ಸಾರಾಂಶ
ಹುಬ್ಬಳ್ಳಿ:
30 ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯನ್ನು ಪಾಕಿಸ್ತಾನವನ್ನಾಗಿ ಮಾಡಿತ್ತು. ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದೇ ತಪ್ಪು ಎಂಬಂಥ ವಾತಾವರಣ ಸೃಷ್ಟಿಸಿತ್ತು. ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡದೇ ಪಾಕಿಸ್ತಾನದ ಮನಸ್ಥಿತಿ ಪ್ರದರ್ಶಿಸಿತ್ತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.ಈದ್ಗಾ ಮೈದಾನದಲ್ಲಿನ ಗಣೇಶಮೂರ್ತಿ ವಿಸರ್ಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಷಯದಲ್ಲಿ ಪ್ರಾಣತೆತ್ತವರು ಇದ್ದಾರೆ. ಪಾಕಿಸ್ತಾನದ ಮನಸ್ಥಿತಿ ಹೊಂದಿದ್ದ ಕಾಂಗ್ರೆಸ್ ಸರ್ಕಾರ, ಹುಬ್ಬಳ್ಳಿಯನ್ನು ಸಹ ಅದೇ ರೀತಿ ನೋಡಿತ್ತು. ಈಗ ಅದೇ ಮೈದಾನದಲ್ಲಿ ನಾವು ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿ, ಅದ್ಧೂರಿಯಾಗಿ ಹಬ್ಬ ಆಚರಿಸಿದ್ದೇವೆ. ಆವಾಗಿನಿಂದ ರಾಷ್ಟ್ರಧ್ವಜ ಹಾರಿಸುತ್ತಲೇ ಬಂದಿದ್ದೇವೆ. ಇದೀಗ ಭಗವಾಧ್ವಜವನ್ನೂ ಹಾರಿಸಿದ್ದೇವೆ ಎಂದರು.
ನಾವು ಯಾವಾಗ ಸಂಘಟಿತರಾಗುತ್ತೇವೆಯೋ, ಆವಾಗ ದೇಶದ್ರೋಹಿಗಳ ಸದ್ದು ಅಡಗುತ್ತದೆ. ಅದಕ್ಕಾಗಿಯೇ ಬಾಲಗಂಗಾಧರ ತಿಲಕರು ಗಣೇಶೋತ್ಸವ ಆಚರಣೆ ಜಾರಿಗೆ ತಂದಿದ್ದು. ನಾವೆಲ್ಲ ಒಗ್ಗಟ್ಟಾಗಿ, ದೇಶಪ್ರೇಮ ಸಾರಬೇಕು ಎಂದು ಹೇಳಿದರು.ಪ್ರತಿ ದೇಶಕ್ಕೂ ಒಂದು ಆತ್ಮವಿದೆ. ನಮ್ಮ ದೇಶದ ಆತ್ಮ ಹಿಂದುತ್ವವಾಗಿದೆ. ಅದನ್ನೇ ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ದೇಶಕ್ಕೆ ಉಳಿಗಾಲವಿಲ್ಲ. ಜೈ ಭೀಮ ಎನ್ನುವವರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಜೈ ಭೀಮ ಜೈ ಭಾರತ ಎನ್ನುತ್ತಿದ್ದರು. ಆ ಭೀಮನ ಶಕ್ತಿ ಭಾರತವನ್ನು ಮೇಲೆತ್ತುವಲ್ಲಿ ಬಳಕೆಯಾಗಬೇಕಿದೆ ಎಂದರು.
ಹಿಂದೂ ವಿರೋಧಿಗಳು, ನಮ್ಮನ್ನು ನೀವ್ಯಾರು ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ನಾವು ರಾಮನ ಅನುಯಾಯಿಗಳು, ಹನುಮನ ಭಕ್ತರು ಎಂದು ಎದೆತಟ್ಟಿ ಹೇಳಬೇಕು. ಅವರಿಗೆ ಇಲ್ಲಿರಲು ಆಶ್ರಯ ನೀಡಿದವರು ಯಾರು ಎನ್ನುವುದನ್ನು ಮೊದಲು ತಿಳಿಯಲಿ. ಅಸಂಬದ್ಧ ಮಾತುಗಳನ್ನಾಡಿದರೆ ಬಾಲ ಹೇಗೆ ಕತ್ತರಿಸಬೇಕೆನ್ನುವುದು ನಮಗೆ ಗೊತ್ತು ಎಂದು ಎಚ್ಚರಿಸಿದರು.ಡಿಜೆ ಹಚ್ಚಬಾರದಂತೆ, ಪ್ರಸಾದ ಪರೀಕ್ಷೆ ಮಾಡಿಸಬೇಕಂತೆ, ಹೀಗೆ ಏನೇನೋ ನಿಯಮಾವಳಿಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಓಲೈಕೆ ರಾಜಕಾರಣವೇ ಅದಕ್ಕೆ ಮುಖ್ಯವಾಗಿದೆ. ನಾವು ಸಹ ಕೋಮುವಾದಿಗಳಾಗಿದ್ದರೆ, ನಮ್ಮನ್ನು ಪ್ರಶ್ನೆ ಮಾಡುವವರೇ ಇರುತ್ತಿರಲಿಲ್ಲ. ನಾವಿಬ್ಬರು ನಮಗಿಬ್ಬರು ಎನ್ನುವ ಕೌಟುಂಬಿಕ ತತ್ವ-ಸಿದ್ಧಾಂತ ಬಿಟ್ಟು, ನಮ್ಮ ತಾಕತ್ತು ಏನೆಂದು ತೋರಿಸಬೇಕಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹಿಂದೆ ಇದೇ ಮೈದಾನದಲ್ಲಿ ಘರ್ಷಣೆಯಾಗಿತ್ತು. ಈಗ ಇದೇ ಮೈದಾನದಲ್ಲಿ ಕೋಮು ಸೌಹಾರ್ದತೆಯಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಅನೇಕರು ವಿರೋಧಿಸಿದ್ದರು, ಅದ್ಯಾವುದನ್ನೂ ಲೆಕ್ಕಿಸದೆ ಶಾಂತಿಯಿಂದ ಹಬ್ಬ ಮಾಡಿದ್ದೇವೆ ಎಂದರು.ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿಪ ಸದಸ್ಯ ಪ್ರದೀಪ ಶೆಟ್ಟರ್, ರಾಣಿ ಚೆನ್ನಮ್ಮ ಶ್ರೀಗಜಾನನ ಉತ್ಸವ ಮಹಾಮಂಡಳಿ ಗೌರವಾಧ್ಯಕ್ಷ ವಿ.ಎಸ್.ವಿ. ಪ್ರಸಾದ್, ಅಧ್ಯಕ್ಷ ಸಂಜೀವ ಬಡಸ್ಕರ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಮಹೇಂದ್ರ ಕೌತಾಳ ಹಾಗೂ ಇತರರು ಪಾಲ್ಗೊಂಡಿದ್ದರು.