ಪಕ್ಷವು ತೆಗೆದುಕೊಂಡಿರುವ ತೀರ್ಮಾನ ಸಲ್ಲ । ಹೈಕಮಾಂಡ್ ತಾರತಮ್ಯ ಧೋರಣೆಯ ಪರಮಾವಧಿ, ಇಬ್ಬಗೆ ನೀತಿ

ಕನ್ನಡಪ್ರಭ ವಾರ್ತೆ ಕೋಲಾರದಾವಣಗೆರೆ ದಕ್ಷಿಣ ಕ್ಷೇತ್ರದ ಉಪಾಚುನಾವಣೆಯಲ್ಲಿ ಅಲ್ಪಸಂಖ್ಯಾತ ನಾಯಕರು ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆಂಬ ನೆಪದಲ್ಲಿ ಕೆಲವು ನಾಯಕರ ವಿರುದ್ಧ ಕಾಂಗ್ರೆಸ್ ಪಕ್ಷವು ಶಿಸ್ತು ಕ್ರಮ ಕೈಗೊಂಡಿದೆ. ಇದು ಪಕ್ಷದ ಆಂತರಿಕಾ ವಿಚಾರವಾದರೂ ಅಲ್ಪಸಂಖ್ಯಾತರನ್ನು ಹತ್ತಿಕ್ಕುತ್ತಿರುವುದು ಹೈಕಮಾಂಡ್ ತಾರತಮ್ಯ ಧೋರಣೆಯ ಪರಮಾವಧಿ ಎಂದು ದ್ರಾವಿಡ ವಿಮೋಚನಾ ಸಂಘದ ಅಧ್ಯಕ್ಷ ಕೆ.ಎಂ.ಅನಂತಕೀರ್ತಿ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷವು ತೆಗೆದು ಕೊಂಡಿರುವ ತೀರ್ಮಾನವು ಬಲಾಢ್ಯರಿಗೊಂದು ನ್ಯಾಯ, ಬಲಹೀನರಾದ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರಿಗೊಂದು ನ್ಯಾಯ ಎಂಬಂತೆ ಇಬ್ಬಗೆಯ ನೀತಿ ಪಾಲಿಸುತ್ತಿರುವುದು ಸಾಬೀತಾಗಿದೆ. ಕಳೆದ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ನಾಯಕರ ನಡೆ ಜನರ ಮನದಲ್ಲಿ ಮಾಸದೆ ಉಳಿದಿದೆ ಎಂದರು. ರಾಷ್ಟ್ರ ಮಟ್ಟದ ದಲಿತ ನಾಯಕ ಕೆ.ಎಚ್.ಮುನಿಯಪ್ಪರ ಅಳಿಯ ಚಿಕ್ಕ ಪೆದ್ದನ್ನರನ್ನು ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲು ಅಂತಿಮ ತೀರ್ಮಾನ ಕೈಗೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆಯ ಆದೇಶ ಜಾರಿ ಮಾಡಿದ್ದರೂ ಸಹ ಕೋಲಾರದ ಕಾಂಗ್ರೆಸ್ ನಾಯಕರು ಇದನ್ನು ವಿರೋಧಿಸಿ ಬೀದಿಗೆ ಬಂದು ಹೋರಾಟ ಮಾಡಿದ್ದನ್ನು ಇಡೀ ರಾಷ್ಟ್ರವೇ ಗಮನಿಸಿದೆ. ಇದು ರಾಷ್ಟ್ರ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್.ಮುನಿಯಪ್ಪರನ್ನು ಅಪಮಾನಿಸಲೆಂದೇ ಮಾಡಿದ ಷಡ್ಯಂತ್ರವಾಗಿತ್ತು.

ಇದರಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು, ಸಿ.ಎಂ.ರಾಜಕೀಯ ಕಾರ್ಯದರ್ಶಿಗಳು, ಇಬ್ಬರು ಶಾಸಕರು. ಓರ್ವ ವಿಧಾನ ಪರಿಷತ್ ಶಾಸಕರು ತಮ್ಮ ರಾಜಿನಾಮೆ ಪತ್ರಗಳನ್ನು ರಾಜ್ಯ ರಾಜಧಾನಿ ಬೀದಿಯಲ್ಲಿ ನಿಂತು ಇಡೀ ಪಕ್ಷವನ್ನು ಬ್ಲಾಕ್‌ಮೇಲ್ ಮಾಡಿ ೧೪೦ ವರ್ಷ ಇತಿಹಾಸವಿದ್ದ ಪಕ್ಷದ ಮಾನ ಮಾರ್ಯದೆ ಬೀದಿ ಬೀದಿಗಳಲ್ಲಿ ಹರಾಜು ಹಾಕಿದ್ದನ್ನು ಇಡೀ ರಾಷ್ಟ್ರವೇ ವೀಕ್ಷಿಸುವಂತೆ ಮಾಡಿದ್ದು ನಾಚಿಕೆಗೇಡು ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣರ ಮೇಲೆ ಹಲ್ಲೆ ಮಾಡಿ ಕತ್ತು ಹಿಡಿದು ವೇದಿಕೆಯಿಂದ ಹೊರಗೆ ದಬ್ಬಿದರೂ ಜಿಲ್ಲೆಯ ನಾಯಕರುಗಳು ಮೂಕ ಪ್ರೇಕ್ಷರಂತೆ ವರ್ತಿಸಿದರು ಆಗಲು ಇವರ ವಿರುದ್ಧ ಯಾವುದೇ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಏಕೆ ಆತ ಓರ್ವ ಹಿಂದುಳಿದ ವರ್ಗದವರನೆಂದು ಅವರ ಪರವಾಗಿ ಯಾವ ನಾಯಕರು ಮುಂದಾಗಲಿಲ್ಲ ಏಕೆಂದು ಪ್ರಶ್ನಿಸಿದರು.

ಕರ್ನಾಟಕ ದಲಿತ ರೈತ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ಮಾತನಾಡಿ, ಶಾಸಕರಾದ ಡಾ.ಕೊತ್ತೂರು.ಜಿ.ಮಂಜುನಾಥ್ ಕಳೆದ ಸಾಲಿನಲ್ಲಿ ಮುಳಬಾಗಿಲಿನ ಮೀಸಲು ಕ್ಷೇತ್ರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕರಾಗಿ ಆಡಳಿತ ನಡೆಸಿದರು. ಈ ಸಂಬಂಧವಾಗಿ ನ್ಯಾಯಾಲಯಗಳ ವಿಚಾರಣೆಯಲ್ಲಿ ಸಾಕ್ಷಾಧಾರಗಳ ಸಾಮೇತ ರುಜುವಾತು ಅಗಿದ್ದರೂ ಸರ್ಕಾರವು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಮೊದಲು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ನ್ಯಾಯಾಲಯದಲ್ಲಿ ಸುಳ್ಳು ಜಾತಿಯ ಪ್ರಮಾಣ ಪತ್ರವೆಂದು ಸಾಭೀತು ಆಗಿ ತೀರ್ಪು ಹೊರ ಬಂದಿದೆ. ಈಗ ಇದರ ವಿರುದ್ದ ಸರ್ಕಾರ ಹಾಗೂ ಜಿಲ್ಲಾಧಿಕಾರಿ ಕ್ರಮಕೈಗೊಳ್ಳುವ ಅಧಿಕಾರ ಇದ್ದರೂ ಸಹ ಕ್ರಮ ಕೈಗೊಳ್ಳದೆ ತಾರತಮ್ಯ ಮಾಡುತ್ತಿರುವುದು ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗರ ಸಂಘ ಅಧ್ಯಕ್ಷ ಕೆ.ರೋಹನ್‌ಗೌಡ, ಮುಖಂಡರಾದ ಮುನಿರಾಜು. ಚಲಪತಿ, ರವಿ, ಗೋವಿಂದ ರಾಹು ಇದ್ದರು.