ಸಾರಾಂಶ
ನೀತಿ ಸಂಹಿತೆ ಉಲ್ಲಂಘಿಸಿರುವ ರಾಜ್ಯ ಸರ್ಕಾರದ ವಿರುದ್ಧ ಈ ಕೂಡಲೇ ಚುನಾವಣಾ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮತಕ್ಕಾಗಿ ಜನರನ್ನು ಓಲೈಕೆ ಮಾಡುವುದೇ ಕಾಂಗ್ರೆಸ್‌ನ ಏಕೈಕ ಅಜೆಂಡಾ. ಹೀಗಾಗಿ ಉಪ ಚುನಾವಣೆ ಮತದಾನಕ್ಕೆ ಕೇವಲ ಎರಡು ದಿನ ಬಾಕಿಯಿದ್ದಾಗ ಸಿದ್ದರಾಮಯ್ಯ ಸರ್ಕಾರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿ ಮತದಾರರನ್ನು ಸೆಳೆಯಲು ಯತ್ನಿಸಿರುವುದಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ. ಶಿಗ್ಗಾಂವಿ ಸಹಿತ ಉಪ ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಕಂತಿನ ಹಣ ಖಾತೆಗೆ ಬಿಡುಗಡೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಇದು ಕಾಂಗ್ರೆಸ್ ಸರ್ಕಾರವು ಮತದಾರರಿಗೆ ನೀಡಿರುವ ದೊಡ್ಡಮಟ್ಟದ ಆಮಿಷವಾಗಿದೆ. ಗೃಹಲಕ್ಷ್ಮಿ ಯೋಜನೆ ಕಂತು ಪಾವತಿ ವಿಳಂಬಗೊಳಿಸಿ ಅದನ್ನು ಮತದಾನಕ್ಕೆ ಗಂಟೆಗಳಷ್ಟೇ ಬಾಕಿಯಿರುವಾಗ ಬಿಡುಗಡೆ ಮಾಡುವುದು ಕಾಂಗ್ರೆಸ್ ಸರ್ಕಾರದ ಚಾಳಿಯಾಗಿದೆ ಎಂದು ಆರೋಪಿಸಿದ್ದಾರೆ.ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಎರಡು ದಿನದ ಮುನ್ನ ಫಲಾನುಭವಿಗಳ ಖಾತೆಗೆ ಬಾಕಿ ಮೊತ್ತ ಜಮಾ ಮಾಡಿತ್ತು. ಬಳಿಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂಬ ಸಮಜಾಯಿಷಿ ಕೊಡುವ ಯತ್ನ ನಡೆಸಿತ್ತು. ನೀತಿ ಸಂಹಿತೆ ಉಲ್ಲಂಘಿಸಿರುವ ರಾಜ್ಯ ಸರ್ಕಾರದ ವಿರುದ್ಧ ಈ ಕೂಡಲೇ ಚುನಾವಣಾ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.