ಸಾರಾಂಶ
ಬಿಜೆಪಿಯಲ್ಲಿ ಆಂತರಿಕ ಕಲಹ ಬಹಳಷ್ಟಿದೆ. ರಾಜ್ಯದ ಜನತೆ ಬಿಜೆಪಿಯಲ್ಲಿನ ಬೆಳವಣಿಗೆ ನೋಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಕ್ಕಪಾಠ ಕಲಿಸಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಬಿಜೆಪಿಯಲ್ಲಿ ಭವಿಷ್ಯ ಇಲ್ಲ. ಅದನ್ನು ನಾನು ಅರ್ಥ ಮಾಡಿಕೊಂಡೇ ನಾನು ಬಿಜೆಪಿ ಮನೆಯಿಂದ ಹೊರಗಡೆ ಬಂದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ ಕಲಹ ಬಹಳಷ್ಟಿದೆ. ರಾಜ್ಯದ ಜನತೆ ಬಿಜೆಪಿಯಲ್ಲಿನ ಬೆಳವಣಿಗೆ ನೋಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಕ್ಕಪಾಠ ಕಲಿಸಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಭವಿಷ್ಯವಿಲ್ಲದ ಬಿಜೆಪಿ ಬರುವ 20 ವರ್ಷಗಳ ಕಾಲ ವಿಪಕ್ಷದಲ್ಲೇ ಇರಲಿದೆ. ಬಿಜೆಪಿಯಲ್ಲಿ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿದೆ. ನಾನು ಹೇಳಿದ್ದಲ್ಲ, ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿರುವುದು ಎಂದರು.135 ಶಾಸಕರ ಬಲದೊಂದಿಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಯಾವ ಪಕ್ಷವನ್ನು ಯಾರು ತೊರೆಯಲಿದ್ದಾರೆ ಎಂದು ಕಾದು ನೋಡಿ ಎಂದ ಅವರು, ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಾದ ಗ್ಯಾರಂಟಿ ಯೋಜನೆಗಳಿಂದ ಜನರು ಸಂತೃಪ್ತರಾಗಿದ್ದಾರೆ. ಇದನ್ನು ಸಹಿಸಲಾಗದ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.