ಯಾವ ಮುಖ ಇಟ್ಟುಕೊಂಡು ಚೊಂಬಿನ ಜಾಹೀರಾತು ನೀಡಿದಿರಿ?: ಜೆ.ಪಿ. ನಡ್ಡಾ

| Published : Apr 22 2024, 02:05 AM IST / Updated: Apr 22 2024, 09:01 AM IST

ಸಾರಾಂಶ

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂದು ಸುಳ್ಳಿನ ಗುಚ್ಛವನ್ನು ಮುಂದಿಡುತ್ತಿದೆ. ಆದರೆ, ಮೋದಿ ಸರ್ಕಾರ ಕರ್ನಾಟಕಕ್ಕೆ ₹2.93 ಲಕ್ಷ ಕೋಟಿ ನೀಡಿದೆ. ಆದರೂ ನಮಗೆ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ ನಡ್ಡಾ ಹೇಳಿದರು.

ಹುಬ್ಬಳ್ಳಿ: ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ನಾಲ್ಕು ಪಟ್ಟು ಅನುದಾನ ನೀಡಿದರೂ ಯಾವ ಮುಖ ಇಟ್ಟುಕೊಂಡು ಚೊಂಬಿನ ಜಾಹೀರಾತು ನೀಡಿದ್ದೀರಿ? ಕಾಂಗ್ರೆಸ್‌ ಸರ್ಕಾರ ಸುಳ್ಳಿನ ಮಾಹಿತಿ ನೀಡಿ ರಾಜ್ಯದ ಜನರ ಹಾದಿ ತಪ್ಪಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ ನಡ್ಡಾ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದರು.

ಇಲ್ಲಿಯ ಎಂ.ಆರ್. ಸಾಕ್ರೆ ಶಾಲೆಯ ಆವರಣದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂದು ಸುಳ್ಳಿನ ಗುಚ್ಛವನ್ನು ಮುಂದಿಡುತ್ತಿದೆ. ಆದರೆ, ಮೋದಿ ಸರ್ಕಾರ ಕರ್ನಾಟಕಕ್ಕೆ ₹2.93 ಲಕ್ಷ ಕೋಟಿ ನೀಡಿದೆ. ಆದರೂ ನಮಗೆ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ. ಯಾವ ಮುಖ ಇಟ್ಟುಕೊಂಡು ಈ ರೀತಿಯ ಜಾಹೀರಾತು ನೀಡಿದ್ದೀರಿ? ಈ ಹಿಂದಿಗಿಂತ ನಾಲ್ಕು ಪಟ್ಟು ಹೆಚ್ಚು ಮಾಡಿರುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮತ್ತೊಮ್ಮೆ ದೇಶದಲ್ಲಿ ಮೋದಿ ಸರ್ಕಾರವನ್ನು ಗೆಲ್ಲಿಸಬೇಕು ಎಂದರು.

ನಾಚಿಕೆ ಆಗಲ್ಲವೇ?:  ಕರ್ನಾಟಕದಲ್ಲಿ ಎಂತಹ ಸರ್ಕಾರವಿದೆ ತಿಳಿಯುತ್ತಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದಾಗ ಡಿ.ಕೆ. ಶಿವಕುಮಾರ ದೇಶದ್ರೋಹಿ ಪರ ನಿಂತರು. ಅಂತಹ ಘೋಷಣೆಯೇ ಕೂಗಿಲ್ಲ ಎಂದರು. ಡಿ.ಕೆ. ಸುರೇಶ ಭಾರತ ದೇಶವನ್ನು ವಿಭಜಿಸುವ ಹೇಳಿಕೆ ನೀಡಿದರು. ಇಂತಹವರನ್ನು ಪಕ್ಷದಲ್ಲಿ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್‌ ಗಾಂಧಿ ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್ ಪುತ್ರಿ ಕೊಲೆಯಾಗಿದ್ದಾಳೆ. ಇಂತಹ ಘಟನೆಯನ್ನು ಖಂಡನೆ ಮಾಡಲು ಕಾಂಗ್ರೆಸಿಗರಿಗೆ ಆಗುತ್ತಿಲ್ಲ. ಮತ್ತೊಂದು ಕಡೆ ತನಿಖೆಯ ಹಾದಿ ತಪ್ಪಿಸುವ ಕೆಲಸವೂ ಆಗುತ್ತಿದೆ ಎಂದು ಆಕ್ರೋಶ ಪಡಿಸಿದ ಅವರು, ಹನುಮಾನ್ ಚಾಲೀಸಾ ಪಠಿಸುವವರ ಮೇಲೆ ಹಲ್ಲೆಗಳು ಆಗುತ್ತಿವೆ. ತುಷ್ಟೀಕರಣದ ರಾಜಕೀಯ ಮಾಡುವವರು ಕರ್ನಾಟಕದ ಜನತೆಗೆ ಬೇಕಾ? ಇಂತಹವರು ಅಧಿಕಾರಕ್ಕೆ ಬರಬೇಕಾ ಎಂದು ಪ್ರಶ್ನಿಸಿದರು

ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.