ಹನ್ನೆರಡು ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ ಶನಿವಾರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಜ.1ರಿಂದ 2 ಸಾವಿರ ರು. ಗೌರವ ಧನ ಹೆಚ್ಚಳ ಮಾಡುವ ಸರ್ಕಾರದ ಘೋಷಣೆಗೆ ಮುಖಂಡರು ಒಪ್ಪಿ ಹೋರಾಟ ಹಿಂಪಡೆಯುವ ಘೋಷಣೆ
ಬೆಂಗಳೂರು : ಹನ್ನೆರಡು ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ ಶನಿವಾರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಜ.1ರಿಂದ 2 ಸಾವಿರ ರು. ಗೌರವ ಧನ ಹೆಚ್ಚಳ ಮಾಡುವ ಸರ್ಕಾರದ ಘೋಷಣೆಗೆ ಮುಖಂಡರು ಒಪ್ಪಿ ಹೋರಾಟ ಹಿಂಪಡೆಯುವ ಘೋಷಣೆ ಮಾಡಿದರೂ, ನಂತರ ಮುಖಂಡರ ನಿಲುವು ಒಪ್ಪದ ಆಶಾ ಕಾರ್ಯಕರ್ತೆಯರು ಸರ್ಕಾರದಿಂದ ಲಿಖಿತ ಭರವಸೆಗೆ ಪಟ್ಟು ಹಿಡಿದು ಹೋರಾಟ ಮುಂದುವರೆಸಿದ್ದಾರೆ.
ಮೂಲಗಳ ಪ್ರಕಾರ, ಯಾವುದೇ ಕ್ಷಣದಲ್ಲಿ ಈ ಲಿಖಿತ ಭರವಸೆ ಆಶಾ ಕಾರ್ಯಕರ್ತೆಯರ ಕೈ ಸೇರುವ ಸಾಧ್ಯತೆಯಿರುವ ಕಾರಣ ಹೋರಾಟ ತಾರ್ಕಿಕವಾಗಿ ಅಂತ್ಯ ಕಂಡಂತಾಗಿದೆ. ತನ್ಮೂಲಕ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕೊನೆ ಹಾಡಲು ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಖುದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಡೀ ದಿನ ನಡೆಸಿದ ಸರಣಿ ಸಭೆಗಳು ಯಶಸ್ವಿಯಾದಂತಾಗಿದೆ.
ಮಾಸಿಕ ಗೌರವಧನ 15,000 ರು.ಗೆ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.17 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ಮುಖಂಡರೊಂದಿಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಹಲವು ಸುತ್ತಿನ ಸಭೆ ನಡೆಸಿದ್ದರೂ ಆಶಾಗಳು ಪಟ್ಟು ಸಡಿಲಿಸಿರಲಿಲ್ಲ. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಸಂಜೆ ಸಂಧಾನ ನಡೆಸಿ ಮುಖಂಡರ ಮನವೊಲಿಸಿದ್ದರು. ಆದರೆ ಮುಖಂಡರ ನಿರ್ಧಾರಕ್ಕೆ ಆಶಾಗಳು ತೀವ್ರ ವಿರೋಧ ವ್ಯಕ್ತಪಡಿಸಿ, ನಡಾವಳಿಗೆ ಪಟ್ಟು ಹಿಡಿದಿದ್ದರಿಂದ ಅನಿವಾರ್ಯವಾಗಿ ಹೋರಾಟ ಮುಂದುವರೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೂ ಮುನ್ನ, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸಭೆ ನಡೆಸುವಂತೆ ಶಿವಕುಮಾರ್ ಅವರು ಸೂಚನೆ ನೀಡಿದ್ದರಿಂದ ಯು.ಟಿ.ಖಾದರ್ ಶನಿವಾರ ಬೆಳಗ್ಗೆ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಿದರು. ಮಾಸಿಕ ಗೌರವಧನ 10 ಸಾವಿರ ರು.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರೂ ಅದಕ್ಕೆ ಮುಖಂಡರು ಒಪ್ಪಿಗೆ ಸೂಚಿಸಿರಲಿಲ್ಲ.
