ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಕಾಂಗ್ರೆಸ್ ಪಕ್ಷ ಮಾದಿಗರನ್ನು ವೋಟಿಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಆಪಾದಿಸಿದರು.ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಮಾದಿಗ ಸಮಾಜದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಮಾದಿಗ ಜನಾಂಗವನ್ನು ವೋಟ್ ಬ್ಯಾoಕ್ ಮಾಡಿಕೊಂಡಿದೆ. ಸ್ವಾತಂತ್ರ್ಯನಂತರದ ಅವರ ಆಡಳಿತದಲ್ಲಿ ಮೀಸಲಾತಿಗೆ ಹಲವಾರು ಜಾತಿಗಳನ್ನು ಸೇರ್ಪಡೆ ಮಾಡಿದರು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು. 30 ವರ್ಷದಿಂದ ಈ ಹೋರಾಟ ನಡೆದಿದ್ದು ಅನೇಕ ಜನ ಪ್ರಾಣ ಕಳೆದು ಕೊಂಡಿದ್ದಾರೆ. ಒಳ ಮೀಸಲಾತಿ ಕೊಡಲು ನಾವು ಬದ್ಧ, ನಿಮ್ಮ ಹೋರಾಟದ ಜೊತೆಗೆ ನಾನಿದ್ದೇನೆ ಎಂದು ಪ್ರಧಾನಿ ಮೋದಿಯವರು ಭರವಸೆ ನೀಡಿದ್ದರು. ಅದರಂತೆ ಈಗ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಅನುಷ್ಠಾನಗೊಳಿಸದೇ ಮೀನಾಮೇಷ ಎಣಿಸುತ್ತಿದೆ. ಎಲ್ಲಿಯವರೆಗೆ ನೀವು ಸ್ವಾಭಿಮಾನದಿಂದ ಬದುಕುವುದಿಲ್ಲವೋ ಅಲ್ಲಿಯವರೆಗೆ ನ್ಯಾಯ ಸಿಗಲಾರದು.ಬಿಜೆಪಿ ಆಡಳಿತದಲ್ಲಿ ಕಾಂಗ್ರೆಸ್ ವಿರೋಧ ಮಾಡಿದರು ಕೂಡ ಶೇ.17ರಷ್ಟು ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೆವು. ನಾವು ಸಂವಿಧಾನ ಬದಲು ಮಾಡುವವರಲ್ಲ. ನಾವು ಸಂವಿಧಾನಕ್ಕೆ ನ್ಯಾಯ ಒದಗಿಸುವವರು. ಸುಮ್ಮನೆ ಕೂರುವ ಕಾಲವಿದಲ್ಲ. ಸಾವಿರ ಸಾವಿರ ಸಂಖ್ಯೆಯಲ್ಲಿ ತಹಸೀಲ್ದಾರ್, ಡಿಸಿ ಕಚೇರಿಗಳ ಮುಂಭಾಗ ಒಳ ಮೀಸಲಿನ ಅನುಷ್ಠಾನಕ್ಕೆ ಧರಣಿ ನಡೆಸಿ. ಎಲ್ಲಾ ಜನಾಂಗದ ಜನರ ವಿಶ್ವಾಸ ಗಳಿಸಿಕೊಳ್ಳಿ. ಯಾರೊಂದಿಗೂ ಜಗಳ ಬೇಡ. ಸರ್ವ ಸಮುದಾಯದವರು ಗೌರವ ಕೊಡುವ ರೀತಿ ಬದುಕಬೇಕು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿದ್ದು ಸಂಸದ ಗೋವಿಂದ ಕಾರಜೋಳ ಅವರು, ಪ್ರಧಾನಿ ಮೋದಿಯವರ ಆಡಳಿತದ ಅವಧಿಯಲ್ಲಿ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಪಥದಲ್ಲಿ ನಡೆಸುತ್ತಾರೆ ಎಂಬ ವಿಶ್ವಾಸ ನಮ್ಮೆಲ್ಲರಲ್ಲಿದೆ ಎಂದು ಹೇಳಿದರು.ಅತ್ಯಂತ ಸುಸಂಸ್ಕೃತ ವ್ಯಕ್ತಿಯಾದ ಸಂಸದರನ್ನು ಡಿ.