ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡುವಲ್ಲಿ ಸಾವಿರಾರು ಹೋರಾಟಗಾರರನ್ನು ಹುಟ್ಟು ಹಾಕಿದೆ. ಆ ಸಾಲಿನಲ್ಲಿ ಮಹಾತ್ಮ ಗಾಂಧಿ ಅಗ್ರಗಣ್ಯರಾಗಿದ್ದರು. ಅವರ ಆದರ್ಶ ಎಲ್ಲರಿಗೂ ಸ್ಫೂರ್ತಿಯಾಗಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದರು.ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅವೇಶನಕ್ಕೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ನಡೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗಾಂಧೀಜಿ ವಿಶ್ವ ಕಂಡಂತಹ ಅತಿದೊಡ್ಡ ನಾಯಕರಾಗಿದ್ದಾರೆ. ಬ್ರಿಟಿಷರ ದಾಸ್ಯದಿಂದ ಸ್ವಾತಂತ್ರ್ಯ ಪಡೆಯಲು ಅವರು ಕಟ್ಟಿದ ಹೋರಾಟ ಲಕ್ಷಾಂತರ ನಾಯಕರನ್ನು ಹುಟ್ಟು ಹಾಕಿತ್ತು ಎಂದು ಅಭಿಪ್ರಾಯಪಟ್ಟರು.
ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದ ಗಾಂಧೀಜಿ ಆದರ್ಶಗಳು ಎಲ್ಲರಿಗೂ ಸ್ಫೂರ್ತಿದಾಯಕವಾಗಿವೆ. ಅವರ ಆದರ್ಶ ಮೈಗೂಡಿಸಿಕೊಂಡಲ್ಲಿ ದೇಶದಲ್ಲಿ ಅಹಿಂಸೆ, ಅಶಾಂತಿ ನಡೆಯದು ಎಂದರು.ಕಾರ್ಯಕ್ರಮದಲ್ಲಿ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಡಾ.ಬಿ. ಯೋಗೇಶ್ ಬಾಬು ಮಾತನಾಡಿ, ಹಿಂಸೆಯ ವಿರುದ್ಧ ವಿಶ್ವದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖರಾಗಿದ್ದರು. ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ನೂರು ವರ್ಷಗಳ ಹಿನ್ನೆಲೆ ಮತ್ತು ಗಾಂಧೀಜಿಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಗಾಂಧಿ ನಡಿಗೆ ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟದ ಸೇನಾನಿಗಳ ಗೌರವಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ತಾಲೂಕು ಆಡಳಿತ ಮುಂಭಾಗದಿಂದ ಆರಂಭವಾದ ಪಾದಯಾತ್ರೆ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡಿತು. ಪಾದಯಾತ್ರೆಯುದ್ದಕ್ಕೂ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಗಾಂಧಿ ಟೋಪಿ ಧರಿಸಿ ಘೋಷಣೆಗಳನ್ನು ಕೂಗುತ್ತಾ ಸಾಗಿ ಗಮನ ಸೆಳೆದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲಿಂವುಲ್ಲಾ, ನಾಗೇಶ್‌ರೆಡ್ಡಿ ಸುಬಾನ್ ಸಾಬ್, ಎಸ್. ಖಾದರ್, ಎಂ. ಅಬ್ದುಲ್ಲಾ, ಜಿ. ಪ್ರಕಾಶ್, ಬಿ.ಟಿ. ನಾಗಭೂಷಣ್, ಪಟೇಲ್ ಪಾಪನಾಯಕ, ಮೂರ್ತಿ, ಕೆರೆಕೊಂಡಾಪುರ ಪರಮೇಶ್, ಪಿ.ಎನ್. ಶ್ರೀನಿವಾಸುಲು, ಪರಮೇಶ್ವರಪ್ಪ, ಓಬಣ್ಣ, ಗೋವಿಂದಪ್ಪ, ತಮ್ಮಣ್ಣ, ಜಿಯಾವುಲ್ಲ, ಯರಜ್ಜನಹಳ್ಳಿ ನಾಗರಾಜ, ತುಮಕೂರಲಹಳ್ಳಿ ತಿಪ್ಪೇಸ್ವಾಮಿ, ಅಬ್ದುಲ್ ಸುಭಾನ್ ಸಾಬ್, ವಿಜಯಕುಮಾರ್, ನಾಗಸಮುದ್ರ ನಜೀರ್, ನಾಯಕನಹಟ್ಟಿ ಕುಮಾರ್, ಕಾಂತಣ್ಣ, ಚೌಳಕೆರೆ ಮೋಹನ್, ಮುದಿಯಪ್ಪ, ರೇಖಲಗೆರೆ ಅಶೋಕ್ ಇದ್ದರು.