ಕಾಂಗ್ರೆಸ್‌ಗೆ ಅಹಿಂದ ಮುಖಂಡ ಡಾ. ವೈ.ರಾಮಪ್ಪ ಗುಡ್‌ ಬೈ?

| Published : Apr 11 2024, 12:49 AM IST

ಕಾಂಗ್ರೆಸ್‌ಗೆ ಅಹಿಂದ ಮುಖಂಡ ಡಾ. ವೈ.ರಾಮಪ್ಪ ಗುಡ್‌ ಬೈ?
Share this Article
  • FB
  • TW
  • Linkdin
  • Email

ಸಾರಾಂಶ

ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ಬಂಡಾಯದ ಕಹಳೆ ಮೊಳಗಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಕಂಟಕ ಶುರುವಾಗಿದೆ. ಅಹಿಂದ ವರ್ಗಗಳ ಮುಖಂಡ, ಭೋವಿ ಸಮಾಜದ ಹಿರಿಯ ಮುಖಂಡ, ಜಿ.ಪಂ. ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ ಇದೀಗ ಮಾತೃಪಕ್ಷ ತೊರೆಯಲಿದ್ದಾರೆ.

- ಪ್ರತಿ ಚುನಾವಣೆಯಲ್ಲಿ ಅಹಿಂದ ವರ್ಗಕ್ಕೆ ಕಾಂಗ್ರೆಸ್‌ ಅನ್ಯಾಯ ಎಂಬ ಅಸಮಾಧಾನ

- ಮಾತೃಪಕ್ಷದಿಂದ ಒಂದು ಕಾಲು ಹೊರಗಿಟ್ಟ ಭೋವಿ ಸಮಾಜ ಹಿರಿಯ ಮುಖಂಡ - ದೆಹಲಿಗೆ ಹೋಗಿ ಬಂದ ನಂತರ ಬೆಂಬಲಿಗರೊಡನೆ ಮುಂದಿನ ನಡೆಯ ಘೋಷಣೆ - ಅಹಿಂದಕ್ಕೆ ಟಿಕೆಟ್ ತಪ್ಪಿಸಿ, ಕೇವಲವಾಗಿ ಮಾತನಾಡೋರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ಬಂಡಾಯದ ಕಹಳೆ ಮೊಳಗಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಕಂಟಕ ಶುರುವಾಗಿದೆ. ಅಹಿಂದ ವರ್ಗಗಳ ಮುಖಂಡ, ಭೋವಿ ಸಮಾಜದ ಹಿರಿಯ ಮುಖಂಡ, ಜಿ.ಪಂ. ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ ಇದೀಗ ಮಾತೃಪಕ್ಷ ತೊರೆಯಲಿದ್ದಾರೆ?

ಕಾಂಗ್ರೆಸ್ ಹೈಕಮಾಂಡ್‌ಗೆ ಆಪ್ತರಾಗಿದ್ದ, ಪ್ರಭಾವಿ ಅಹಿಂದ ವರ್ಗದ ನಾಯಕರಾಗಿದ್ದ ಡಾ. ವೈ.ರಾಮಪ್ಪ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಹೊಸ ರಾಜಕೀಯ ಭವಿಷ್ಯಕ್ಕೆ ಮುಂದಾಗಿದ್ದಾರೆ. ತಮ್ಮ ಮಾತೃಪಕ್ಷದಲ್ಲಿ ನಿರಂತರವಾಗಿ ತಮಗಷ್ಟೇ ಅಲ್ಲ, ಅಹಿಂದ ವರ್ಗಕ್ಕೆ ಅನ್ಯಾಯ ಆಗುತ್ತಿದೆಯೆಂದು ಡಾ. ವೈ.ರಾಮಪ್ಪ ಕಾಂಗ್ರೆಸ್ಸಿನಿಂದ ಒಂದು ಕಾಲು ಹೊರಗಿಟ್ಟಿದ್ದಾರೆಂದು ಹೇಳಲಾಗಿದೆ.