ಮಂಜುನಾಥ್ ರವರ ಪ್ರತಿರೂಪ ಎಂದರೆ ತಪ್ಪಾಗಲಾರದು. ತಾಲೂಕು ಮತ್ತು ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಸಾವಿರಾರು ಯುವಕರಿಗೆ ಉದ್ಯೋಗ ಒದಗಿಸಿಕೊಡಬೇಕಿದೆ. ಕೇಂದ್ರ ಕೈಗಾರಿಕಾ ಸಚಿವರು ನಮ್ಮವರೇ ಇದ್ದು ಜಿಲ್ಲೆಗೆ ಹೆಚ್ಚಿನ ಕೈಗಾರಿಕೆಗಳನ್ನು ತರುವುದರ ಮೂಲಕ ನೂರಾರು ಕಿಮೀ ದೂರದಿಂದ ಬಂದು ಚಿತ್ರದುರ್ಗದಲ್ಲಿ ಗೆದ್ದಿರುವ ಸಂಸದರು ಜಿಲ್ಲೆಯಲ್ಲಿ ತಮ್ಮ ಅಭಿವೃದ್ಧಿಯ ಹೆಜ್ಜೆ ಗುರುತುಗಳನ್ನು ಉಳಿಸಬೇಕು ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಎನ್.ಆರ್.ಲಕ್ಷ್ಮಿಕಾಂತ್, ವಿಶ್ವನಾಥ್, ಎಂ.ಜಗದೀಶ್, ದ್ಯಾಮೇಗೌಡ, ಬಸವರಾಜ ನಾಯಕ, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ವಕೀಲ ರಂಗಸ್ವಾಮಿ, ಜಲ್ದಪ್ಪ, ಸ್ವಾಮೀಜಿ ದಾಸ್, ಕೆಪಿ ಶ್ರೀನಿವಾಸ್, ಹೆಗ್ಗೆರೆ ಮಂಜುನಾಥ್, ಕೆ.ಆರ್.ಹಳ್ಳಿ ರಘುನಾಥ್, ಶಿವಣ್ಣ ಶ್ರವಣಗೆರೆ, ರಾಜಪ್ಪ ಮಸ್ಕಲ್, ರವಿಶಂಕರ್, ಮಹೇಶ್, ಮಾರುತೇಶ್, ಜಗದೀಶ್ ಮುಂತಾದವರು ಇದ್ದರು.ಸಂಸದರ ಕಾರ್ಯ ಅಭಿನಂದನಾರ್ಹ: ಷಡಕ್ಷರಮುನಿ ಸ್ವಾಮೀಜಿ
ಆದಿ ಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಹಲವು ಯೋಜನೆಗಳ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸಂಸದರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸುತ್ತಿರುವುದು ಅಭಿನಂದನಾರ್ಹ ಎಂದರು. ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಜ್ಯ ಸರ್ಕಾರ ಪರಮಾಧಿಕಾರ ಬಳಸಿ ಒಳ ಮೀಸಲಾತಿಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು. ರಾಜ್ಯ ಸರ್ಕಾರ ನಿಧಾನಗತಿಯ ತೀರ್ಮಾನ ಮಾಡಿದರೆ ಮಾದಿಗರಿಗೆ ಮಾಡಿದ ಅನ್ಯಾಯ ಎಂದು ತೀರ್ಮಾನಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಮಾದಿಗರ ಮೀಸಲಾತಿಯ ಬಗ್ಗೆ ಸ್ಪಷ್ಟಪಡಿಸಬೇಕು. ಅವರ ನಡೆ ತೀರ್ಮಾನಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ಮೀಸಲಾತಿ ಅನುಷ್ಠಾನಗೊಳ್ಳುವವರೆಗೆ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.