ನನಗೆ ಜಾತಿ ಮೇಲೆ ನಂಬಿಕೆ ಇಲ್ಲ, ಮನುಷ್ಯತ್ವ ಮುಖ್ಯ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತತ್ವಗಳು, ಬಸವಣ್ಣನವರ ಆಶಯಗಳ ಮೇಲೆ ನಾನು ರಾಜಕಾರಣ ಮಾಡುತ್ತಿದ್ದು, ನನ್ನ 40 ವರ್ಷಗಳ ರಾಜಕಾರಣದಲ್ಲಿ ಯಾರನ್ನೂ ನೀನು ಯಾವ ಜಾತಿ ಎಂದು ಕೇಳಿಲ್ಲ. ಮಾನವೀಯತೆಯೇ ಬಹುದೊಡ್ಡ ಧರ್ಮ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕನಕಪುರ
ನನಗೆ ಜಾತಿ ಮೇಲೆ ನಂಬಿಕೆ ಇಲ್ಲ, ಮನುಷ್ಯತ್ವ ಮುಖ್ಯ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತತ್ವಗಳು, ಬಸವಣ್ಣನವರ ಆಶಯಗಳ ಮೇಲೆ ನಾನು ರಾಜಕಾರಣ ಮಾಡುತ್ತಿದ್ದು, ನನ್ನ 40 ವರ್ಷಗಳ ರಾಜಕಾರಣದಲ್ಲಿ ಯಾರನ್ನೂ ನೀನು ಯಾವ ಜಾತಿ ಎಂದು ಕೇಳಿಲ್ಲ. ಮಾನವೀಯತೆಯೇ ಬಹುದೊಡ್ಡ ಧರ್ಮ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ನಗರದ ತಾಲೂಕು ಮೈದಾನದಲ್ಲಿ ತಾಲೂಕು ಬಲಗೈ ಸಮುದಾಯ ಒಕ್ಕೂಟ ಆಯೋಜಿಸಿದ್ದ ಕೃತಜ್ಞತಾ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಸಿಕ್ಕ ಈ ಅಧಿಕಾರ ನನ್ನದಲ್ಲ, ನಿಮ್ಮದು. 10 ಬಾರಿ ಸಾತನೂರು, ಕನಕಪುರ ಮಹಾಜನತೆ ನನ್ನನ್ನು ಆರಿಸಿ ಆಶೀರ್ವದಿಸಿ ಕಳುಹಿಸಿದ್ದೀರಿ. ಇಂದಿನ ಈ ಅಭಿಮಾನದ ಸನ್ಮಾನದ ಶ್ರೇಯ ನಿಮಗೇ ಸಲ್ಲಬೇಕು. ಸೇವೆ ಮಾಡುವ ಭಾಗ್ಯ ಕೊಟ್ಟಿದ್ದೀರಿ. ನೀವು ಇಟ್ಟಿರುವ ನಂಬಿಕೆ ಉಳಿಸಿಕೊಂಡು, ಕ್ಷೇತ್ರದ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದು ವಾಗ್ದಾನ ನೀಡಿದರು.
ಮಳವಳ್ಳಿಯಿಂದ ಕುಣಿಗಲ್ ಗಡಿ, ದೇವನಹಳ್ಳಿ ತನಕ ನಾವೆಲ್ಲ ಬೆಂಗಳೂರು ಜಿಲ್ಲೆಯವರು. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟ ಮೇಲೆ ಆಸ್ತಿಗಳ ಮೌಲ್ಯ ಹೆಚ್ಚಾಗಿದೆ ಅಂತ ನಿಮಗೆಲ್ಲಾ ತಿಳಿದಿದೆ. ಡಿ ಕೆ ಶಿವಕುಮಾರ್ ರಿಯಲ್ ಎಸ್ಟೇಟ್ ಮಾಡೋಕೆ ಹೆಸರು ಬದಲಿಸಿದ್ದಾನೆ ಅಂತ ಒಬ್ಬ ಮಹಾ ನಾಯಕರೊಬ್ಬರು ಆರೋಪಿಸಿದ್ದು ನಾನು ನಿಮ್ಮ ಬಳಿ ಯಾವತ್ತಾದರೂ ಬಂದು ಭೂ ವ್ಯವಹಾರಗಳನ್ನು ಮಾಡಿದ್ದೀನಾ? ಎಂದು ಪ್ರಶ್ನಿಸಿದರು.ನಾನು ನಿಮ್ಮ ಮಗನಂತೆ, ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆ. ನಾನು ಮುಖ್ಯಮಂತ್ರಿ ಆಗಿರಬಹುದು. ಆದರೆ, ಇಲ್ಲಿ ಮುಖ್ಯಮಂತ್ರಿ ಎಂದು ನಿಮ್ಮ ಬಳಿ ತೋರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಒಂದು ಬಾರಿ ಚಂದ್ರಶೇಖರ್ ಮೂರ್ತಿ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಬಂತು. ಆಗ ನನಗೆ ಟಿಕೆಟ್ ತಪ್ಪಿದ ಸಂದರ್ಭದಲ್ಲಿ ನೀವೆಲ್ಲಾ ನನ್ನ ಬೆಂಬಲಕ್ಕೆ ನಿಂತು, ಸೈಕಲ್ ಗುರುತಲ್ಲಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಫೋಟೋ ಇಟ್ಟು ಚುನಾವಣೆ ಪ್ರಚಾರ ಮಾಡಿದ್ದೀರಾ. ಅವತ್ತು ಪರಿಶಿಷ್ಟ ಜಾತಿ, ಧರ್ಮ, ಹಿಂದುಳಿದ ವರ್ಗ ಎಲ್ಲರೂ ಕೂಡ ಮತ ಹಾಕಿ ನನಗೆ ಬೆಂಬಲಿಸಿದಿರಿ. ಕೇವಲ 3 ಸಾವಿರ ಮತ ಪಡೆದೆ. ಆದರೆ, ಎರಡನೇ ಬಾರಿ ನನ್ನನ್ನು ತುಂಬು ಹೃದಯದಿಂದ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟವರು ನೀವು. ಇದನ್ನು ಮರೆಯಲು ಸಾಧ್ಯವಿಲ್ಲ, ಆದರೆ, ಈ ಬಾರಿ ನಿಮ್ಮನ್ನು ಮತ ಕೇಳಲು ಬರಲೇ ಇಲ್ಲ. ಸಿದ್ದರಾಮಯ್ಯನವರು ಮತ್ತು ನಾನು ರಾಜ್ಯದ ಪ್ರವಾಸ ಮಾಡಿದೆವು. 136 ಸೀಟ್ ಬಂತು. ಈ ಕ್ಷೇತ್ರದ, ರಾಜ್ಯದ ಮಹಾಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ, 5 ಗ್ಯಾರಂಟಿಗಳನ್ನು ಕೊಟ್ಟಿದ್ದೇನೆ. ಕ್ಷೇತ್ರದ ಮನೆ ಯಜಮಾನಿ ಖಾತೆಗೆ 2 ಸಾವಿರ, ಬಸ್‌ನಲ್ಲಿ ಉಚಿತ ಪ್ರಯಾಣ ಅವಕಾಶ ನೀಡಿದ್ದೇವೆ. ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿದ್ದೇವೆ” ಎಂದರು.
ಪಿಂಚಣಿಗೆ ಲಂಚ ತಪ್ಪಿಸಿದ್ದೇನೆ:ಹಿಂದೆ ಕುಮಾರಸ್ವಾಮಿ ಅವರು ಮುಕ್ಯಮಂತ್ರಿಗಳಾದಾಗ ಪಿಂಚಣಿ ಕೊಡಲು ಅರ್ಜಿ ಹಾಕಿದರೆ 2 ಸಾವಿರ ಲಂಚ ಕೊಡಬೇಕಿತ್ತು. ಅದನ್ನು ತಪ್ಪಿಸಲೆಂದೇ ನಾನು ಸಮಿತಿ ಮಾಡಿ, ಅರ್ಜಿ ಪಡೆದು ಮನೆ ಬಾಗಿಲಿಗೆ ವೃದ್ಧಾಪ್ಯ, ಎಲ್ಲ ರೀತಿಯ ಪಿಂಚಣಿ ತಲುಪಿಸುತ್ತಿದ್ದೇವೆ. ಬಡವರಿಗಾಗಿ 15 ಸಾವಿರ ಸೈಟುಗಳನ್ನು ನೀಡಲು ಸಿದ್ದತೆಯಾಗಿದೆ. ಕನಕಪುರದಲ್ಲಿ 80 ಸೈಟು ಹಂಚಿದ್ದೇವೆ. ಬಡವರಿಗೆ 20-30 ಅಳತೆ ಸೈಟಿನ ಬದಲಾಗಿ 30-40 ನಿವೇಶನಗಳನ್ನು ವಿತರಿಸುವಂತೆ ಮಾರ್ಗದರ್ಶನ ನೀಡಿದ್ದೇನೆ,ಎಲ್ಲಾ ಬಡವರು ಕಾರು ತೆಗೆದುಕೊಳ್ಳಬೇಕು, ಹಸು ಕಟ್ಟಬೇಕು. ಅನ್ನೋದು ನನ್ನ ಆಸೆ. ಇದಕ್ಕಾಗಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ ಎಂದರು.
ಮೇಕೇದಾಟು ಪೂರ್ಣ ಶತಸಿದ್ಧ:ನಮ್ಮ ಕ್ಷೇತ್ರದ ಜನ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು. ಯಾರೂ ವಲಸೆ ಹೋಗಬಾರದು. ಹೀಗಾಗಿ, ನಾನು ಚನ್ನಪಟ್ಟಣ-ರಾಮನಗರದ ಮಧ್ಯೆ ಬೃಹತ್ ಹಾಲಿನ ಡೇರಿ ಮಾಡಿ, ಹಾಲಿನ ಬೆಲೆ 7 ರು. ಹೆಚ್ಚಳ ಮಾಡಿ, ರೈತರ ಬದುಕು ಹಸನಾಗಲಿ ಎಂದು ನೀಡುತ್ತಿದ್ದೇವೆ. ಕೆರೆಗಳಿಗೆ ನೀರನ್ನು ತುಂಬುವ ಯೋಜನೆ ರೂಪಿಸಿದ್ದೇವೆ. ಇನ್ನೆರಡು ತಿಂಗಳಲ್ಲಿ ಪ್ರತಿ ಹಳ್ಳಿಗೂ ಕಾವೇರಿ ನೀರನ್ನು ಹರಿಸುವ ಸಿದ್ದತೆ ಮಾಡಿಕೊಂಡಿದ್ದೇವೆ. ಬೆಂಗಳೂರು ದಕ್ಷಿಣ ಅಂತ ಹೆಸರಿಟ್ಟಿದ್ದೀರಿ, ಮೇಕೆದಾಟು ಯೋಜನೆ ಪೂರ್ಣಗೊಳಿಸಿ ಎಂದು ಕ್ಷೇತ್ರದ ಜನ ಆದೇಶ ಮಾಡಿದ್ದಾರೆ. ಅದಕ್ಕೆ ತಲೆಬಾಗಿ ಯೋಜನೆ ರೂಪಿಸಿದ್ದೇವೆ. ಸುಪ್ರಿಂಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಇದು ನನ್ನ ಅವಧಿಯಲ್ಲೇ ಪೂರ್ಣಗೊಳ್ಳಬೇಕು. ಆ ಕೆಲಸವನ್ನು ಮಾಡುತ್ತೇನೆ ಎಂದು ವಾಗ್ದಾನ ನೀಡಿದರು.
ಬೆಂಗಳೂರು ದಕ್ಷಿಣದಲ್ಲಿ 4 ಮೆಡಿಕಲ್ ಕಾಲೇಜು:ಬೆಂಗಳೂರ ದಕ್ಷಿಣದಲ್ಲಿ 4 ಮೆಡಿಕಲ್ ಕಾಲೇಜುಗಳಿವೆ. ಚನ್ನಪಟ್ಟಣ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು, ರಾಮನಗರದಲ್ಲಿ ಯೂನಿರ್ವಸಿಟಿ, ಹಾರೋಹಳ್ಳಿ, ಕನಕಪುರ ಮಧ್ಯೆ ದಯಾನಂದ ಸಾಗರ ಕಾಲೇಜು. ಇಡೀ ದೇಶದಲ್ಲಿ ನಾಲ್ಕು ಮೆಡಿಕಲ್ ಕಾಲೇಜು ಎಲ್ಲೂ ಇಲ್ಲ. ನಮ್ಮ ಕ್ಷೇತ್ರದಲ್ಲಿ ಮಾತ್ರ. ನಮ್ಮ ಕ್ಷೇತ್ರದ ಜನರ ಬದುಕಿನಲ್ಲಿ ಬದಲಾವಣೆ ಆಗಬೇಕು. ಸಾತನೂರು ಕೆಂಬಾಳ ಹತ್ತಿರ, ಕಲ್ಲಹಳ್ಳಿ, ಮರಿಯ್ಯನ ದೊಡ್ಡಿ ಮುಂತಾದ 10 ಕಡೆ ಶಾಲೆಗಳು ನಿರ್ಮಾಣ ಆಗುತ್ತಿವೆ. ನಮ್ಮ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಸಿಗಬೇಕು. ನಾನು ಪಡೆದ ವಿದ್ಯಾಭ್ಯಾಸಕ್ಕಿಂತ ನೀವು ಚೆನ್ನಾಗಿ ಪಡೆದುಕೊಳ್ಳಬೇಕು. ಸ್ವಾಭಿಮಾನ, ಸ್ವಾವಲಂಬನೆಯಿಂದ ಬದುಕಬೇಕು ಎನ್ನುವುದು ನನ್ನ ಆಸೆ ಎಂದರು.
ಮೈಸೂರಿನ ಶ್ರೀ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಸಚಿವ ಪಿ.ಎಂ.ನರೇಂದ್ರಸ್ವಾಮಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್ ರವಿ, ಎಂಎಲ್ ಸಿ ಸುಧಾಮ್ ದಾಸ್, ಆರ್‌ಇಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಎಚ್ ಕೆ ಶ್ರೀಕಂಠ ಮತ್ತಿತರರು ಉಪಸ್ಥಿತರಿದ್ದರು.