್ತದೆ ಎಂದರು.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ನೀಡಬೇಕಾದ 42 ಸಾವಿರ ಕೋಟಿ ರು. ಅನುದಾನವನ್ನು ನಿಲ್ಲಿಸಿ ಬೇರೆ ಯೋಜನೆಗಳಿಗೆ ಬಳಸಿಕೊಂಡು ಅನ್ಯಾಯ ಮಾಡಲಾಗಿದೆ. ಇದಕ್ಕಾಗಿ ಕಾನೂನು ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ ಎಂದು ದೂರಿದರು.
ಮೋದಿ ಸರ್ಕಾರ ಪ್ರತಿಯೊಬ್ಬರಿಗೂ ಸೌಲಭ್ಯ ನೀಡಲು ಮುಂದಾಗಿದೆ. ವಂದೆ ಮಾತರಂ ಗೀತೆಗೆ 150 ವರ್ಷ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಹಾಡುವುದು ಕಡ್ಡಾಯ ಮಾಡಿದರೆ, ಕಾಂಗ್ರೆಸ್ ಇದನ್ನೇ ಬಳಸಿಕೊಂಡು ದೇಶ ತುಂಡು ಮಾಡಲು ಹವಣಿಸುತ್ತಿದೆ. ಈ ಗೀತೆಗೆ ಒಂದು ಸಮುದಾಯದವರು ವಿರೋಧ ಮಾಡುತ್ತಿದ್ದಾರೆ. ಅವರ ಮನಸ್ಥಿತಿ ಏನೆಂದು ಇದರಲ್ಲಿ ಅರ್ಥವಾಗುತ್ತಿದೆ. ಇದರ ಬಗ್ಗೆ ಜನರಿಗೆ ತಿಳಿಸಲಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ಎನ್.ಜೆ. ನಾಗರಾಜ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಎಸ್., ಸಹಪ್ರಮುಖ್ ಮಂಜುನಾಥ ಇದ್ದರು.