ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
2026ರಲ್ಲಿ ಕೇಂದ್ರ ಸರ್ಕಾರ ಅಧಿಕೃತವಾಗಿ ಜಾತಿ ಗಣತಿ ಮಾಡಲು ಮುಂದಾಗಿರುವುದನ್ನು ಕಾಂಗ್ರೆಸ್ ಸಹಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.ಸತತವಾಗಿ 50 ವರ್ಷಕ್ಕೂ ಹೆಚ್ಚು ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಎಂದೂ ಜಾತಿ ಗಣತಿಗೆ ಮುಂದಾಗಲೇ ಇಲ್ಲ. ಕಾಂಗ್ರೆಸ್ ನೇತೃತ್ವದಲ್ಲಿ 1951 ರಿಂದ 2011ರವರೆಗೆ ಆರು ಬಾರಿ ಅವಕಾಶ ಸಿಕ್ಕಾಗಲೂ ಏನೂ ಮಾಡದೆ ಎರಡನೇ ಅವಕಾಶದಲ್ಲಿಯೇ ಬಿಜೆಪಿ ಜಾತಿಗಣತಿಗೆ ಮುಂದಾಗಿರುವುದನ್ನು ಸಹಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
2006ರಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಜಾತಿಗಣತಿ ನಡೆಸುವುದಾದರೆ ಬಿಜೆಪಿ ಬೆಂಬಲ ನೀಡಲು ಸಿದ್ಧ ಎಂದು ಅಂದಿನ ಲೋಕಸಭೆ ವಿಪಕ್ಷ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಹೇಳಿದ್ದರು. ಆದರೂ ಜಾತಿಗಣತಿ ನಡೆಸುವ ಮೂಲಕ ಹಿಂದುಳಿದ ವರ್ಗದವರಿಗೆ ಅವಕಾಶ ನೀಡುವ ಪ್ರಯತ್ನವನ್ನೇ ಕಾಂಗ್ರೆಸ್ ಮಾಡಲಿಲ್ಲ. ಹಿಂದುಳಿದವರಿಗೆ ಅವಕಾಶವಂಚಿತರನ್ನಾಗಿ ಮಾಡಿರುವ ಅಂಬೇಡ್ಕರ್ ವಿಚಾರಗಳನ್ನೂ ತುಳಿದುಹಾಕಿದೆ. ಕೇವಲ ಸಂವಿಧಾನದ ಪುಸ್ತಕ ಹಿಡಿದು ಜನರೆದುರು ಕಾಂಗ್ರೆಸ್ ನಾಟಕವಾಡುತ್ತಿದೆ ಎಂದು ಮೂದಲಿಸಿದರು.ಜಾತಿ ಗಣತಿ ನೆಪದಲ್ಲಿ ಹಿಂದುಳಿದ ವರ್ಗದವರನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ವಿಫಲ ಯತ್ನ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ಜಾತಿ ಗಣತಿ ನಡೆಸುವ ನಿರ್ಧಾರ ಕಾಂಗ್ರೆಸ್‌ನ ಬುಡವನ್ನೇ ಅಲುಗಾಡಿಸಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಹತ್ತು ವರ್ಷ ಕಾಲಹರಣ ಮಾಡಿತು. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಗೊಂದಲದ ಗೂಡಾಗಿದೆ. ಪ್ರವರ್ಗ-1ರಲ್ಲಿದ್ದ ಅತಿ ಹಿಂದುಳಿದ ಜಾತಿಗಳಿಗಿದ್ದ ಆರ್ಥಿಕ ಮಾನದಂಡವನ್ನು ಕಿತ್ತು ಹಾಕಿ ಅನ್ಯಾಯ ಮಾಡಲಾಗಿದೆ. ನೂರಾರು ಸಣ್ಣ ಜಾತಿಗಳು ತಮ್ಮ ಸಂಖ್ಯೆಯ ಬಗ್ಗೆ ತಕರಾರು ಎತ್ತಿದ್ದಾರೆ. ಕಾಂಗ್ರೆಸ್‌ನ ಅನೇಕ ನಾಯಕರು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಅತಿಯಾದ ರಾಜಕೀಯದಿಂದಾಗಿ ಗೊಂದಲದ ಗೂಡಾಗಿರುವ ಕರ್ನಾಟಕದ ಜಾತಿ ಗಣತಿ ವರದಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರದ ಜಾತಿಗಣತಿ ವರದಿ ಬರಲಿದೆ. ಗೊಂದಲ, ಅವೈಜ್ಞಾನಿಕ ವರದಿಗೆ ಪರ್ಯಾಯ ದಾರಿಯನ್ನು ತೋರಿಸಲಿದೆ. ಹಿಂದುಳಿದ ವರ್ಗಗಳ ಎಲ್ಲ ರೀತಿಯ ಸಾಮಾಜಿಕ ನ್ಯಾಯದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗಲಿದೆ ಎಂದರು.
ಮತಾಂಧ ಶಕ್ತಿಗಳ ವಿಜೃಂಭಣೆ:ಸುಹಾಸ್ ಶೆಟ್ಟಿ ಅವರ ಪ್ರತೀಕಾರದ ಹತ್ಯೆಯಿಂದ ಮತಾಂಧ ಶಕ್ತಿಗಳು ರಾಜ್ಯದಲ್ಲಿ ವಿಜೃಂಭಿಸುತ್ತಿವೆ. ಸರ್ಕಾರದ ಪೋಷಣೆಯೇ ಮತೀಯ ಶಕ್ತಿಗಳ ಅಟ್ಟಹಾಸಕ್ಕೆ ಕಾರಣವಾಗಿದೆ. ಹಿಂದೂಗಳ ಮಾರಣ ಹೋಮ ನಡೆಯುತ್ತಿದ್ದರೂ ಸರ್ಕಾರ ಮೌನವಾಗಿದೆ. ಪಿಎಫ್‌ಐನ ನೂರಾರು ಮೊಕದ್ದಮೆಗಳನ್ನು ಸರ್ಕಾರ ವಾಪಸ್ ಪಡೆದಿರುವುದೇ ಇಂತಹ ಕೃತ್ಯಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನದ್ದು ಪಾಕಿಸ್ತಾನದ ಐಎಸ್‌ಐ ಮನಸ್ಥಿತಿ ಇದ್ದಂತೆ. ಕಾನೂನು ಸುವ್ಯವಸ್ಥೆಯನ್ನು ಸರಿದಾರಿಗೆ ತರಲಾಗದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಡಾ.ಸಿದ್ದರಾಮಯ್ಯ, ವಿವೇಕ್, ವಸಂತಕುಮಾರ್, ನರಸಿಂಹಾಚಾರ್, ಸಿ.ಟಿ..ಮಂಜುನಾಥ್, ನಾಗಾನಂದ್ ಇದ್ದರು.