ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ಮಾ.31ರಂದು ಸಂಜೆ 5ಕ್ಕೆ ಸೈನ್ಸ್ ಮೈದಾನದಲ್ಲಿ ಪಕ್ಷದ ಪೇಜ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಪೇಜ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮಾಜಿ ಶಾಸಕ ಎಂ.ಬಿ.ಭಾನುಪ್ರಕಾಶ್ ಪ್ರಮುಖರಾದ ಗಿರೀಶ್ ಪಟೇಲ್ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ. ಜನ ಸಂಘದಿಂದ ಹಿಡಿದು 1980ರಿಂದ ಭಾರತೀಯ ಜನತಾ ಪಕ್ಷವಾಗಿ ರೂಪುಗೊಂಡಿದ್ದು, ಜನಸಂಘದಿಂದಲೂ ಹಿಂದುಗಳ ಹಿತರಕ್ಷಣೆಗಾಗಿ ಹಾಗೂ ಉಳಿವಿಗಾಗಿ ಮತ ನೀಡಲು ಮತಯಾಚಿಸುತ್ತ ಬಂದಿದ್ದು, ಈಗಲೂ ಹಿಂದುತ್ವದ ಮೇಲೆ ಮತಯಾಚಿಸುತ್ತಿದೆ. ಶಿವಮೊಗ್ಗ ಜಿಲ್ಲೆ ಸಮಾಜವಾದಿ ನೆಲೆಗಟ್ಟಾಗಿದ್ದು, ಪಕ್ಷ ನಿರಂತರವಾಗಿ ವೈಚಾರಿಕತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತ ಜನರ ಜೊತೆಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಿದ್ಧತೆಗಳು ನಡೆಯದೆ, ನಿರಂತರವಾಗಿ ನಡೆಯುತ್ತಿದೆ. ಪ್ರತಿ ಮತಗಟ್ಟೆಯಲ್ಲಿ 13 ಮಂದಿ ಕಾರ್ಯಕರ್ತರ ತಂಡ ಕಾರ್ಯನಿರ್ವಹಿಸುತ್ತಿದೆ. 8 ವಿವಿಧ ಮೋರ್ಚಾಗಳನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ವಿವಿಧ ಸಮಾಜದ ಮುಖಂಡರನ್ನು ಭೇಟಿಯಾಗಿ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ 1.10 ಲಕ್ಷ ಮತಗಳು ಬಂದಿದ್ದವು. ಈ ಬಾರಿ ಒಂದುವರೆ ಲಕ್ಷ ಮತಗಳ ತೆಗೆದುಕೊಳ್ಳಬೇಕಿದೆ. ಇದಕ್ಕಾಗಿ 12,000 ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಎಂಟು ಮೋರ್ಚಾಗಳನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ 370 ಸ್ಥಾನಗಳ ಗೆಲ್ಲುವ ಗುರಿ ಬಿಜೆಪಿ ಹೊಂದಿದೆ ಎಂದರು.ಬಿಜೆಪಿ ಚಿಹ್ನೆ ಇದ್ದರೆ ಮಾತ್ರ ಮೋದಿ ಪರ:
ಈಶ್ವರಪ್ಪ ಅವರು ವಾಪಸ್ ಬರುತ್ತಾರೆ ಎಂಬ ವಿಶ್ವಾಸವಿದೆ. ಅವರು ಲಕ್ಷಕ್ಕೂ ಹೆಚ್ಚು ಮತ ಗಳಿಸುತ್ತಾರೆ ಎಂದರೆ ನಮಗೆ ನಗು ಬರುತ್ತದೆ. ಮೋದಿ ಇರುವ ಬಿಜೆಪಿ ಚಿಹ್ನೆ ಇಟ್ಟುಕೊಂಡು ಹೋದರೆ ಮಾತ್ರ ಅದು ಮೋದಿ ಪರ. ಬಿ.ವೈ.ರಾಘವೇಂದ್ರ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ. ಕಾರ್ಯಕರ್ತರು ಮತ್ತು ಮತದಾರರು ಸ್ಪಷ್ಟವಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸುತ್ತಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮೋಹನ್‍ರೆಡ್ಡಿ, ಎಸ್.ಜ್ಞಾನೇಶ್ವರ್, ನಾಗರಾಜ್, ಕೆ.ವಿ.ಅಣ್ಣಪ್ಪ, ಶ್ರೀನಾಗ್ ಉಪಸ್ಥಿತರಿದ್ದರು.
ಈಶ್ವರಪ್ಪರನ್ನು ಬೆಂಬಲಿಸುವ ಕಾರ್ಯಕರ್ತರು ನಮ್ಮಲ್ಲಿಲ್ಲಲೋಕಸಭಾ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಧೂಳಿಪಟ ಆಗಲಿದೆ. ಮತ್ಯಾವ ಬದಲಾವಣೆ ನಡೆಯುವುದಿಲ್ಲ. ಈಶ್ವರಪ್ಪನವರ ಜೊತೆಗೆ ಹೋಗಿರುವ ಬಿಜೆಪಿ ಕಾರ್ಯಕರ್ತರು ಮರಳಿ ಬರುತ್ತಾರೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು. ಹಿಂಬಾಗಿಲಿನ ಮೂಲಕ ಈಶ್ವರಪ್ಪರನ್ನು ಬೆಂಬಲಿಸುವ ಕಾರ್ಯಕರ್ತರು ನಮ್ಮಲ್ಲಿ ಇಲ್ಲ. ಹಿಂದೊಂದು ಮುಂದೊಂದು ಒಳಗೊಳಗೆ ಕೆಲಸ ಮಾಡುವ ಸ್ವಭಾವ ಬಿಜೆಪಿ ಕಾರ್ಯಕರ್ತರಲ್ಲಿಲ್ಲ. ಈಶ್ವರಪ್ಪ ಅವರ ಜೊತೆ ಆರು ಮಂದಿ ಮಾಜಿ ಪಾಲಿಕೆ ಸದಸ್ಯರಿದ್ದಾರೆ. ಉಳಿದಂತೆ ಎಲ್ಲರೂ ಬಿಜೆಪಿಯಲ್ಲಿದ್ದಾರೆ ಎಂದರು.