ಶೃಂಗೇರಿ ತಾಲೂಕು ಪಂಚಾಯಿತಿ ಇಓ ಮೇಲೆ ಕಾಂಗ್ರೆಸ್ ಮುಖಂಡರೊಬ್ಬರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಶೃಂಗೇರಿ ತಾಲೂಕು ಪಂಚಾಯಿತಿ ಇಓ ಮೇಲೆ ಕಾಂಗ್ರೆಸ್ ಮುಖಂಡರೊಬ್ಬರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶೃಂಗೇರಿ ತಾಪಂ ಇಓ ಸುದೀಪ್ ಅವರ ಮೇಲೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಹಲ್ಲೆಗೀಡಾದ ಇಓ ಗಂಭೀರವಾಗಿ ಗಾಯಗೊಂಡು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಸೆ.19ರಂದು ಬಾಳೆಹೊನ್ನೂರಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕಸ್ತೂರಿ ರಂಗನ್ ವರದಿ ಸಂಬಂಧ ಸಂವಾದ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದ ಕರ್ತವ್ಯ ಮುಗಿಸಿ ವಾಪಸ್ ತೆರಳುವಾಗ ಹೇರೂರಿನ ನವರತ್ನ ಗಾರ್ಡನ್ ಹೋಟೆಲ್‌ಗೆ ಇತರೆ ಸಿಬ್ಬಂದಿ ಜತೆಗೆ ಊಟಕ್ಕೆ ತೆರಳಿದ್ದಾರೆ. ಊಟ ಮುಗಿಸಿ ವಾಪಸ್ ಬಂದಾಗ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ತನ್ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.ತಾಪಂ ಇಓ ಕರ್ತವ್ಯಕ್ಕೆ ರಾಜೀನಾಮೆ ನೀಡುವಂತೆ ಹಾಗೂ ಇಲ್ಲದಿದ್ದರೆ ಇಲ್ಲಿಂದ ಬೇರೆ ಕಡೆಗೆ ವರ್ಗಾವಣೆ ಹೋಗುವಂತೆ ಒತ್ತಾಯಿಸಿದ್ದಾರೆ ಎಂದು ದೂರಿ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿ ತಾಪಂ ಇಓ ಸುದೀಪ್ ವಿರುದ್ಧ ಹೇರೂರು ಶಾಂತಿಪುರದ ಕಾಂಗ್ರೆಸ್ ಮುಖಂಡ ನಾಗೇಶ್ ಅಮೀನ್ ಎಂಬುವರು ದೂರು ನೀಡಿದ್ದು, ತಾಪಂ ಇಓ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಎರಡೂ ಪ್ರಕರಣಗಳು ಬಾಳೆಹೊನ್ನೂರು ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.ತಾಪಂ, ಗ್ರಾಪಂ ಅಧಿಕಾರಿಗಳಿಂದ ಠಾಣೆಗೆ ಮನವಿ: ಶೃಂಗೇರಿ ತಾಪಂ ಇಓ ಸುದೀಪ್ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಪಂಗಳ ಇಓಗಳು ಹಾಗೂ ವಿವಿಧ ಗ್ರಾಪಂಗಳ ಪಿಡಿಓ, ಕಾರ್ಯದರ್ಶಿಗಳು ಬಾಳೆಹೊನ್ನೂರು ಠಾಣೆಗೆ ಸೋಮವಾರ ಬಂದು ಇಓ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಓ ಮೇಲೆ ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಕ್ಷೇತ್ರದಲ್ಲಿ ಸರ್ಕಾರಿ ನೌಕರರು, ಅಧಿಕಾರಿಗಳ ಮೇಲೆ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆ ಹೆಚ್ಚಾಗಿದೆ. ಹೀಗಾದಲ್ಲಿ ಅಧಿಕಾರಿಗಳು, ನೌಕರರು ಕೆಲಸ ಮಾಡಲು ಸಾಧ್ಯವಿಲ್ಲ. ತಾಪಂ ಇಓ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸಾಮಾನ್ಯ ಪ್ರಕರಣಗಳನ್ನು ಮಾತ್ರ ದಾಖಲಿಸಿದ್ದು, ಸರ್ಕಾರಿ ಕರ್ತವ್ಯ ಮುಗಿಸಿ ತೆರಳುತ್ತಿದ್ದ ಅಧಿಕಾರಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಸೆಕ್ಷನ್‌ಗಳನ್ನು ದಾಖಲಿಸಿ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.