ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಿಜೆಪಿ- ಕಾಂಗ್ರೆಸ್ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ. ಸಂಸದ ಮತ್ತು ಶಾಸಕರ ಮಧ್ಯೆ ಉಂಟಾಗಿರುವ ಪ್ರತಿಷ್ಠೆಯ ಕಣವಾಗಿರುವ ಚುನಾವಣೆ ಸಂಬಂಧ ಕಾಂಗ್ರೇಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇದೇ ತಿಂಗಳ 12ಕ್ಕೆ ನಿಗದಿಯಾಗಿದೆ. ಚುನಾವಣೆ ದಿನಾಂಕ, ಘೋಷಣೆಯಾಗುತ್ತಿದ್ದಂತೆ ಗರಿಗೆದರಿದ ಬಿಜೆಪಿ- ಕಾಂಗ್ರೆಸ್ ಮುಖಂಡರ ಮಧ್ಯೆ ಆರೋಪ, ಪ್ರತ್ಯಾರೋಪಗಳು ಬಿರುಸು ಬಾಣಗಳಂತೆ ಹೊರಗೆ ಬರುತ್ತಿವೆ. ಬಿಜೆಪಿ ಮುಖಂಡರು ಕಾಂಗ್ರೆಸ್ ಸೋಲುವ ಭೀತಿಯಲ್ಲಿ ಮತದಾರರ ಪಟ್ಟಿಗೆ ಊರವರಲ್ಲದ ಎಂಎಲ್ ಸಿಗಳಾದ ಬೆಂಗಳೂರಿನ ಸೀತಾರಾಮ್, ಕೋಲಾರದ ಅನಿಲ್ ಕುಮಾರ್ ,ಡಿ.ಟಿ.ಶ್ರೀನಿವಾಸ್ ,ಯು ಬಿ ವೆಂಕಟೇಶ್ ಹಾಗೂ ಉಮಾಶ್ರೀಯವರ ಹೆಸರನ್ನು ಸುಳ್ಳು ಮಾಹಿತಿ ನೀಡಿ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಆರೋಪಿಸಿದ್ದರು. ಅವರ ವಿರುದ್ದ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದರು.
ಈಗ ಅದನ್ನು ವಿರೋಧಿಸಿ ಅದೆಲ್ಲಾ ಸತ್ಯಕ್ಕೆ ದೂರವಾದ ಸಂಗತಿ ಎಂದು ಎಂದು ಕಾಂಗ್ರೆಸ್ ಮುಖಂಡ ನಂದಿ.ಎಂ.ಆಂಜಿನಪ್ಪ ಹಾಗೂ ಕೆ. ಸಿ. ರಾಜಾಕಾಂತ್ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂದಿ.ಎಂ.ಆಂಜಿನಪ್ಪ, ಕಾನೂನು ಚೌಕಟ್ಟಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡಿದ್ದೇವೆ ಅಷ್ಟೆ. ಎಂಎಲ್ ಸಿಗಳು ಅವರ ಕ್ಷೇತ್ರವಾರು ಎಲ್ಲಿ, ಯಾವ ನಗರಸಭೆ, ಪುರಸಭೆಗೂ ಬೇಕಾದರೂ ಮತದಾನ ಮಾಡುವ ಹಕ್ಕಿದೆ. ಅದನ್ನು ಅಡ್ಡಿಪಡಿಸುವ, ಪ್ರಶ್ನಿಸುವ ಹಕ್ಕು ಅವರಿಗಿಲ್ಲ. ಡಾ ಕೆ.ಸುದಾಕರ್ ಸಚಿವರಾಗಿದ್ದಾಗ ವಿಫ್ ಉಲ್ಲಂಘಿಸಿ, ಅಡ್ಡ ಮತದಾನ ಮಾಡಿದ ವ್ಯಕ್ತಿಗಳಿಗೆ ಸಹಾಯ ಮಾಡಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಇಡೀ ಪ್ರಕರಣ ಹಳ್ಳ ಹಿಡಿಯುವಂತೆ ಮಾಡಿದ್ದರು ಎಂದು ತಿರುಗೇಟು ನೀಡಿದರು.
ಜಿಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ಕಳೆದ ಬಾರಿ ಚುನಾವಣೆ ನಡೆದಾಗ ಬಿಜೆಪಿಯವರು ಎಂ ಎಲ್ ಸಿ ವೈ. ಎ. ನಾರಾಯಣಸ್ವಾಮಿ ಹೆಸರನ್ನು ಯಾಕೆ ಇಲ್ಲಿ ಸೇರಿಸಿದ್ದರು, ಅವರಿಗೆ ಎರಡು, ಮೂರು ನಗರಸಭೆಗಳಲ್ಲಿ ಮತಚಲಾವಣೆಗೆ ಅವಕಾಶ ಕೊಟ್ಟಿದ್ದು ಯಾಕೆ? ನಿಮ್ಮದಾದರೆ ಕಾನೂನು. ಕಾಂಗ್ರೆಸ್ ನವರಿಗಾದರೆ ಕಾನೂನು ಬಾಹಿರವೇ? ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಎಂ.ಮುನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮರೆಡ್ಡಿ, ನಾಯನಹಳ್ಳಿ ನಾರಾಯಾಣಸ್ವಾಮಿ, ನರೇಂದ್ರಕುಮಾರ್, ಪಿಎಂ ರಘು, ಗವಿರಾಯಪ್ಪ, ವಿಜಯ್ ಕುಮಾರ್, ವೆಂಕಟೇಶ್ ಮತ್ತಿತರರು ಇದ್ದರು.