ಸಾರಾಂಶ
ಅನುದಾನ ಕೊರತೆಯಿಂದ ಪರ್ಸೆಂಟೇಜ್ ಸಿಗದೆ ಪರದಾಡುತ್ತಿರುವ ಶಾಸಕರು ನೇರವಾಗಿ ಜನರೆದುರು ಸುಲಿಗೆಗೆ ಇಳಿದಿದ್ದಾರೆ. ಪೊಲೀಸ್, ಆರ್ ಇಒ, ಸಬ್‌ರಿಜಿಸ್ಟ್ರಾರ್, ತಾಲೂಕು ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ. ಅಕ್ರಮ ಮರಳು ಗಣಿಗಾರಿಕೆ, ಕ್ರಷರ್‌ಗಳಿಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಸಾಧ್ಯವಾಗದೆ ನಾಡಿನ ಸಂಪತ್ತನ್ನು ನಿರಂತರವಾಗಿ ಲೂಟಿ ಹೊಡೆಯಲು ಬಿಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕೇವಲ ಗ್ಯಾರಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದ್ದು, ಜನರ ಹಿತ, ರೈತರ ಹಿತ ಮತ್ತು ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಆರೋಪಿಸಿದರು.ಭ್ರಷ್ಟಾಚಾರ, ಅಕ್ರಮ ಮತ್ತು ದುರಾಡಳಿತವನ್ನು ನಿಯಂತ್ರಿಸಲಾಗದ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಸರ್ಕಾರಿ ವಲಯ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ೩. ಬೆಲೆ ಏರಿಕೆಗೆ ಕೊನೆಯೇ ಇಲ್ಲದಂತೆ ನೀರು, ಹಾಲು, ವಿದ್ಯುತ್, ಬಸ್‌ದರ, ಡೀಸೆಲ್ ಹೀಗೆ ಎಲ್ಲ ಬೆಲೆಗಳನ್ನು ಏರಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಅನುದಾನ ಕೊರತೆಯಿಂದ ಪರ್ಸೆಂಟೇಜ್ ಸಿಗದೆ ಪರದಾಡುತ್ತಿರುವ ಶಾಸಕರು ನೇರವಾಗಿ ಜನರೆದುರು ಸುಲಿಗೆಗೆ ಇಳಿದಿದ್ದಾರೆ. ಪೊಲೀಸ್, ಆರ್ ಇಒ, ಸಬ್‌ರಿಜಿಸ್ಟ್ರಾರ್, ತಾಲೂಕು ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ. ಅಕ್ರಮ ಮರಳು ಗಣಿಗಾರಿಕೆ, ಕ್ರಷರ್‌ಗಳಿಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಸಾಧ್ಯವಾಗದೆ ನಾಡಿನ ಸಂಪತ್ತನ್ನು ನಿರಂತರವಾಗಿ ಲೂಟಿ ಹೊಡೆಯಲು ಬಿಡಲಾಗಿದೆ. ನಿರಂತರವಾಗಿ ನಡೆಯುತ್ತಿರುವ ಹಗರಣಗಳು ಆಡಳಿತವು ಹಿಡಿತದಲ್ಲಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿಲ್ಲದಿರುವುದನ್ನು ಮನಗಂಡು ಇದೇ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಲು, ಹಣ ದೋಚಲು ಸ್ಪರ್ಧೆಗೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರಿಗೆ ಅತ್ಯವಶ್ಯಕವಾಗಿ ಬೇಕಾದ ಗುಣಮಟ್ಟದ ಉಚಿತ ಶಿಕ್ಷಣ, ಆರೋಗ್ಯ, ಉದ್ಯೋಗ ಗ್ಯಾರಂಟಿ ಬೇಕಾಗಿದೆ. ಇದನ್ನು ಒದಗಿಸಲಾಗದ ಸರ್ಕಾರ ಮೂಗಿಗೆ ತುಪ್ಪ ಸವರಿ ಹಿಂಬಾಗಿಲ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಜನರನ್ನು ದೋಚುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಹಿಂದೆಂದೂ ಕಾಣದಂತಹ ಜನವಿರೋಧಿ ಸರ್ಕಾರ ಕಾಂಗ್ರೆಸ್‌ನದ್ದಾಗಿದೆ ಎಂದು ಆಕ್ರೋಶದಿಂದ ನುಡಿದರು.ಗೋಷ್ಠಿಯಲ್ಲಿ ರಮೇಶ್‌ಗೌಡ, ವೈ.ಕೆ.ಶಶಿಧರ, ರವೀಂದ್ರ, ಕಾಂತರಾಜು, ಜಗದೀಶ ಇತರರಿದ್ದರು.