ಬಳಿಕ ಶಿವಕುಮಾರ್ರಿಗೆ ಕರೆ ಮಾಡಿ ಖಾದರ್ ಚರ್ಚಿಸಿದ್ದರು. ತರುವಾಯ ಮುಖಂಡರೊಂದಿಗೆ 2ನೇ ಹಂತದ ಸಭೆ ನಡೆಸಿದರೂ 15,000 ರು.ಗೆ ಪಟ್ಟು ಹಿಡಿದಿದ್ದರು. ನಂತರ ಶಿವಕುಮಾರ್ ಅವರಿಗೆ ಕರೆ ಮಾಡಿ ಖಾದರ್ ಮಾತುಕತೆಯ ಮಾಹಿತಿ ನೀಡಿದ್ದರು. ಮಾಸಿಕ ಗೌರವಧನ 1 ಸಾವಿರ ರು. ಹೆಚ್ಚಿಸುವುದಾಗಿ ಮೊದಲಿಗೆ ಪ್ರಸ್ತಾಪ ಮಾಡಿದ್ದ ಖಾದರ್, ಬಳಿಕ ಅದನ್ನು 1,500 ರು.ಗೆ ಹೆಚ್ಚಿಸುವ ಭರವಸೆ ನೀಡಿದರೂ ಆಶಾಗಳು ಸಮ್ಮತಿ ವ್ಯಕ್ತಪಡಿಸಿರಲಿಲ್ಲ.
ಮನವೊಲಿಸಿದ ಸಿಎಂ:
ಇದಾದ ಬಳಿಕ ಶಿವಕುಮಾರ್ ಅವರು ಸಂಘಟನೆಯ ನಾಯಕಿ ನಾಗಲಕ್ಷ್ಮೀ ಅವರೊಂದಿಗೆ ಮಾತನಾಡಿ ಮನವೊಲಿಸುವ ಯತ್ನ ಮಾಡಿದರು. ಕೊನೆಗೆ 2 ಸಾವಿರ ರು. ಹೆಚ್ಚಿಸುವುದಾಗಿ ಶಿವಕುಮಾರ್ ಭರವಸೆ ನೀಡಿದರೂ ಇದಕ್ಕೂ ಮುಖಂಡರು ಒಪ್ಪಿಗೆ ಸೂಚಿಸಿರಲಿಲ್ಲ. ಬಳಿಕ ಶಿವಕುಮಾರ್ ಅವರೇ ಮುಖಂಡರೊಂದಿಗೆ ಸಭೆ ನಡೆಸಿ 2 ಸಾವಿರ ರು. ಹೆಚ್ಚಿಸುವ ಪ್ರಸ್ತಾಪ ಇಟ್ಟರೂ 3 ಸಾವಿರ ರು. ಹೆಚ್ಚಳಕ್ಕೆ ಪಟ್ಟು ಹಿಡಿದರು. ಆದರೆ ಕೊನೆಗೆ ಮುಖಂಡರ ಮನವೊಲಿಸುವಲ್ಲಿ ಶಿವಕುಮಾರ್ ಯಶಸ್ವಿಯಾದರು. ಬಳಿಕ ಸಂಘಟನೆ ಮುಖಂಡರೊಂದಿಗೇ ಪತ್ರಿಕಾಗೋಷ್ಠಿ ನಡೆಸಿ ಗೌರವಧನ ಹೆಚ್ಚಳದ ಮಾಹಿತಿಯನ್ನೂ ನೀಡಿದರು.
‘ಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ರಾಜ್ಯ ಸರ್ಕಾರ 5 ಸಾವಿರ ರು, ಕೇಂದ್ರ ಸರ್ಕಾರ 2 ಸಾವಿರ ರು. ಗೌರವಧನ ನೀಡುತ್ತಿದ್ದು, ಕಾರ್ಯನಿರ್ವಹಣೆ ಆಧಾರದಲ್ಲಿ ಸರಾಸರಿ 2 ಸಾವಿರ ರು. ಪ್ರೋತ್ಸಾಹ ಧನ ಪಡೆಯುತ್ತಿದ್ದಾರೆ. ಜ.1 ರಿಂದಲೇ ರಾಜ್ಯ ಸರ್ಕಾರ ಮಾಸಿಕ ಗೌರವ ಧನವನ್ನು 2 ಸಾವಿರ ರು. ಹೆಚ್ಚಿಸಲಿದೆ’ ಎಂದು ಶಿವಕುಮಾರ್ ಘೋಷಿಸಿದರು. ಇದನ್ನು ಸ್ವಾಗತಿಸಿ ಶಿವಕುಮಾರ್ ಅವರಿಗೆ ಮುಖಂಡರು ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕರ್ತೆಯರ ತೀವ್ರ ವಿರೋಧ:
ಮುಖ್ಯಮಂತ್ರಿಗಳೊಂದಿಗೆ ಸಭೆಯ ನಂತರ ಆಶಾ ಸಂಘಟನೆ ಮುಖಂಡರು ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಿ ಸರ್ಕಾರದ ನಿರ್ಧಾರ ಪ್ರಕಟಿಸಿದಾಗ ಬಹಳಷ್ಟು ಆಶಾ ಕಾರ್ಯಕರ್ತೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಕೇವಲ 2 ಸಾವಿರ ರು. ಹೆಚ್ಚಳಕ್ಕೆ ಒಪ್ಪಿಗೆ ನೀಡಬಾರದಿತ್ತು. ಮಾಸಿಕ ಗೌರವಧನ 15 ಸಾವಿರ ರು.ಗೆ ಹೆಚ್ಚಿಸುವವರೆಗೂ ಹೋರಾಟ ನಡೆಸಬೇಕು’ ಎಂದು ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು. ಕೊನೆಗೆ ಕಾರ್ಯಕರ್ತೆಯರನ್ನು ಸಮಾಧಾನಪಡಿಸಲಾಯಿತು. ಆದರೂ ಲಿಖಿತ ಭರವಸೆಗೆ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದರಿಂದ ಒತ್ತಡಕ್ಕೆ ಮಣಿದು ನಡಾವಳಿ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಮುಖಂಡರು ಘೋಷಿಸಿದರು.
