ಸಾರಾಂಶ
ಶಿವಲಿಂಗೇಗೌಡರಿಗೆ ನಿಗಮ ಮಂಡಳಿ ನೀಡುವ ಕಾಂಗ್ರೆಸ್ ನಿರ್ಧಾರಕ್ಕೆ ಅಪಸ್ವರ । ಕಾಂಗ್ರೆಸ್ ಮುಖಂಡರ ಒಳಜಗಳದಿಂದ ಸಮುದಾಯ ಕಡೆಗಣನೆಕನ್ನಡಪ್ರಭ ವಾರ್ತೆ ಹಾಸನ
ಹಾಸನ ವೀರಶೈವ ಲಿಂಗಾಯತರನ್ನು ಕಡೆಗಣಿಸಿದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಸನ ಜಿಲ್ಲೆಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದಾರೆ. ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ನಿಗಮ ಮಂಡಳಿ ಸ್ಥಾನ ನೀಡುವುದಕ್ಕೆ ಶಿವರಾಂ ಪರೋಕ್ಷವಾಗಿ ಅಪಸ್ವರ ಎತ್ತಿದ್ದಾರೆ.ಮಾಜಿ ಸಚಿವ ಬಿ. ಶಿವರಾಂ ಹಾಗೂ ಶಾಸಕ ಶಿವಲಿಂಗೇಗೌಡ ನಡುವೆ ಜಟಾಪಟಿಯು ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರ ಒಳಜಗಳ ತಾರಕಕ್ಕೇರಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಕಡೆಗಣಿಸಿದೆ. ಇದರಿಂದಲೇ ಕಳೆದ ಚುನಾವಣೆಯಲ್ಲಿ ನಾವು ಜಿಲ್ಲೆಯಲ್ಲಿ ಸೋಲಬೇಕಾಯಿತು. ಅರಸೀಕೆರೆಯಲ್ಲಿ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು. ಚಿಕ್ಕಮಗಳೂರಿನಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದ್ದಕ್ಕೆ ಜಿಲ್ಲೆಯ ಎಲ್ಲಾ ಕಡೆ ಕಾಂಗ್ರೆಸ್ ಗೆದ್ದಿದೆ. ಈಗ ಶೀಘ್ರವಾಗಿ ನಿಗಮ ಮಂಡಳಿ ನೇಮಕ ಆಗುತ್ತೆ ಎನ್ನುತ್ತಿದ್ದಾರೆ. ಹಾಸನ ಜಿಲ್ಲೆಗೆ ಲಿಂಗಾಯತ ಕಾರ್ಯಕರ್ತನಿಗೆ ನಿಗಮ ಮಂಡಳಿ ನೀಡಬೇಕು. ವಂಚಿತ ಶಶಿಧರ್ ಅವರಿಗೆ ನಿಗಮ ಮಂಡಳಿ ಸ್ಥಾನ ಪ್ರಕಟ ಮಾಡಿದರೆ ಜನರ ಭಾವನೆ ಬದಲಾವಣೆ ಆಗಿ ಮುಂದಿನ ಸಂಸದರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಅವಕಾಶ ಸಿಗಲಿದೆ’ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲೂ ಲಿಂಗಾಯತ ಸಮುದಾಯದ ಆಕಾಂಕ್ಷಿಗೆ ಆಶ್ವಾಸನೆ ನೀಡಿದ್ದರು. ಅರಸೀಕೆರೆಯಲ್ಲಿ ಶಶಿಕುಮಾರ್ ಮನವೊಲಿಸಿ ಶಿವಲಿಂಗೇಗೌಡರಿಗೆ ಟಿಕೆಟ್ ನೀಡಿದರು. ಈಗ ಶಶಿಕುಮಾರ್‌ಗೆ ನ್ಯಾಯ ದೊರಕಿಸಬೇಕಿದೆ. ಲಿಂಗಾಯತರಿಗೆ ಕೊಟ್ಟರೆ ಲೋಕಸಭಾ ಚುನಾವಣೆಗೂ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.ಶಿವಲಿಂಗೇಗೌಡರಿಗೆ ನಿಗಮ ಮಂಡಳಿ ಸಿಗುವ ವದಂತಿ ಹಿನ್ನೆಲೆ ಬಿ. ಶಿವರಾಂ ಅಪಸ್ವರ ಕೇಳಿ ಬಂದಿದ್ದು, ಶಿವಲಿಂಗೇಗೌಡರಿಗೆ ನಿಗಮ ಮಂಡಳಿ ನೀಡುವುದಕ್ಕೆ ಬಿ. ಶಿವರಾಂ ಪರೋಕ್ಷ ವಿರೋಧ ವ್ಯಕ್ತಪಡಿಸಿದಂತಿತ್ತು. ‘ನಾನು ಕಳೆದ ೪೭ ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲೆ ಇದ್ದು, ಬೇರೆಯವರಿಗೆ ಇದುವರೆಗೂ ಯಾವ ಪಕ್ಷಕ್ಕೆ ವಲಸೆ ಹೋಗಿಲ್ಲ’ ಎಂದು ಗುಡುಗಿದರು.
