ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ನಡೆಸಲು ಚಿಂತನೆ: ಸಹಕಾರ ಸಚಿವ ರಾಜಣ್ಣ

| Published : Oct 28 2024, 01:09 AM IST / Updated: Oct 28 2024, 01:10 AM IST

ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ನಡೆಸಲು ಚಿಂತನೆ: ಸಹಕಾರ ಸಚಿವ ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನೆಗಳು ದೇಶಾದ್ಯಂತ ಜನಪ್ರಿಯವಾಗುತ್ತಿರುವುದನ್ನು ಸಹಿಸದ ಎರಡೂ ಪಕ್ಷಗಳು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಹುನ್ನಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಸ್ವಾಭಿಮಾನಿ ಸಮಾವೇಶವನ್ನು ತುಮಕೂರು ಜಿಲ್ಲೆಯಿಂದಲೇ ಆರಂಭಿಸಲಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು, ಕಾಂಗ್ರೆಸ್ ಪಕ್ಷದ ಘನತೆಯನ್ನು ಹಾಳು ಮಾಡಲು ಹುನ್ನಾರ ಮಾಡುತ್ತಿರುವ ವಿರೋಧ ಪಕ್ಷಗಳ ಷಡ್ಯಂತ್ರದ ವಿರುದ್ಧ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ರಾಜೀವ್‌ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಮುಖಂಡರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶ ಕಂಡಂತಹ ಅತ್ಯುತ್ತಮ ಮುಖ್ಯಮಂತ್ರಿ. ಅವರು ನೀಡಿದಂತಹ ಬಡವರ ಪರವಾದ ಯೋಜನೆಗಳು ದೇಶದಲ್ಲೇ ಜನಪ್ರಿಯತೆ ಪಡೆದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರನ್ನು ಕಟ್ಟಿಹಾಕಲು ಮತ್ತು ಅವರ ವ್ಯಕ್ತಿತ್ವಕ್ಕೆ ಕುಂದು ತರಲು ಹಾಗೂ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷಗಳು ಷಡ್ಯಂತರ ಮಾಡಿದ್ದು, ಇದಕ್ಕೆ ರಾಜ್ಯಪಾಲರನ್ನು ಬಳಸಿಕೊಂಡರು, ರಾಜ್ಯಪಾಲರು ಸಹ ದೆಹಲಿಯ ಬಿಜೆಪಿ ವರಿಷ್ಠರ ನಿರ್ದೇಶನದಂತೆ ನಡೆದುಕೊಡಿದ್ದಾರೆ ಎಂದು ತಿಳಿಸಿದರು.

ವಿರೋಧ ಪಕ್ಷಗಳು ಸಿದ್ದರಾಮಯ್ಯನವರ ಸ್ವಚ್ಛ ರಾಜಕಾರಣಕ್ಕೆ ಮಸಿ ಬಳಿಯಲು ಇಲ್ಲದ ಕುತಂತ್ರಗಳನ್ನು ಮಾಡುತ್ತಿರುವುದರ ವಿರುದ್ಧ ತುಮಕೂರು ಜಿಲ್ಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರರವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಮತ್ತು ಸಿದ್ದರಾಮಯ್ಯನವರ ಅಭಿಮಾನಿಗಳಿಂದ ಬೃಹತ್ ಸ್ವಾಭಿಮಾನಿ ಸಮಾವೇಶವನ್ನು ಮುಂಬರುವ ದಿನಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಪ್ರತಿ ತಾಲೂಕಿನಲ್ಲೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತಿದೆ ಎಂದರು.

ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ೧೩೬ ಸ್ಥಾನಗಳನ್ನು ಪಡೆದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಧೂಳೀಪಟ ಮಾಡಿದೆ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನೆಗಳು ದೇಶಾದ್ಯಂತ ಜನಪ್ರಿಯವಾಗುತ್ತಿರುವುದನ್ನು ಸಹಿಸದ ಎರಡೂ ಪಕ್ಷಗಳು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಹುನ್ನಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಸ್ವಾಭಿಮಾನಿ ಸಮಾವೇಶವನ್ನು ತುಮಕೂರು ಜಿಲ್ಲೆಯಿಂದಲೇ ಆರಂಭಿಸಲಿದೆ ಎಂದರು.

ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಕೆಪಿಸಿಸಿ ಕಾರ್ಯದರ್ಶಿ ರಾಮಕೃಷ್ಣಯ್ಯ, ಸದಸ್ಯರಾದ ಎ.ಡಿ.ಬಲರಾಮಯ್ಯ, ಪ್ರಸನ್ನಕುಮಾರ್, ಜಿಲ್ಲಾ ಒಬಿಸಿ ಎಸ್ಸಿ, ಎಸ್ಟಿ. ಘಟಕಗಳ ಅಧ್ಯಕ್ಷರಾದ ಅನಿಲ್‌ ಕುಮಾರ್, ಲಿಂಗರಾಜು, ಕುಮಾರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಕವಿತಾ, ಮುಖಂಡರಾದ ಮಹಾಲಿಂಗಪ್ಪ, ಕೆ.ಬಿ.ಲೋಕೇಶ್, ಭೈರಪ್ಪ, ರಂಗರಾಜು, ನ್ಯಾತೇಗೌಡ ಸೇರಿ ಇನ್ನಿತರರು ಹಾಜರಿದ್ದರು.

‘ಬಿಜೆಪಿ ಪಕ್ಷದವರು ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡು ಬರೀ ಸುಳ್ಳು ಭರವಸೆಗಳನ್ನು ಜನರಿಗೆ ನೀಡಿ ಮೋಸ ಮಾಡಿಕೊಂಡು ಬರುತ್ತಿದ್ದಾರೆ, ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆಗಳು ದೇಶಾದ್ಯಂತ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸಹಿಸಲಾಗದ ಬಿಜೆಪಿಯವರು ಎರಡು ತಲೆಯ ಹಾವಾದ ಜೆಡಿಎಸ್ ಪಕ್ಷದವರು ಸೇರಿಕೊಂಡು ಒಳ ಕುತಂತ್ರವನ್ನು ಮಾಡಿ ಸಿದ್ದರಾಮಯ್ಯರವರನ್ನು ಕಟ್ಟಿಹಾಕಲು ಹುನ್ನಾರ ನಡೆಸುತ್ತಿದ್ದಾರೆ.’

ಕೆ.ಎನ್.ರಾಜಣ್ಣ, ಸಹಕಾರ ಸಚಿವರು