ಸಾರಾಂಶ
- ಅಶೋಕ ಟಾಕೀಸ್ ರೈಲ್ವೆ ಗೇಟ್ ಸಮಸ್ಯೆ ಪರಿಹರಿಸಿದ್ದು ಡಾ.ಪ್ರಭಾ ಅಲ್ಲ, ಸಂಸದ ಜಿ.ಎಂ.ಸಿದ್ದೇಶ್ವರ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸೇರಿದಂತೆ ಕಾಂಗ್ರೆಸ್ಸಿಗರು ಹಸಿಹಸಿ ಸುಳ್ಳುಗಳನ್ನ ಹೇಳುತ್ತಾ ದಾವಣಗೆರೆ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಕಿಡಿಕಾರಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಚಿವರಿಗೆ ಪರಿಜ್ಞಾನ ಇರಲಿ. ಬಿಜೆಪಿ ಅಧಿಕಾರದಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿ ಬಗ್ಗೆ ಅವಹೇಳನವಾಗಿ ಮಾತನಾಡುವುದನ್ನು ನಿಲ್ಲಿಸಿ. ರೈಲ್ವೆ ಇಲಾಖೆಯಿಂದ ಪಾದಚಾರಿಗಳ ಸಂಚಾರಕ್ಕೆಂದು ಅಶೋಕ ಚಿತ್ರ ಮಂದಿರ ಎದುರು ಕೆಳಸೇತುವೆ ಮಾಡಿ ತೋರಿಸಲಿ ಎಂದರು.
ಅಶೋಕ ಚಿತ್ರ ಮಂದಿರ ಬಳಿ ಕೆಳಸೇತುವೆ ನಿರ್ಮಾಣಕ್ಕೆ ತಮ್ಮ ಪತ್ನಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅನುದಾನ ಮಂಜೂರು ಮಾಡಿಸಿದ್ದಾರೆಂಬ ಹೇಳಿಕೆ ಹಾಸ್ಯಾಸ್ಪದ. ಜಿಲ್ಲಾ ಕೇಂದ್ರದಲ್ಲಿ ಅಶೋಕ ಚಿತ್ರ ಮಂದಿರ ರೈಲ್ವೆ ಗೇಟ್‌ನ ಸಮಸ್ಯೆ ಪರಿಹಾರಕ್ಕೆ ಆಗಿನ ಸಂಸದ ಡಾ. ಜಿ.ಎಂ. ಸಿದ್ದೇಶ್ವರ 2023ರಲ್ಲಿ ಭೂ ಸ್ವಾಧೀನ ವೆಚ್ಚ ಸೇರಿದಂತೆ ಸುಮಾರು ₹49.26 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. 2023ರಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಏನಾಗಿದ್ದರು? ಸಿದ್ದೇಶ್ವರ ಮಾಡಿಸಿದ್ದ ಕೆಲಸ, ಮಂಜೂರು ಮಾಡಿಸಿದ್ದ ಅನುದಾನವೂ ತಮ್ಮ ಪ್ರಯತ್ನದ ಫಲವೆನ್ನಲು ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕಿಡಿಕಾರಿದರು.ಸದ್ಯ ಅಶೋಕ ಚಿತ್ರ ಮಂದಿರ ಬಳಿ ಎಷ್ಟು ಜಾಗ ಇತ್ತು, ಅದಕ್ಕೆ ಪೂರಕವಾಗಿ ದ್ವಿಚಕ್ರ, ತ್ರಿಚಕ್ರ, ಚಿಕ್ಕ ಕಾರುಗಳ ಸಂಚಾರಕ್ಕೆ ಸಣ್ಣದಾಗಿ ಕೆಳಸೇತುವೆ ನಿರ್ಮಿಸಲಾಗಿದೆ. ಅಲ್ಲಿ ಸ್ಯಾಮ್‌ಸನ್ ಡಿಸ್ಟಿಲರಿ ಬಾಟಲಿ ತುಂಬಿಕೊಂಡು ಲಾರಿ ಸಂಚರಿಸಲು ಮಾಡಿಲ್ಲ. ಕಾಂಗ್ರೆಸ್ಸಿಗರಿಗೆ ಈ ಕೆಳಸೇತುವೆ ಜಿಲೇಬಿ ತರವೋ, ಇನ್ನೊಂದು ರೀತಿಯೋ ಕಾಣಬಹುದು. ಸಿದ್ದೇಶ್ವರ್ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದನ್ನು ನಿಮಗೆ ಸಹಿಸಲಾಗುತ್ತಿಲ್ಲ ಎಂದು ಕುಟುಕಿದರು.