ಸಚಿವ ಅಜಯ್ ಸಿಂಗ್ ಕಸರತ್ತು
ಆರೋಗ್ಯ ಸಚಿವ ಖಾದರ್ ಅವರು ರಾಯಚೂರಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಿದ ಸಚಿವ ಅಜಯ್ ಸಿಂಗ್, ಆಶಾಗಳ ಮನವೊಲಿಸಲು ಯತ್ನಿಸಿದರು.
‘ಸಾವಿರಾರು ಸಂಖ್ಯೆಯಲ್ಲಿ ಹಗಲು-ರಾತ್ರಿ ಆಶಾಗಳು ಧರಣಿ ಮಾಡಿದ್ದೀರಿ. ಸರ್ಕಾರ ನಿಮ್ಮ ಪರ ಇದೆ ಎಂದು ಸಿಎಂ ಹೇಳಿದ್ದಾರೆ. ದೆಹಲಿಗೆ ಹೋಗುವುದನ್ನು 2 ಗಂಟೆ ಮುಂಡೂಡಿ ನಿಮ್ಮೊಂದಿಗೆ ಸಭೆ ನಡೆಸಿದ್ದಾರೆ. ಜನವರಿಯಲ್ಲೇ ನಾವು 2 ಸಾವಿರ ರು. ಕೊಡುತ್ತೇವೆ. ಜೊತೆಗೆ 1 ಸಾವಿರ ರು. ಇನ್ಸೆಂಟಿವ್ ಕೊಡುತ್ತೇವೆ. ಪ್ರತಿಭಟನೆ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ಮುಖಂಡರಿಗೆ ತರಾಟೆ
ಮಾಸಿಕ 2 ಸಾವಿರ ರು. ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ ಮುಖಂಡರ ವಿರುದ್ಧ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾರ್ಯಕರ್ತೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೋರಾಟ ಮುಂದುವರೆಸುವ ಬಗ್ಗೆ ಆಯಾ ಜಿಲ್ಲೆಗಳ ಮುಖಂಡರೊಂದಿಗೆ ಚರ್ಚಿಸಿ ಕೊನೆಗೆ ಸಮ್ಮತಿ ಸೂಚಿಸಿದರು.
ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡಲು ನಾವು ಬೊಕ್ಕೆ, ಶಾಲು ತೆಗೆದುಕೊಂಡು ಹೋಗಿಲ್ಲ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ.
- ಸೋಮಶೇಖರ್, ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ
ಜನವರಿಯಿಂದ 2 ಸಾವಿರ ರು. ಕೊಡುತ್ತೇವೆ. ಜೊತೆಗೆ ಬಜೆಟ್ನಲ್ಲಿ ಒಂದು ಸಾವಿರ ರು. ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ತುಂಬಾ ಸಂತೋಷದಿಂದ ಇದನ್ನು ನಾವು ಒಪ್ಪಿಕೊಂಡಿಲ್ಲ.
-ಡಿ.ನಾಗಲಕ್ಷ್ಮೀ, ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ
ನಮ್ಮ ಸರ್ಕಾರದ ನಿರ್ಧಾರ ಒಪ್ಪಿಕೊಂಡಿದ್ದಾರೆ: ಸಿಎಂ
ಬೆಂಗಳೂರು : ಆಶಾ ಕಾರ್ಯಕರ್ತೆಯರ ಗೌರವ ಧನ ಮಾಸಿಕ 2 ಸಾವಿರ ರು. ಹೆಚ್ಚಿಸಲು ನಿರ್ಧರಿಸಲಾಗಿದ್ದು, ಜ.1ರಿಂದಲೇ ಇದು ಅನುಷ್ಠಾನಕ್ಕೆ ಬರಲಿದೆ. ಇದನ್ನು ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ನಿಯೋಗದೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಮನವೊಲಿಸಿದ ಬಳಿಕ ಮಾತನಾಡಿ, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕಾರ್ಯಕರ್ತೆಯರೊಂದಿಗೆ ಬೆಳಗ್ಗೆ ಮಾತುಕತೆ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೌರವಧನ ಹೆಚ್ಚಿಸಿಲ್ಲ ಎಂಬುದು ಕಾರ್ಯಕರ್ತೆಯರ ಅಳಲಾಗಿತ್ತು. ಹೀಗಾಗಿ ಮಾಸಿಕ 2 ಸಾವಿರ ರು. ಗೌರವಧನ ಹೆಚ್ಚಳಕ್ಕೆ ಸರ್ಕಾರ ಒಪ್ಪಿದೆ ಎಂದು ಸ್ಪಷ್ಟಪಡಿಸಿದರು.