‘ಕಾಂಗ್ರೆಸ್ ವರಿಷ್ಠರ ಒಂದು ಅಭಿಪ್ರಾಯ ಎಂದರೆ ಕರ್ನಾಟಕದಲ್ಲಿ ೨೮ಕ್ಕೆ ೨೮ ಲೋಕಸಭೆ ಸ್ಥಾನವನ್ನು ಗೆಲ್ಲಬೇಕು. ಅದಕ್ಕೆ ಯಾವ ಮಾರ್ಗ ಅನುಸರಿಸಬೇಕು ಎಂಬುದು ಬಹಳ ಮುಖ್ಯವಾಗಿದೆ. ಕೆಲವನ್ನು ಸರಿಪಡಿಸಿಕೊಳ್ಳುವುದರ ಮೂಲಕ ನಮ್ಮ ಜಿಲ್ಲೆಯನ್ನು ಕೂಡ ಗೆಲ್ಲಲೇಬೇಕು. ಅರಸೀಕೆರೆಯಲ್ಲೂ ಕೂಡ ಯಾವ ವಯಕ್ತಿಕವಲ್ಲ ಎಂದು ಹೇಳಲಾಗಿದೆ. ಹಾಸನ ಜಿಲ್ಲೆಗೆ ಕೆ.ಎಂ. ಶಿವಲಿಂಗೇಗೌಡರು ಏಕೈಕ ಶಾಸಕರಾಗಿದ್ದು, ಅವರಿಗೆ ಎಂಪಿ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೇ ಗೆಲ್ಲುತ್ತಾರೆ ಎನ್ನುವ ಅಭಿಪ್ರಾಯವಿದೆ ಎಂದು ಹೇಳಲಾಗಿತ್ತು. ಶಿವಲಿಂಗೇಗೌಡರಿಗೆ ಟಿಕೆಟ್ ನೀಡಲಿ’ ಎಂದು ಒತ್ತಾಯಿಸಿದರು.‘ಒಂದು ಕಡೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರೂ ಸೋತಿದ್ದೇವೆ. ಕಾರಣ ಏನು ಎಂದು ಹುಡುಕಿದಾಗ ಎಲ್ಲೊ ಒಂದು ಕಡೆ ಜಾತ್ಯತೀತ ನಿಲುವನ್ನು ತೆಗೆದುಕೊಳ್ಳದೆ ಇರುವಂತಹದ್ದು ಎಂದು ಕಂಡು ಬಂದಿದೆ. ಲಿಂಗಾಯತ ಸಮುದಾಯಕ್ಕೆ ಅಭ್ಯರ್ಥಿ ಕೊಡದೆ ಒಂದು ವರ್ಗವನ್ನು ಕಡಗಣಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಸಮುದಾಯದವರಿಗೆ ಟಿಕೆಟ್ ನೀಡಿದ್ದಕ್ಕೆ ಅಲ್ಲಿನ ಎಲ್ಲಾ ತಾಲೂಕು ಕ್ಷೇತ್ರಗಳು ಕಾಂಗ್ರೆಸ್ ಗೆದ್ದುಕೊಂಡು ಬಂದಿತು. ಹಾಸನ ಜಿಲ್ಲೆಯಲ್ಲಿ ಒಬ್ಬರಿಗೂ ಟಿಕೆಟ್ ಕೊಡದ ಕಾರಣ ಸೋಲಬೇಕಾಯಿತು. ವಾಸ್ತವಿಕವಾಗಿ ಅರಸೀಕೆರೆ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟಿದ್ದರೇ ನಾವು ಹೆಚ್ಚಿನ ರೀತಿ ಗೆಲುವು ಪಡೆಯಬಹುದಿತ್ತು’ ಎಂದು ಹೇಳಿದರು.
ಹಾಸನದ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮದೊಂದಿಗೆ ಮಾಜಿ ಸಚಿವ ಬಿ. ಶಿವರಾಂ ಮಾತನಾಡಿದರು.