ರೈತರ ಬದುಕಿಗೆ ಬೆಂಬಲ, ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಗೌರವ ಹಾಗೂ ಪರಿಸರ ಸಂರಕ್ಷಣೆಗೆ ಬದ್ಧತೆ ತೋರುವ ಮೂರು ಆಶಯಗಳನ್ನು ಒಗ್ಗೂಡಿಸಿರುವ ಕಡಲೆಕಾಯಿ ಪರಿಷೆ ಮತ್ತಷ್ಟು ಯಶಸ್ವಿಯಾಗಲಿ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದರು.

ಬೆಂಗಳೂರು : ರೈತರ ಬದುಕಿಗೆ ಬೆಂಬಲ, ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಗೌರವ ಹಾಗೂ ಪರಿಸರ ಸಂರಕ್ಷಣೆಗೆ ಬದ್ಧತೆ ತೋರುವ ಮೂರು ಆಶಯಗಳನ್ನು ಒಗ್ಗೂಡಿಸಿರುವ ಕಡಲೆಕಾಯಿ ಪರಿಷೆ ಮತ್ತಷ್ಟು ಯಶಸ್ವಿಯಾಗಲಿ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದರು.

ಶನಿವಾರ ನಗರದ ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ 10ನೇ ವರ್ಷದ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿ ಮಾತನಾಡಿ, ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉತ್ಸವದ ಸಾರ್ಥಕತೆಗೆ ಕೈಜೋಡಿಸಬೇಕು ಎಂದರು.

ಪ್ಲಾಸ್ಟಿಕ್ ಮುಕ್ತ ಅಭಿಯಾನ

ಈ ಬಾರಿಯ ಪರಿಷೆಯ ವಿಶೇಷ ಆಕರ್ಷಣೆ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಭಾಗವಾಗಿ ಸುಮಾರು 3 ಲಕ್ಷ ಕಾಗದದ ಚೀಲಗಳ ವಿತರಣೆಯ ಯೋಜನೆ ಅತ್ಯಂತ ಪ್ರಶಂಸನೀಯ. ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಚ್ಛ ಮತ್ತು ಸುಸ್ಥಿರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ನವೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ಪರಿಷೆ

ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ಗೆಳೆಯರ ಬಳಗದ ಸಹಯೋಗದಲ್ಲಿ ನವೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಪರಿಷೆ ರೈತರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಪಾಲಿಗೆ ವಿಶೇಷ ಆಕರ್ಷಣೆಯಾಗಿದೆ ಎಂದರು. ಪ್ಲಾಸ್ಟಿಕ್ ಬಳಕೆ ತಡೆಯಲು ಸುಮಾರು 3 ಲಕ್ಷ ಕಾಗದದ ಚೀಲಗಳನ್ನು ವಿತರಿಸಲಾಗಿದೆ. ಪ್ರತಿ ಅಂಗಡಿಗೆ ಗ್ರಾಹಕರಿಗೆ ಸುಮಾರು 400 ಕಾಗದದ ಕವರ್ ವಿತರಿಸಲಾಗಿದೆ ಎಂದರು.

ಈ ವರ್ಷದ 29ರಂದು ‘ಹುಣ್ಣಿಮೆ ಹಾಡು 2026ರ ರಾಜ್ಯೋತ್ಸವ ವಾರ್ಷಿಕ ಪ್ರಶಸ್ತಿ’ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಜಿಲ್ಲೆಯ ಗ್ರಾಮದಲ್ಲಿ ಸುಮಾರು 62 ವರ್ಷದಿಂದ ಏಕಾಂಗಿಯಾಗಿ ಶವಸಂಸ್ಕಾರ ನಡೆಸುತ್ತಿರುವ ಮಾನವೀಯ ಸೇವಾಕರ್ತೆ ವನಜ ಪಿ. ಪೂರ್ಣಾರ್ತಿ ಬಿಟ್ಪಾಡಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದರು.