ಪಾಕ್‌ ಘೋಷಣೆ ಹಿಂದೆ ಕಾಂಗ್ರೆಸ್‌ ಮಾನಸಿಕತೆ: ನಳಿನ್‌ ಕುಮಾರ್‌

| Published : Feb 29 2024, 02:05 AM IST

ಪಾಕ್‌ ಘೋಷಣೆ ಹಿಂದೆ ಕಾಂಗ್ರೆಸ್‌ ಮಾನಸಿಕತೆ: ನಳಿನ್‌ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ರಾಷ್ಟ್ರ ಭಕ್ತರ ಮೇಲೆ ಕೇಸು ಹಾಕುತ್ತಿದೆ. ಅವರ ಕಾರ್ಯವನ್ನು ಖಂಡಿಸುವವರ ಮೇಲೆ ಕೇಸು ಹಾಕಲಾಗುತ್ತಿದೆ. ರಾಷ್ಟ್ರ ವಿರೋಧಿಗಳ ಮೇಲೆ ಕೇಸು ಹಾಕುವ ತಾಕತ್ತು ಈ ಸರ್ಕಾರಕ್ಕಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪದ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಂಸದ ನಳಿನ್‌ ಕುಮಾರ್‌ ಕಟೀಲು, ಪಾಕಿಸ್ತಾನ ಪರ ಘೋಷಣೆ ಹಾಕಿದವರ ಬಂಧನ ಆಗಿಲ್ಲ. ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸಿಯೂ ಇಲ್ಲ. ಇದರ ಹಿಂದೆ ಕಾಂಗ್ರೆಸ್‌ನ ಮಾನಸಿಕತೆ ಇದೆ ಎಂದು ಆರೋಪಿಸಿದ್ದಾರೆ.

ಕಳೆದ ಬಾರಿ‌ ಕಾಂಗ್ರೆಸ್ ಸರ್ಕಾರ ಬಂದಾಗ ಬೆಳಗಾವಿ, ಉತ್ತರ ಕನ್ನಡದಲ್ಲಿ ಪಾಕಿಸ್ತಾನ ಧ್ವಜ ಹಿಡಿದು ಮೆರವಣಿಗೆ ಮಾಡಿದ್ದರು. ತುಷ್ಟೀಕರಣದ ರಾಜಕಾರಣಕ್ಕಾಗಿ ರಾಷ್ಟ್ರ ವಿರೋಧಿ ಕೃತ್ಯ ಮಾಡುವರರನ್ನು ಬೆಂಬಲಿಸಲಾಗುತ್ತಿದೆ. ಕಾಂಗ್ರೆಸ್ ಭಯೋತ್ಪಾದಕರ ಪರವಾಗಿ ಇರುವ ಪಾರ್ಟಿ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ರಾಷ್ಟ್ರವಿರೋಧಿ ಎಂಬುದಕ್ಕೆ ಇದು ತಾಜಾ ಉದಾಹರಣೆ ಎಂದರು.

ರಾಜ್ಯಸಭಾ ಸದಸ್ಯರು ಈ ಘಟನೆ ನಡೆದಾಗ ಖಂಡಿಸಬೇಕಿತ್ತು. ಆದರೆ ಅವರೇ ಮೌನವಾಗಿದ್ದಾರೆ. ಅವರು ಪಾಕಿಸ್ತಾನ ಪರ ಇದ್ದಾರೆ ಎಂಬುದು ಸ್ಪಷ್ಟ ಎಂದು ಆರೋಪಿಸಿದ ನಳಿನ್‌, ಪಾಕಿಸ್ತಾನದ ಪರ ಘೋಷಣೆ ಹಾಕಿದವರನ್ನು ತಕ್ಷಣ ಬಂಧಿಸಿ, ಜೈಲಿಗಟ್ಟಬೇಕು. ನಾಸೀರ್ ಹುಸೇನ್ ಅವರ ನಿಲುವೇನೆಂದು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ರಾಷ್ಟ್ರ ಭಕ್ತರ ಮೇಲೆ ಕೇಸು ಹಾಕುತ್ತಿದೆ. ಅವರ ಕಾರ್ಯವನ್ನು ಖಂಡಿಸುವವರ ಮೇಲೆ ಕೇಸು ಹಾಕಲಾಗುತ್ತಿದೆ. ರಾಷ್ಟ್ರ ವಿರೋಧಿಗಳ ಮೇಲೆ ಕೇಸು ಹಾಕುವ ತಾಕತ್ತು ಈ ಸರ್ಕಾರಕ್ಕಿಲ್ಲ ಎಂದರು.ಬಿಜೆಪಿ ಹೇಳಿಲ್ಲ: ಪಾಕ್‌ ಪರ ಘೋಷಣೆ ಹಾಕಲಾಗಿದೆ ಎಂದು ಬಿಜೆಪಿ, ಜೆಡಿಎಸ್ ಹೇಳಿಲ್ಲ. ಮಾಧ್ಯಮಗಳು ಇದನ್ನು ತೋರಿಸಿವೆ. ಮಾಧ್ಯಮಗಳ ವರದಿಯನ್ನು ಸತ್ಯ ಅಂತಾ ಕಾಂಗ್ರೆಸ್ ಒಪ್ಪಲ್ವಾ ಎಂದು ಪ್ರಶ್ನಿಸಿದರು.