ಮೈತ್ರಿಯಿಂದ ಕಾಂಗ್ರೆಸ್‌ಗೆ ನಡುಕ: ಎಚ್‌ಡಿಕೆ

| Published : Mar 30 2024, 12:51 AM IST

ಸಾರಾಂಶ

ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

- ಅಭ್ಯರ್ಥಿ ಆಯ್ಕೆಯಲ್ಲಿ ಉಂಟಾದ ಒಡಕಿಗೆ ನಿರಾಸೆ ಬೇಡ

- ಸಮನ್ವಯ ಸಭೆಯಲ್ಲಿ ಮುಖಂಡರಿಗೆ ಕಿವಿಮಾತುಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇದೇ ವೇಳೆ, ನಾವೂ ಎಲ್ಲಿಯೂ ಮೈಮರೆಯಬಾರದು ಮತ್ತು ಮೈತ್ರಿಗೆ ಧಕ್ಕೆಯಾಗದಂತೆ ಎರಡೂ ಪಕ್ಷಗಳ ಕಾರ್ಯಕರ್ತರು ಒಮ್ಮತವಾಗಿ ಕೆಲಸ ಮಾಡಬೇಕು ಎಂದೂ ಅವರು ಕಿವಿಮಾತು ಹೇಳಿದ್ದಾರೆ.

ಶುಕ್ರವಾರ ನಡೆದ ಬಿಜೆಪಿ-ಜೆಡಿಎಸ್‌ ಪಕ್ಷಗಳ ಸಮನ್ವಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಯಿಂದ ಈ ಮೈತ್ರಿಯಾಗಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಒಡಕು ಬಂದಿರಬಹುದು. ಅದರಿಂದ ನಾವು ನಿರಾಸೆಗೆ ಒಳಗಾದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯ ಇವೆ. ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದೆ ಬಿಎಸ್‌ವೈ ಜತೆ ಉತ್ತಮ ಕೆಲಸ:

ಹಿಂದೆ 2006ರಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ವೇಳೆ ದೇಶಕ್ಕೆ ಮಾದರಿಯಾಗುವ ಆಡಳಿತ ಮಾಡಿದ್ದೇವೆ. ಬಿಜೆಪಿಯ ಅನೇಕ ನಾಯಕರು ನನ್ನ ಮೇಲೆ ಅಪಾರವಾದ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ಮೈತ್ರಿ ಸಂದರ್ಭದಲ್ಲಿ ದೇವೇಗೌಡರಿಗೆ ಕೆಲವರು ತಪ್ಪು ಮಾಹಿತಿ ನೀಡಿದ್ದರಿಂದ ಸಮಸ್ಯೆಗಳಾದವು. ಆಗಲೇ ನನಗೆ ಬಿಜೆಪಿಯ ಜತೆ ದೀರ್ಘಾವಧಿ ಮೈತ್ರಿಯ ಉದ್ದೇಶ ಇತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗದಿರುವ ಬಗ್ಗೆ ನನಗೆ ಬೇಸರವಿದೆ ಎಂದರು. ಕಳೆದ 2018ರ ಚುನಾವಣೆ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಬೇಕಿತ್ತು. ಆಗ ಮೈತ್ರಿ ಆಗಿದ್ದಿದ್ದರೆ ಬಹುಶಃ ಇಂದಿಗೂ ರಾಜ್ಯದಲ್ಲಿ ನಮ್ಮ ಮೈತ್ರಿ ಸರ್ಕಾರವೇ ಇರುತ್ತಿತ್ತು. ವಿಧಿಯಾಟ, ಅಂದು ಏನೋ ನಡೆದು ಹೋಗಿದೆ. ನಮ್ಮಲ್ಲಿದ್ದ ಒಡಕುಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು.

ಉಭಯ ಪಕ್ಷಗಳ ಸಮನ್ವಯತೆಯನ್ನು ಬೂತ್ ಮಟ್ಟದಿಂದ ಬಲಪಡಿಸಿಕೊಳ್ಳಬೇಕು. ಇವತ್ತಿನ ಮೈತ್ರಿಗೆ ಈ ಚುನಾವಣೆ ಮೂಲಕ ಭದ್ರ ಬುನಾದಿ ಹಾಕಿದರೆ ಭವಿಷ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಲ್ಲದಂತೆ ಮಾಡಬಹುದು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದಾಗಿ ಎಲ್ಲರೂ ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿನ ವಿಶ್ವಾಸಕ್ಕೆ ಕಿಂಚಿತ್ತೂ ವ್ಯತ್ಯಾಸವಾಗಬಾರದು. ಏನೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತರಬೇಕು. ಯಾರೂ ವೈಯಕ್ತಿಕ ಪ್ರತಿಷ್ಠೆಗೆ ಬೀಳುವುದು ಬೇಡ. ಈ ಮೈತ್ರಿ ನಾವು ಅಧಿಕಾರಕ್ಕಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಎಂದರು.