ಅನುದಾನದ ವಿಚಾರವಾಗಿ ಕಾಂಗ್ರೆಸ್‌ ಬಿಜೆಪಿ ಜಟಾಪಟಿ

| Published : Oct 29 2024, 01:08 AM IST

ಸಾರಾಂಶ

ಗುತ್ತಿಗೆದಾರರಿಗೂ ಹಣ ನೀಡಲು ಸರ್ಕಾರದ ಬಳಿ ಹಣ ಇಲ್ಲದ ಕೆಟ್ಟ ಸ್ಥಿತಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದಾಗ, ಬಿಜೆಪಿ ಸದಸ್ಯರೆಲ್ಲರೂ ಟೇಬಲ್‌ ಬಡಿದರು. ಇದಕ್ಕೆ ಕುಪಿತರಾದ ಕೈ ಸದಸ್ಯರು ಸರ್ಕಾರದ ವಿರುದ್ಧ ಅನವಶ್ಯಕ ಆರೋಪ ಬೇಡ ಎಂದು ಗ್ಯಾರಂಟಿ ಯೋಜನೆಗಳನ್ನು ಕೂಗಿದರು.

ಧಾರವಾಡ:

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ಮಧ್ಯೆ ಕೆಲ ಹೊತ್ತು ಜಟಾಪಟಿ ನಡೆಯಿತು.

ಜಿಐಎಸ್‌ ಸಮೀಕ್ಷೆ ಕುರಿತ ಚರ್ಚೆಯಲ್ಲಿ ವೀರಣ್ಣ ಸವಡಿ ಮಾತನಾಡುತ್ತಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಏಕಾಏಕಿ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ, ಗುತ್ತಿಗೆದಾರರಿಗೂ ಹಣ ನೀಡಲು ಸರ್ಕಾರದ ಬಳಿ ಹಣ ಇಲ್ಲದ ಕೆಟ್ಟ ಸ್ಥಿತಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದಾಗ, ಬಿಜೆಪಿ ಸದಸ್ಯರೆಲ್ಲರೂ ಟೇಬಲ್‌ ಬಡಿದರು. ಇದಕ್ಕೆ ಕುಪಿತರಾದ ಕೈ ಸದಸ್ಯರು ಸರ್ಕಾರದ ವಿರುದ್ಧ ಅನವಶ್ಯಕ ಆರೋಪ ಬೇಡ ಎಂದು ಗ್ಯಾರಂಟಿ ಯೋಜನೆಗಳನ್ನು ಕೂಗಿದರು. ಅದರಲ್ಲೂ ಸುವರ್ಣ ಕಲಂಕುಂಟ್ಲ ಅವರಂತೂ ಗೃಹಲಕ್ಷ್ಮಿಗೆ ಜಯವಾಗಲಿ ಎಂದರು.

ಒಂದು ಹಂತದಲ್ಲಿ ಕೈ ಸದಸ್ಯರು ಮೇಯರ್‌ ಬಳಿ ಹೋಗಿ ಬಿಜೆಪಿ ಸದಸ್ಯರಿಗೆ ಕ್ಷಮೆ ಕೇಳಲು ಆಗ್ರಹಿಸಿದರು. ತೀವ್ರ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಮೇಯರ್ ಅವರು ಸಭೆಗೆ ಐದು ನಿಮಿಷ ಬಿಡುವು ನೀಡುವ ಮೂಲಕ ವಾತಾವರಣವನ್ನು ತಿಳಿಗೊಳಿಸಿದರು. ತದ ನಂತರ ಆರಂಭದಲ್ಲಿ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೇಳಿದ ಘೋಷಣೆಗಳನ್ನು ಕಡತದಿಂದ ತೆಗೆದು ಹಾಕಲಾಗುವುದು ಎಂಬ ಮೇಯರ್ ಭರವಸೆ ಹಿನ್ನೆಲೆಯಲ್ಲಿ ಕೈ ಸದಸ್ಯರು ಪ್ರತಿಭಟನೆ ಕೈ ಬಿಟ್ಟರು.