ಆಶಾ ಕಾರ್ಯಕರ್ತೆಯರ ಗೌರವಧನವನ್ನು ಕೇಂದ್ರ, ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಹಂಚಿಕೆ ಮಾಡಬೇಕಿದ್ದರೂ, ಕೇಂದ್ರ ತನ್ನ ಪಾಲಿನ ಅನುದಾನ ಹೆಚ್ಚಳ ಮಾಡಿಲ್ಲ. ಕೇಂದ್ರ ಸರ್ಕಾರ ಸಹ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ನಾವು ಗ್ಯಾರಂಟಿ ನೀಡುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೂ ನೀಡಿದ್ದೇವೆ. ಈಗ ಬೆಲೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗೌರವ ಧನ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಆಶಾ ಕಾರ್ಯಕರ್ತೆಯರು ನಮ್ಮ ರಾಜ್ಯದ ಆಸ್ತಿ. ಅವರೆಲ್ಲರೂ ಹಳ್ಳಿ ಹಾಗೂ ನಗರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಹಿತಕ್ಕೆ ಅವರ ಸೇವೆ ಮುಂದುವರೆಯಲಿದೆ ಎಂದು ವಿವರಿಸಿದರು.
ರಾಜಕೀಯಕ್ಕೆ ಬಳಸಲು ಯತ್ನ:
ಆಶಾ ಕಾರ್ಯಕರ್ತೆಯರ ಹೋರಾಟವನ್ನು ಕೆಲವರು ರಾಜಕಾರಣಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರೂ, ಅವರು ಅವಕಾಶ ನೀಡಿಲ್ಲ. ಅವರ ಒಗ್ಗಟ್ಟು ಮುರಿಯಲು ಕೆಲವರು ಯತ್ನಿಸಿದರೂ ಸಾಧ್ಯವಾಗಿಲ್ಲ. ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರೊಂದಿಗೆ ಗೌರವದಿಂದ ವರ್ತಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೆ. ಸರ್ಕಾರ ಅವರಿಗೆ ಗೌರವ ನೀಡಿದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಹೇಳಿದ್ದು, ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಪುನರುಚ್ಚರಿಸಿದರು.
ಸರ್ಕಾರ, ಚಳವಳಿಕಾರರ ಮಧ್ಯೆ ಇಡೀ ದಿನ ಚೌಕಾಸಿ
ಸಚಿವ ಖಾದರು ಅವರು ಆಶಾ ಕಾರ್ಯಕರ್ತೆಯರ ಮುಖಂಡರನ್ನು ಭೇಟಿಯಾಗಿ 1000 ರು. ಗೌರವಧನ ಹೆಚ್ಚಿಸುವುದಾಗಿ ಪ್ರಸ್ತಾಪಿಸಿದರು. ಒಪ್ಪದ್ದಕ್ಕೆ 1500 ರು. ನೀಡುವುದಾಗಿ ಹೇಳಿದರು. ಅದಕ್ಕೂ ಆಶಾಗಳು ಸಮ್ಮತಿಸಲಿಲ್ಲ. ಕೊನೆಗೆ ಡಿಕೆಶಿ ಅವರು 2000 ರು. ನೀಡುವುದಾಗಿ ಹೇಳಿದರೂ ಮಣಿಯಲಿಲ್ಲ. ಆದರೆ ಡಿಕೆಶಿ ಅವರು ಮನವೊಲಿಸುವಲ್ಲಿ ಯಶಸ್ವಿಯಾದರು.
ಕೇಳಿದ್ದು 15000 ರು. ಸಿಗೋದು 11000 ರು.
ಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ರಾಜ್ಯ ಸರ್ಕಾರದಿಂದ ₹5000, ಕೇಂದ್ರ ಸರ್ಕಾರದಿಂದ ₹2000 ಸೇರಿ ಒಟ್ಟು 7 ಸಾವಿರ ರು. ಗೌರವಧನ ಹಾಗೂ 2000 ರು. ಪ್ರೋತ್ಸಾಹಧನ ಸಿಗುತ್ತಿದೆ. ಈಗ ರಾಜ್ಯ ಸರ್ಕಾರ ಗೌರವಧನ ಹೆಚ್ಚಿಸಿದರೆ ಮಾಸಿಕ 11 ಸಾವಿರ ರು. ಸಿಗಲಿದೆ.

