ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳವನ್ನು ಶುದ್ಧೀಕರಣ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧವೇ ಉತ್ತರಾಖಂಡ ಪೊಲೀಸರು ದುರುದ್ದೇಶದಿಂದ ಎಫ್‌ಐಆರ್ ದಾಖಲಿಸಿದ್ದಾರೆ.
ಹುಬ್ಬಳ್ಳಿ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳವನ್ನು ಶುದ್ಧೀಕರಣ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧವೇ ಉತ್ತರಾಖಂಡ ಪೊಲೀಸರು ದುರುದ್ದೇಶದಿಂದ ಎಫ್‌ಐಆರ್ ದಾಖಲಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ನಡೆದ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವ ಸಂತೋಷ ಲಾಡ್, ರಾಹುಲ್ ಗಾಂಧಿ ಅವರು ತಪ್ಪನ್ನು ತಪ್ಪು ಎಂದು ಹೇಳಿದ್ದಕ್ಕೆ ಅವರ ವಿರುದ್ಧ ಕೇಂದ್ರ ಸರ್ಕಾರ ಸುಳ್ಳು ಎಫ್‌ಐಆರ್ ದಾಖಲಿಸಿದೆ ಎಂದು ಆರೋಪಿಸಿದರು. ಪ್ರಕರಣ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದು, ನಮಗೆ ನ್ಯಾಯ ದೊರಕುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ಸ್ವಾತಂತ್ರ್ಯ ದೊರೆತು 80 ವರ್ಷಗಳಾದರೂ ದೇಶದಲ್ಲಿ ಜಾತೀಯತೆ ಹಾಗೂ ಅಸ್ಪೃಶ್ಯತೆ ಸಂಪೂರ್ಣವಾಗಿ ನಿಂತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವುದು ಖಂಡನೀಯ. ಇಂತಹ ಕೀಳು ಪದ್ಧತಿಯನ್ನು ರಾಹುಲ್ ಗಾಂಧಿ ಖಂಡಿಸಿದ್ದಕ್ಕೆ ಅವರ ಮೇಲೆಯೇ ಎಫ್‌ಐಆರ್ ದಾಖಲಿಸಲಾಗಿದೆ. ಮೊದಲು ಅಸ್ಪೃಶ್ಯತೆ ನಿಲ್ಲಬೇಕು. ಅದನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ನಿಲುವನ್ನು ವಿರೋಧಿಸಿ ಇಂದು ಬೀದಿಗಿಳಿದು ಪ್ರತಿಭಟಿಸುತ್ತಿದ್ದೇವೆ ಎಂದು ಹೇಳಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರಾಹುಲ್ ಗಾಂಧಿ ವಿರುದ್ಧದ ಸುಳ್ಳು ಎಫ್‌ಐಆರ್ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮಹಿಳಾ ಜಿಲ್ಲಾಧ್ಯಕ್ಷೆ ಗೌರಮ್ಮ ಬಲೂಗಿ, ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ, ಸದಾನಂದ ಡಂಗನವರ, ವಿನೋದ ಅಸೂಟಿ, ಪಾಲಿಕೆ ಸದಸ್ಯರಾದ ಆರೀಫ ಭದ್ರಾಪುರ, ಸುವರ್ಣಾ ಕಲ್ಲಕುಂಟ್ಲಾ, ಚೇತನ ಹಿರೇಕೆರೂರ, ಷಣ್ಮುಖ ಶಿವಳ್ಳಿ, ಮುಖಂಡ ನಾಗರಾಜ ಗೌರಿ ಸೇರಿದಂತೆ ಹಲವರಿದ್ದರು.