ಹುಬ್ಬಳ್ಳಿ:
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಅಡ್ಡಿಪಡಿಸುತ್ತಿದೆ. ಅಕ್ರಮ ನುಸುಳುಕೋರರಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ (ಪಿಆರ್‌ಸಿ) ವಿತರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸಂವಿಧಾನದ 14ನೇ ಕಲಂ ಪ್ರಕಾರ ರಾಜ್ಯ ಸರ್ಕಾರಕ್ಕೆ ಕಾಯಂ ರಹವಾಸಿ ಪತ್ರ ನೀಡುವ ಅಧಿಕಾರವಿದ್ದರೂ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ರಾಜ್ಯ ಸರ್ಕಾರ ಅನುಮತಿ ಪಡೆಯದೇ ಪಿಆರ್‌ಸಿ ನೀಡಲು ಮುಂದಾಗಿರುವುದು ಕಾನೂನು ವಿರೋಧಿ ಕೆಲಸವಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹಣೆ ಮೇಲೆ ವಿಭೂತಿ ಧರಿಸುತ್ತಾರೆ. ಇನ್ನೊಂದೆಡೆ ನುಸುಳುಕೋರರಿಗೆ ಅನುಕೂಲವಾಗುವ ಹಾಗೂ ಮುಸ್ಲಿಂ ತುಷ್ಟೀಕರಣದ ಕೆಲಸ ಮಾಡುತ್ತಿದ್ದಾರೆ. ಉಳಿದ ರಾಜಕಾರಣ ಏನೇ ಮಾಡಲಿ. ಆದರೆ, ದೇಶದ ಭದ್ರತೆಗೆ ಧಕ್ಕೆ ತರುವಂತಹ ಕಾರ್ಯ ಕೈಗೊಳ್ಳಬಾರದು. ರಾಜ್ಯ ಸರ್ಕಾರ ಈ ಸುತ್ತೋಲೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಉತ್ತರ ಕರ್ನಾಟಕ ನಿರ್ಲಕ್ಷ್ಯ:
ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಮರ್ಪಕ ಮಳೆಯಾಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಕಾಣಿಸುತ್ತಿಲ್ಲ. ಈಚೆಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಭಾಗಕ್ಕೆ ಏನಾದರೂ ವಿಶೇಷ ಪ್ಯಾಕೇಜ್ ನೀಡುತ್ತಾರೆ ಎಂಬ ಭರವಸೆಯಲ್ಲಿದ್ದೆವು. ಆದರೆ, ಕೇವಲ ಸಭೆ ಮಾಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಹೋಗಿರುವುದು ಬಿಟ್ಟರೆ ಬೇರೆನೂ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬೆಂಗಳೂರು ಅಭಿವೃದ್ಧಿಗೆ ₹1.14 ಲಕ್ಷ ಕೋಟಿ ಯೋಜನೆ ರೂಪಿಸುವ ಮುಖ್ಯಮಂತ್ರಿ ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೂ ಏನಾದರೂ ಪ್ಯಾಕೇಜ್ ನೀಡುವ ಭರವಸೆ ಇತ್ತು. ಆದರೆ, ಇದ್ಯಾವುದು ಆಗಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ನುಸುಳುಕೋರರನ್ನು ರಕ್ಷಿಸಲು ಯತ್ನ:
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿ, ಬರ ಪರಿಹಾರ ಹಾಗೂ ಮೂಲಸೌಕರ್ಯ ಯೋಜನೆಗಳ ಕುರಿತು ರಾಜ್ಯ ಸರ್ಕಾರ ಯಾವುದೇ ಗಂಭೀರತೆ ತೋರಿಲ್ಲ. ರಾಜ್ಯದಲ್ಲಿ ಎಸ್‌ಐಆರ್ ಹಾಳು ಮಾಡಲು ಕಾಂಗ್ರೆಸ್ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಮ್ಯಾಪಿಂಗ್ ಮಾಡುವಲ್ಲೂ ಬಹಳಷ್ಟು ಅಕ್ರಮಗಳನ್ನು ಎಸಗಲಾಗುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಈಗ ಪಿಆರ್‌ಸಿ ಹೆಸರಿನಲ್ಲಿ ಅಕ್ರಮ ನುಸುಳುಕೋರರನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ದೇಶದ ಭದ್ರತೆಗೆ ಹಾನಿ ಉಂಟು ಮಾಡುವ ಇಂತಹ ಕೆಲಸದಿಂದ ಹಿಂದೆ ಸರಿಯಬೇಕು. ಸರ್ಕಾರ ಹೊರಡಿಸಿರುವ ಪಿಆರ್‌ಸಿ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಳಗಾದರೆ ಸಾಕು ಆರ್ಎಸ್ಎಸ್, ಬಿಜೆಪಿ ತೆಗಳುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಏನೇ ಆದರೂ ಅವರು ಚಿಂತಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಪ್ರದೀಪ ಶೆಟ್ಟರ್, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮುಖಂಡರಾದ ಡಾ. ಕ್ರಾಂತಿಕಿರಣ, ರಾಜು ಕೋರ್ಯಾಣಮಠ ಸೇರಿದಂತೆ ಹಲವರಿದ್ದರು.