ರಾಜ್ಯದಲ್ಲಿ ಆಂತರಿಕ ಕಚ್ಚಾಟ, ಬಣ ರಾಜಕೀಯ ದಿಂದ ಸರ್ಕಾರ ಪತನವಾಗುವದರಲ್ಲಿ ಸಂದೇಹವಿಲ್ಲ

ಕುಷ್ಟಗಿ: ಕೊಪ್ಪಳಕ್ಕೆ ಕ್ಯಾನ್ಸರ್ ಆಸ್ಪತ್ರೆ ಕೊಡುವ ನೆಪದಲ್ಲಿ ಕಾರ್ಖಾನೆಗಳಿಗೆ ಜೀವ ಕೊಡುವ ಕೆಲಸ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳದಲ್ಲಿ ಬಲ್ಡೋಟದಂತಹ ದೊಡ್ಡ ದೊಡ್ಡ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಿ ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿರುವದು ಸರಿಯಲ್ಲ ಎಂದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷವೂ ಸಂಪೂರ್ಣವಾಗಿ ಕ್ಷೀಣವಾಗುತ್ತಿದೆ, ಅದರಂತೆ ರಾಜ್ಯದಲ್ಲಿ ಆಂತರಿಕ ಕಚ್ಚಾಟ, ಬಣ ರಾಜಕೀಯ ದಿಂದ ಸರ್ಕಾರ ಪತನವಾಗುವದರಲ್ಲಿ ಸಂದೇಹವಿಲ್ಲ ಎಂದರು.

ಯುದ್ದದ ಸಂದರ್ಭದಲ್ಲಿ ಅನಿಲ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದು, ಕಾಂಗ್ರೇಸ್ ನವರು ಅದನ್ನೇ ದೊಡ್ಡದಾಗಿ ಬಿಂಬಿಸಿ ತಮ್ಮಲ್ಲಿರುವ ಆಂತರಿಕ ಕಚ್ಚಾಟದ ಗಮನ ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಿದೆ, ವಾಣಿಜ್ಯ ಅನಿಲ ಪೂರೈಕೆಯಲ್ಲಿ ಮಾತ್ರ ಕೊರತೆಯಾಗಿದ್ದು, ಗೃಹ ಬಳಕೆಯ ಅನಿಲದಲ್ಲಿ ಯಾವುದೇ ತೊಂದರೆ ಇಲ್ಲ ಬೇರೆ ರಾಷ್ಟ್ರಗಳ ಮೂಲಕ ಕೇಂದ್ರ ಸರ್ಕಾರ ಪೂರೈಕೆ ಮಾಡುತ್ತದೆ ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂದರು.

ಇತ್ತೀಚಿಗೆ ಕಾಂಗ್ರೇಸ್ ಸರ್ಕಾರ ಮಂಡಿಸಿದ ಬಜೆಟ್ ಸಂಪೂರ್ಣವಾಗಿ ಕಳಪೆ ಆಗಿದ್ದು, ಸ್ವ ಪಕ್ಷದಲ್ಲಿಯೇ ಬಜೆಟ್ ಕುರಿತು ಒಳ್ಳೆಯ ಅಭಿಪ್ರಾಯ ಇಲ್ಲ, ಖುರ್ಚಿ ಕಾದಾಟದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಮರೆತಿದೆ ಎಂದರು.

ನಾನು ನೀರಾವರಿ ಸಚಿವನಾಗಿದ್ದಾಗ ಕುಷ್ಟಗಿ ಭಾಗದಲ್ಲಿ ಕೆರೆ ತುಂಬಿಸುವ ಯೋಜನೆಯ ಕೃಷ್ಣಾ ಬಿ ಸ್ಕೀಂ ಚಾಲನೆ ನೀಡಿ ಅದಕ್ಕೆ ಹಣ ಮೀಸಲಿಟ್ಟ ಪರಿಣಾಮ ಯೋಜನೆ ಒಂದು ಹಂತಕ್ಕೆ ಬಂದು ಕುಷ್ಟಗಿ ಹಾಗೂ ಯಲಬುರ್ಗಾ ನೀರಾವರಿ ಪ್ರದೇಶವಾಗುವ ಕನಸು ನನಸಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ಯೋಜನೆಗೆ ಸಹಕಾರ ನೀಡದೆ ಇರುವುದು ರೈತ ವಿರೋಧಿ ಸರ್ಕಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬದಾಮಿ ಸೇರಿದಂತೆ ಅನೇಕರು ಇದ್ದರು.