ಭಾರೀ ವಾಹನಗಳ ಸಂಚಾರಕ್ಕೆ 2 ವೆಂಟ್‌ಗಳ ಸೇತುವೆ ನಿರ್ಮಾಣಕ್ಕೆ ಹಾಗೂ ರೈಲ್ವೆ ಹಳಿ ಪಕ್ಕದ ಪರ್ಯಾಯ ರಸ್ತೆ ನಿರ್ಮಾಣಕ್ಕೆ ₹49.26 ಕೋಟಿ ಅನುದಾನ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಇಲಾಖೆಯಿಂದಲೇ ಜಿ.ಎಂ. ಸಿದ್ದೇಶ್ವರ ಬಿಡುಗಡೆ ಮಾಡಿಸಿದ್ದರು. ಅದರ ಪರಿಜ್ಞಾನವೂ ಇಲ್ಲದ ಕಾಂಗ್ರೆಸ್ಸಿಗರು ಯಾವ ಪುರುಷಾರ್ಥಕ್ಕೆ ಅಧಿಕಾರ ದಲ್ಲಿದ್ದಾರೆ? ಈ ಸೇತುವೆ ಬಳಿ ಸಿದ್ದೇಶ್ವರ ಪುತ್ಥಳಿ ನಿಲ್ಲಿಸುವುದಾದರೆ, ಹದಡಿ ಕೆರೆ ಏರಿ ಅಗಲೀಕರಣದಲ್ಲಿ ಕೋಟಿಗಟ್ಟಲೇ ದುಡ್ಡು ಕೊಳ್ಳೆ ಹೊಡೆದು, ಕಳಪೆ ಕಾಮಗಾರಿ ಮಾಡಿ, ಏರಿ ಕುಸಿಯುವಂತೆ ಮಾಡಿದ ನಿಮ್ಮಗಳ ಯಾರ ಪುತ್ಥಳಿ ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.ಟಿವಿ ಸ್ಟೇಷನ್ ಕೆರೆ ಹೂಳೆತ್ತುವುದಾಗಿ ಕೋಟ್ಯಂತರ ರು. ಬೆಲೆಬಾಳುವ ಗ್ರಾವೆಲ್ ಮಣ್ಣನ್ನು ಎಂಬಿಎ ಕಾಲೇಜು ಮೈದಾನದ ಗುಂಡಿ ಮುಚ್ಚಲು ಸರ್ಕಾರದ ಹಣ ಲೂಟಿ ಮಾಡಿದಿರಿ. ಇಂಥ ನಿಮ್ಮ ಸಚಿವರ ಪುತ್ಥಳಿ ನಿಲ್ಲಿಸಬೇಕಾ? ದಾವಣಗೆರೆಯಲ್ಲಿ ನೀವು ಮಾಡಿದ ಪಾಪದ ಫಲ ವಿಮೋಚನೆ ಆಗಬೇಕಾದರೆ ಬಾಪೂಜಿ ವಿದ್ಯಾಸಂಸ್ಥೆ ಕಟ್ಟಿದ ಎಸ್.ಕೊಟ್ರ ಬಸಪ್ಪನವರ ಪುತ್ಥಳಿ ನಿಮ್ಮ ಮನೆ ಮುಂದೆ ಪ್ರತಿಷ್ಟಾಪಿಸಿ. ಅದಕ್ಕೆ ತಗಲುವ ದುಡ್ಡನ್ನು ನಾವು ಕೊಡುತ್ತೇವೆ ಎಂದು ಯಶವಂತ ರಾವ್ ಜಾಧವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ, ಆರನೇ ಕಲ್ಲು ವಿಜಯಕುಮಾರ, ನೀಲಗುಂದ ರಾಜು, ಶಿವನಗೌಡ ಪಾಟೀಲ, ಸೋಗಿ ಗುರುಶಾಂತ, ಟಿಂಕರ್ ಮಂಜಣ್ಣ, ಗೋವಿಂದರಾಜ, ಜಿ.ಕಿಶೋರಕುಮಾರ, ಬಿಸಲೇರಿ ಕುಮಾರ, ಗ್ರಾಸ್ ಕುಮಾರ ಇತರರು ಇದ್ದರು.- - -
(ಬಾಕ್ಸ್) * ಪಾದಚಾರಿ ಮಾರ್ಗಕ್ಕೆ ₹4 ಕೋಟಿ ಕೊಡಿ ಕೆಐಎಡಿಬಿಯಿಂದ 1.5 ಎಕರೆ ಜಮೀನನ್ನು ಅನಾಮಧೇಯ ವ್ಯಕ್ತಿ ಹೆಸರಿಗೆ ಲೂಟಿ ಹೊಡೆದು, ನೋಂದಣಿಯಾದ ಜಮೀನನ್ನು ರದ್ದುಪಡಿಸಿ, ಪಾಲಿಕೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಮಾಡಿಸಲಿ. ಮಂಡಿಪೇಟೆ ವ್ಯಾಪಾರಸ್ಥರು ಅಶೋಕ ಗೇಟ್ ಬಳಿ ಪಾದಚಾರಿ ಸಂಚಾರಕ್ಕೆ ಕೆಳಸೇತುವೆ ಸೌಲಭ್ಯ ಕೇಳುತ್ತಿದ್ದಾರೆ. ಇದಕ್ಕಾಗಿ ಜಿ.ಎಂ.ಸಿದ್ದೇಶ್ವರ ₹4 ಕೋಟಿ ಅಂದಾಜು ವೆಚ್ಚದ ಪಟ್ಟಿ ಮಾಡಿಸಿದ್ದು, ನಿಮ್ಮರಾಜ್ಯ ಸರ್ಕಾರದಿಂದ ಹಣ ಮಂಜೂರು ಮಾಡಿಸಿ, ಕಾಮಗಾರಿ ಮಾಡಿ ತೋರಿಸಲಿ ನೋಡೋಣ.- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ
- - --18ಕೆಡಿವಿಜಿ1:
ದಾವಣಗೆರೆಯಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.