ಭೋವಿ ಸಮಾಜ ಮುಖಂಡರೂ ಆಗಿರುವ ಡಾ.ರಾಮಪ್ಪ, ತಮ್ಮೊಂದಿಗೆ ಹಲವು ನಾಯಕರ ಸಮೇತ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ನಾಯಕರ ಬಗ್ಗೆ ಈ ಹಿಂದೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಪ್ರತಿ ಚುನಾವಣೆಯಲ್ಲೂ ಅಹಿಂದ ವರ್ಗವನ್ನು ಕಾಂಗ್ರೆಸ್ ಬಳಸಿಕೊಂಡಿದೆಯೇ ಹೊರತು, ಅವಕಾಶ ನೀಡಿಲ್ಲ ಎಂಬುದೇ ಡಾ.ರಾಮಪ್ಪ ಅಸಮಾಧಾನಕ್ಕೆ ಕಾರಣ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆಯಲ್ಲೂ ಭೋವಿ ಸಮಾಜ ಕಡೆಗಣಿಸಲಾಗಿದೆ. ನಾಲ್ಕೈದು ಜನರ ಬಳಿಯಲ್ಲಿ ಮಾತ್ರವೇ ಕಾಂಗ್ರೆಸ್ ಪಕ್ಷ ಇದ್ದಂತಾಗಿದೆ. ಉಳಿದವರಿಗೆ ಪಕ್ಷ ಎಂಬುದ ಮರೀಚಿಕೆಯಂತಾಗಿದೆ. ಚುನಾವಣೆ ಕಾಲಕ್ಕೆ ಒಂದಿಬ್ಬರು ಪರಿಶಿಷ್ಟ ಜಾತಿ- ಪಂಗಡಗಳ ಜನರನ್ನು ಕರೆದುಕೊಂಡು, ನಂತರ ಕಳಿಸುವ ಕೆಲಸವಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬಳಸಿಕೊಳ್ಳಲಾಗುತ್ತಿದೆ. ಅಹಿಂದ ವರ್ಗಕ್ಕೆ ಘೋರ ಅನ್ಯಾಯ ಮಾಡಲಾಗುತ್ತಿದೆ. ಅಹಿಂದದವರಿಗೆ ಟಿಕೆಟ್ ತಪ್ಪಿಸಿ, ಕೇವಲವಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ ಎಂಬುದಾಗಿ ಡಾ.ರಾಮಪ್ಪ ಅಸಮಾಧಾನ ಸಹ ಹೊರ ಹಾಕಿದ್ದಾರೆ.

ಚುನಾವಣೆಯಲ್ಲಿ ದುಡಿಯಲು ಮಾತ್ರ ಅಹಿಂದ ವರ್ಗ ಬೇಕು, ಉಳಿದಂತೆ ಅಧಿಕಾರ, ಸ್ಥಾನಮಾನ, ಅವಕಾಶ ನೀಡುವಾಗ ಮಾತ್ರ ಈ ವರ್ಗ ಬೇಡವಾಗಿದೆ. ಈ ಎಲ್ಲ ಬೆಳವಣಿಗೆ, ಘಟನೆಗಳಿಂದಾಗಿ ಡಾ.ರಾಮಪ್ಪ ನೊಂದಿದ್ದಾರೆ. ತಮ್ಮ ಅಪಾರ ಬೆಂಬಲಿಗರು, ವಿಶೇಷವಾಗಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಬಲಿಗರು, ಪ್ರಮುಖ ಮುಖಂಡರೊಂದಿಗೂ ಸಾಕಷ್ಟು ಚರ್ಚಿಸಿದ್ದಾರೆ. ಆದಷ್ಟು ಬೇಗನೆ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಲು ಚಿಂತನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಶೀಘ್ರವೇ ದೆಹಲಿಗೆ ಹೋಗಿಬಂದ ನಂತರ ಯಾವ ಪಕ್ಷಕ್ಕೆ ಬೆಂಬಲಿಸಬೇಕು, ಸೇರಬೇಕೆಂಬ ಬಗ್ಗೆ ನಿರ್ಧಾರ ಮಾಡುವುದಾಗಿ ಡಾ.ವೈ.ರಾಮಪ್ಪ ಆಪ್ತರ ಬಳಿ ಹೇಳಿಕೊಂಡಿದ್ದಾರೆಂದು ಹೇಳಲಾಗಿದೆ.

- - -

-10ಕೆಡಿವಿಜಿ4, 5:

ಡಾ. ವೈ.ರಾಮಪ್ಪ, ಕಾಂಗ್ರೆಸ್‌ ಮುಖಂಡ,

ಭೋವಿ ಸಮಾಜ ಹಿರಿಯ ನಾಯಕ