ಅಧಿಕಾರ ಸಿಗದೆ ಕಾಂಗ್ರೆಸ್ ಭ್ರಮನಿರಸನ

| Published : Apr 02 2024, 01:00 AM IST

ಸಾರಾಂಶ

ಚನ್ನಮ್ಮನ ಕಿತ್ತೂರು: ಕಳೆದ 10 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಸಿಗದೇ ಕಾಂಗ್ರೆಸ್ ಭ್ರಮನಿರಸನವಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಕಳೆದ 10 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಸಿಗದೇ ಕಾಂಗ್ರೆಸ್ ಭ್ರಮನಿರಸನವಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.

ಪಟ್ಟಣದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಕಚೇರಿಯಲ್ಲಿ ನಡೆದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭಿವೃದ್ಧಿಗೆ ವಿರುದ್ಧವಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಸಹ ಈವರೆಗೂ ಯಾವ ಕ್ಷೇತ್ರಕ್ಕೂ ಈವರೆಗೂ ಅನುದಾನ ನೀಡಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಸೇರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ಮೋದಿಯವರು ದೇಶಕ್ಕೆ ಪ್ರಧಾನ ಸೇವಕರಾಗಿ, ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಕರೋನಾದಂತಹ ಸಂದರ್ಭದಲ್ಲಿ ದೇಶವಾಸಿಗಳಿಗೆ ಉಚಿತ ವ್ಯಾಕ್ಸಿನ್‌ ನೀಡುವ ಜೊತೆಗೆ ಹೊರ ರಾಷ್ಟ್ರಗಳಿಗೂ ವ್ಯಾಕ್ಸಿನ್‌ ನೀಡಿ ಚಿಕಿತ್ಸೆಗೆ ನೀಡಿ ಎಲ್ಲರೂ ಗೌರವಿಸುವಂತೆ ಆಡಳಿತ ನೀಡಿದ್ದು, ಭಾರತವನ್ನು ವಿಶ್ವಗುರುವಾಗಿಸುವತ್ತ ಶ್ರಮವಹಿಸಿದ್ದಾರೆ ಎಂದು ತಿಳಿಸಿದರು.

ಏ.12 ರಂದು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಬೇಕಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 6 ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ನಮಗೆ ಬೆಂಬಲ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಸಮರ್ಥವಾಗಿ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಾದ್ಯಂತ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಅಲ್ಲದೆ 2040ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದ್ದು, ಇದಕ್ಕೆ ಈಗಾಗಲೇ ಮೋದಿಯವರು ಅಡಿಪಾಯ ಹಾಕಿದ್ದಾರೆ. ಹೀಗಾಗಿ. ಮೋದಿಜೀಗೆ ಇನ್ನಷ್ಟು ಶಕ್ತಿ ತುಂಬಲು ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಕೋರಿದರು.

ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕಿದೆ. ಅಂದು ಹೀನ ದೃಷ್ಟಿಯಿಂದ ನೋಡುತ್ತಿದ್ದ ಪರಕೀಯರು ಇಂದು ನಮ್ಮನ್ನು ಗೌರವಿಸುವಂತಾಗಿದೆ. ಇದಕ್ಕೆ ಕಾರಣ ಮೋದಿಯವರು. ಕಾಂಗ್ರೆಸ್‌ ಪಕ್ಷದ್ದು ಒಡೆದಾಳುವ ನೀತಿಯಾಗಿದ್ದು, ಆ ಪಕ್ಷವನ್ನು ನಂಬದೇ ಎಲ್ಲರೂ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಡಾ.ವೆಂಕಟೇಶ ಉಣಕಲ್ಲಕರ, ಜಗದೀಶ ಹಾರುಗೊಪ್ಪ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು.ಬಾಕ್ಸ್...

ನುಣಚಿಕೊಂಡ ಕಾಗೇರಿ

ಸಂಸದ ಅನಂತಕುಮಾರ ಹೆಗಡೆ ನಿಮಗೆ ಬೆಂಬಲ ನೀಡಿದ್ದಾರೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ಅನಂತಕುಮಾರ ಹೆಗಡೆ ಬಳಿ ಮಾತನಾಡಲು ಕಾಲಾವಕಾಶ ಕೇಳಿದ್ದೇನೆ ಎನ್ನುವ ಮೂಲಕ ನುಣಚಿಕೊಂಡರು.ಕೋಟ್‌...ಅತಿಯಾದ ಆತ್ಮವಿಶ್ವಾಸ ಹೊಂದದಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಅತಿಯಾದ ಆತ್ಮವಿಶ್ವಾಸ ಹೊಂದದೆ. ಬೂತ್‌ ಮಟ್ಟದಿಂದ ಎಲ್ಲರೂ ಕಾರ್ಯನಿರ್ವಹಿಸಬೇಕಿದ್ದು, ಎಲ್ಲ ಕಾರ್ಯಕರ್ತರು ಶ್ರಮವಹಿಸಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ದುಡಿಯಬೇಕಿದೆ.ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ.