ರೈತರು ನಿತ್ಯ ಖರೀದಿ ಕೇಂದ್ರಕ್ಕೆ ಆಗಮಿಸಿ ಖಾಲಿ ಚೀಲ ಪೂರೈಕೆಯಾಗಿದೆಯೇ? ಯಾವಾಗ ಪೂರೈಕೆಯಾಗಬಹುದು ಎಂದು ವಿಚಾರಿಸುತ್ತಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಇನ್ನೂ ಖಾಲಿ ಚೀಲ ಬಂದಿಲ್ಲ ಎಂದು ಹೇಳುತ್ತಾ ರೈತರನ್ನು ಸಾಗಹಾಕುತ್ತಿದ್ದಾರೆ.
ಎಸ್.ಜಿ. ತೆಗ್ಗಿನಮನಿನರಗುಂದ: ಬೆಂಬಲ ಬೆಲೆಯಡಿ ತಾಲೂಕಿನ ಹಲವೆಡೆ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ ಕಳೆದ 10 ದಿನಗಳಿಂದ ಕಡಲೆ ತೂಕ ಮಾಡಲು ಖಾಲಿ ಚೀಲಗಳನ್ನು ತರಿಸದೇ ಇರುವುದರಿಂದ ತಾಲೂಕಿನ 10 ಖರೀದಿ ಕೇಂದ್ರಗಳನ್ನೇ ಬಂದ್ ಮಾಡಲಾಗಿದೆ. ಇದರಿಂದ ಬೆಲೆ ಇಳಿಕೆ ಸಂಕಷ್ಟದಲ್ಲಿರುವ ರೈತರಿಗೆ ಮತ್ತೊಂದು ತೊಂದರೆ ಎದುರಾಗಿದೆ.
ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಖುಷ್ಕಿ ಹಾಗೂ ನೀರಾವರಿ ಜಮೀನುಗಳಲ್ಲಿ ಹೆಚ್ಚಾಗಿ ಕಡಲೆ ಬೆಳೆದಿದ್ದಾರೆ. ರೈತರು ಕಡಲೆ ಕಟಾವು ಮಾಡುವ ಪೂರ್ವದಲ್ಲಿ ಪ್ರತಿ 1 ಕ್ವಿಂಟಲ್ ಗೆ ಮಾರುಕಟ್ಟೆಯಲ್ಲಿ ₹5800ರಿಂದ ₹6 ಸಾವಿರ ವರೆಗೆ ಧಾರಣೆ ಇತ್ತು. ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಕ್ವಿಂಟಲ್ ಕಡಲೆಗೆ 4800ರಿಂದ 5 ಸಾವಿರದ ವರೆಗೆ ಇಳಿದಿತ್ತು.ರೈತರ ಅನುಕೂಲಕ್ಕಾಗಿ ಇತ್ತೀಚೆಗೆ ಸರ್ಕಾರ ಬೆಂಬಲ ಬೆಲೆಯಡಿ ಕಡಲೆ ಖರೀದಿ ಕೇಂದ್ರ ತೆರೆಯಲು ಆದೇಶಿಸಿತ್ತು. ಅದಕ್ಕಾಗಿ ಪ್ರತಿ ಕ್ವಿಂಟಲ್ ಕಡಲೆಗೆ ₹5878 ಬೆಂಬಲ ಬೆಲೆ ನಿಗದಿ ಮಾಡಿತ್ತು. ಪಟ್ಟಣದ ಟಿಎಪಿಎಂಸಿ, ತಾಲೂಕಿನ ಚಿಕ್ಕ ನರಗುಂದ, ಜಗಾಪುರ, ಶಿರೋಳ, ಸುರಕೋಡ, ಸಂಕದಾಳ, ಕೊಣ್ಣೂರು, ಹಿರೇಕೊಪ್ಪ, ಖಾನಾಪುರ ಗ್ರಾಮದ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಅಲ್ಲದೇ ಕಡಲೆ ಮಾರಾಟ ಮಾಡಲು ತಾಲೂಕಿನ 20732 ರೈತರು ನೋಂದಣಿ ಮಾಡಿಸಿದ್ದಾರೆ.
ಈ ಪೈಕಿ ಈಗಾಗಲೇ 10732 ರೈತರು ಕಡಲೆ ಮಾರಾಟ ಮಾಡಿದ್ದಾರೆ. ಉಳಿದ 9 ಸಾವಿರಕ್ಕೂ ಅಧಿಕ ರೈತರು ಕಡಲೆ ಮಾರಾಟಕ್ಕೆ ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ ಖಾಲಿಯಾದ ಖಾಲಿ ಚೀಲಗಳು. ಅಧಿಕಾರಿಗಳು ಅಗತ್ಯಕ್ಕೆ ಅನುಸಾರವಾಗಿ ಖಾಲಿ ಚೀಲಗಳನ್ನು ತರಿಸಿಲ್ಲ. ಹೀಗಾಗಿ ಕಳೆದ 10 ದಿನಗಳಿಂದ ಖರೀದಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಇದರಿಂದ ರೈತರು ನಿತ್ಯ ಖರೀದಿ ಕೇಂದ್ರಕ್ಕೆ ಆಗಮಿಸಿ ಖಾಲಿ ಚೀಲ ಪೂರೈಕೆಯಾಗಿದೆಯೇ? ಯಾವಾಗ ಪೂರೈಕೆಯಾಗಬಹುದು ಎಂದು ವಿಚಾರಿಸುತ್ತಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಇನ್ನೂ ಖಾಲಿ ಚೀಲ ಬಂದಿಲ್ಲ ಎಂದು ಹೇಳುತ್ತಾ ರೈತರನ್ನು ಸಾಗಹಾಕುತ್ತಿದ್ದಾರೆ.ಅವಧಿ ಮುಗಿಯುವ ಆತಂಕ: ಬೆಂಬಲ ಬೆಲೆಯಡಿ ಕಡಲೆ ಮಾರಾಟಕ್ಕೆ ಏ. 30ರ ವರೆಗೆ ಅವಕಾಶ ಇದೆ. ಕಳೆದ 10 ದಿನಗಳಿಂದ ಖಾಲಿ ಚೀಲಗಳು ಬಾರದಿರುವುದರಿಂದ ಕೆಲವು ದಿನಗಳಲ್ಲಿ ಮಾರಾಟ ಅವಧಿಯೇ ಮುಗಿಯಲಿದೆ. ಅಷ್ಟರೊಳಗೆ ಖಾಲಿ ಚೀಲಗಳು ಬಂದರೆ ರೈತರಿಗೆ ಅನುಕೂಲ. ಇಲ್ಲದಿದ್ದರೆ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಫಸಲು ಮಾರಾಟ ಮಾಡುವ ಪರಿಸ್ಥಿತಿ ಉದ್ಭವವಾಗಲಿದೆ ಎಂದು ರೈತರು ಅಳಲು ತೋಡಿಕೊಂಡರು.
ರೈತರಿಗೆ ತೊಂದರೆ: ಸರ್ಕಾರ ನಿಗದಿ ಮಾಡಿದ ಅವಧಿಯಲ್ಲಿ ಕಡಲೆ ತೂಕ ಮಾಡಿಸುವ ಜವಾಬ್ದಾರಿಯನ್ನು ತಾಲೂಕು ಕೆಎಸ್ಸಿಎಂಎಫ್ ಅಧಿಕಾರಿ ಹೊಂದಿರುತ್ತಾರೆ. ಆದರೆ ಈ ಅಧಿಕಾರಿ ಸಮಯಕ್ಕೆ ಸರಿಯಾಗಿ ತೂಕದ ಖಾಲಿ ಚೀಲ ತರಿಸದೇ ಇರುವುದರಿಂದ ರೈತರಿಗೆ ತೊಂದರೆ ಆಗಿದೆ. ಆದ್ದರಿಂದ ಈ ಅಧಿಕಾರಿ ಮೇಲೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಸ್. ಪಾಟೀಲ ತಿಳಿಸಿದರು.ಮನವಿ ಮಾಡಿದ್ದೇವೆ: ಕಡಲೆ ಮಾರಾಟ ಮಾಡುವ ರೈತರಿಗೆ 20 ಸಾವಿರ ತೂಕದ ಖಾಲಿ ಚೀಲ ಬೇಕೆಂದು ಮನವಿ ಮಾಡಿದ್ದೇವೆ. ಕೊಲ್ಕತ್ತಾದಿಂದ ಖಾಲಿ ಚೀಲಗಳು ಬಂದ ತಕ್ಷಣವೇ ರೈತರಿಂದ ಕಡಲೆ ಖರೀದಿ ಪ್ರಕ್ರಿಯೆ ಪ್ರಾರಂಭಿಸುತ್ತೇವೆ ಎಂದು ಕೆಎಸ್ ಸಿಎಂಎಫ್ ತಾಲೂಕು ವ್ಯವಸ್ಥಾಪಕ ಸಚಿನ ಪಾಟೀಲ ತಿಳಿಸಿದರು.