ಸಾರಾಂಶ
ಕಾರ್ಕಳ ಪರಶುರಾಮ ಮೂರ್ತಿ ನಕಲಿ ವಿರುದ್ಧ ಹೋರಾಟ: ಮಿಥುನ್ನ್ ರೈ
ಕನ್ನಡಪ್ರಭ ವಾರ್ತೆ ಮಂಗಳೂರು
ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಅಳವಡಿಸಿದ್ದ 33 ಅಡಿ ಎತ್ತರದ ನಕಲಿ ಪರಶುರಾಮನ ವಿಗ್ರಹ ಪ್ರಕರಣದ ವಿರುದ್ಧ ವೈಯಕ್ತಿಕ ನೆಲೆಯಲ್ಲಿ ಹೋರಾಟ ನಡೆಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಪ್ರಕಟಿಸಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೆ ಹೋರಾಟ ಮುಂದುವರಿಸುವುದಾಗಿಯೂ ಹೇಳಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಎಲ್ಲೂ ದೇವರ ನಕಲಿ ಪ್ರತಿಮೆ ಸೃಷ್ಟಿಸಿ ಯಾರೂ ಮೋಸ ಮಾಡಲಾರರು. ಆದರೆ ಕಾರ್ಕಳದಲ್ಲಿ ಕಂಚಿನ ಪ್ರತಿಮೆ ಎಂದು ಸುಳ್ಳು ಹೇಳಿ ಫೈಬರ್ ಪ್ರತಿಮೆ ಅಳವಡಿಸಿ ಕೋಟ್ಯಂತರ ರು. ಜನರ ಹಣ ವಂಚನೆ ಮಾಡಲಾಗಿದೆ. ಈ ವಿಚಾರ ಇಲ್ಲಿಗೇ ನಿಲ್ಲಿಸಲ್ಲ. ನಾಡಿದ್ದು ಶುಕ್ರವಾರದಿಂದ ಎಲ್ಲ ಮಠಗಳಿಗೆ ಹೋಗಿ ಈ ಅಧರ್ಮದ ವಿರುದ್ಧ ಮಠಾಧೀಶರ ಬೆಂಬಲ ಕೋರುತ್ತೇನೆ ಎಂದು ತಿಳಿಸಿದರು.ಹಿಂದು ಸಂಘಟನೆಗಳು ಬೆಂಬಲಿಸಲಿ:
ದೇವರನ್ನು ಇಷ್ಟು ದೊಡ್ಡ ರೀತಿಯಲ್ಲಿ ಅವಮಾನ ಮಾಡುವಾಗ ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡುವವರು ಯಾಕೆ ಮಾತನಾಡುತ್ತಿಲ್ಲ? ಹಿಂದೂ ಸಂಘಟನೆಗಳು ಇದುವರೆಗೆ ಯಾಕೆ ಧ್ವನಿ ಎತ್ತಿಲ್ಲ? ಈ ನನ್ನ ಹೋರಾಟಕ್ಕೆ ಅವರೂ ಕೈಜೋಡಿಸಲಿ, ಇಂಥ ಸಂದರ್ಭದಲ್ಲೂ ಧ್ವನಿ ಎತ್ತದಿದ್ದರೆ ದೇವರಿಗೆ ಅವಮಾನಿಸಿದಂತಾಗುತ್ತದೆ ಎಂದು ಮಿಥುನ್ ರೈ ಆಹ್ವಾನ ನೀಡಿದರು.ಗೋಮಾಳ ಜಾಗದಲ್ಲಿ ಅಕ್ರಮ ಪಾರ್ಕ್:
ಸರ್ಕಾರದ ಕಂದಾಯ ಕಾರ್ಯದರ್ಶಿ ೧೫.೦೩.೨೩ರಲ್ಲಿ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದು, ಸರ್ವೇ ನಂಬ್ರ ೩೨೯/೧ರಲ್ಲಿ ೧.೫೮ ಎಕರೆ ಜಮೀನು ಗೋಮಾಳ ಆಗಿದ್ದರಿಂದ ಪರಶುರಾಮ ಥೀಮ್ ಪಾರ್ಕ್ ಕಟ್ಟಿಸುವ ಕುರಿತಾದ ಅರ್ಜಿಯನ್ನು ತಿರಸ್ಕರಿಸಿದ್ದಾಗಿ ಆದೇಶ ಮಾಡಿದ್ದರು. ಸ್ಥಳೀಯ ಪಿಡಿಒಗೂ ಆ ಆದೇಶ ಪ್ರತಿ ಬಂದಿದೆ. ಗೋಮಾಳ ಜಾಗ ಅಂತ ಗೊತ್ತಾದ ನಂತರವೂ ತರಾತುರಿಯಲ್ಲಿ ಆ ಜಾಗದಲ್ಲಿ ಥೀಮ್ ಪಾರ್ಕ್ ಕಟ್ಟಲು ಮುಂದಾದದ್ದು ಯಾಕೆ ಎಂದು ದಾಖಲೆಗಳನ್ನು ತೋರಿಸಿದ ಮಿಥುನ್ ರೈ, ಪಾರ್ಕ್ ಸ್ಥಾಪನೆ ಮೊದಲೇ ಅಧಿಕಾರಿಗಳು ಕಾರ್ಕಳ ಶಾಸಕ ಸುನಿಲ್ ಕುಮಾರ್ ಗಮನಕ್ಕೆ ಗೋಮಾಳ ಜಾಗದ ವಿಚಾರವನ್ನು ತಿಳಿಸಿದ್ದಾರೆ. ತಿಳಿಸಿಲ್ಲ ಎಂದರೆ ಆ ಕುರಿತು ಆಣೆ ಪ್ರಮಾಣಕ್ಕೆ ಸಿದ್ಧ ಎಂದು ಸವಾಲು ಹಾಕಿದರು.ಈ ಪ್ರಕರಣವನ್ನು ಉನ್ನತ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದು, ತನಿಖೆ ನಡೆತಿದೆ. ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಈ ಪ್ರತಿಮೆಯನ್ನು ಪೂರ್ಣ ಮಾಡಿ ತೋರಿಸ್ತೇವೆ ಎಂದರು.
ಕಾರ್ಕಳ ಪುರಸಭೆ ಸದಸ್ಯ ಶುಭೋದ್ ರಾವ್, ಮುಖಂಡರಾದ ಎ.ಸಿ. ವಿನಯರಾಜ್, ವಿಶ್ವಾಸ್‌ದಾಸ್, ಅನಿಲ್ ಪೂಜಾರಿ, ಪ್ರವೀಣ್‌ಚಂದ್ರ ಆಳ್ವ, ದುರ್ಗಾ ಪ್ರಸಾದ್, ಪ್ರಕಾಶ್ ಸಾಲ್ಯಾನ್, ರಾಕೇಶ್ ದೇವಾಡಿಗ ಇದ್ದರು.