ಕಾಂಗ್ರೆಸ್‌ ಕಾರ್ಯಕರ್ತರಿಂದ ನಗರದ ಅಜಾದ್ ಪಾರ್ಕ್ ವೃತದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಉತ್ತರಖಂಡದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಭಾಷಣ ಮಾಡಿದ ಮೈದಾನವನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಗಂಗಾ ಜಲ ಸಿಂಪಡಿಸುವ ಮೂಲಕ ಶುದ್ಧೀಕರಿಸಿದ್ದನ್ನು ವಿರೋಧಿಸಿ ಚಿಕ್ಕಮಗಳೂರಿನ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ನಗರದ ಅಜಾದ್ ಪಾರ್ಕ್ ವೃತದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ- ಸಂಘ ಪರಿವಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ನೊಂದವರು ಬಡವರು ಹಾಗೂ ಶೋಷಿತರ ಪರವಾಗಿ ಹೋರಾಟ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗ ಶುದ್ಧೀ ಕರಣ ಮಾಡಿರುವುದು ಅವರಿಗೆ ಮಾಡಿದ ಅಪಮಾನವಲ್ಲ. ಬದಲಿಗೆ ಇಡೀ ದೇಶದ ಜನರಿಗೆ, ಪ್ರಜಾಪ್ರಭುತ್ವಕ್ಕೆ ಮಾದ ಅವಮಾನ. ಈ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆತಗಿಸುವಂತಾಗಿದೆ. ಸಂವಿಧಾನದ ಆಶಯ, ಮೂಲ ವಿಚಾರಧಾರೆಗೆ ಧಕ್ಕೆ ತಂದಿದೆ ಎಂದು ಕಿಡಿಕಾರಿದರು.


ಬಿಜೆಪಿ ಹಾಗೂ ಅಂಗ ಸಂಸ್ಥೆಗಳು ಹಂತ ಹಂತವಾಗಿ ಪ್ರಜಾಪ್ರಭುತ್ವದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಈ ದೇಶ ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನ ಶ್ರಮವಿರಬೇಕು. ಆದರೆ, ಬಿಜೆಪಿ- ಸಂಘ ಪರಿವಾರ ಜಾತಿ-ಜಾತಿ ಎಂದು ಸಮಾಜವನ್ನೇ ಪ್ರತ್ಯೇಕಿಸಿ ದೇಶ ಒಡೆವ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.ಮೈದಾನ ಶುದ್ಧಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಲ್ಲಿನ ಆಡಳಿತ ಪಕ್ಷ ಮೌನವಾಗಿರುವುದು ಘಟನೆಯನ್ನು ಸಮರ್ಥಿಸಿ ಕೊಳ್ಳುವಂತಿದೆ. ಇಂತಹ ಘಟನೆಗಳು ದೇಶದಲ್ಲಿ ನಿರಂತರ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಿದರೆ ಆ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ನೀಟ್‌ ಹಾಗೂ ರಾಮ ಮಂದಿರ ಅವ್ಯವಾಹರದ ಬಗ್ಗೆ ಮೊದಲು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಮಾತನಾಡಿ, ಬಿಜೆಪಿ- ಸಂಘ ಪರಿವಾರ ಮನುವಾದ ಒಪ್ಪಿಕೊಂಡಿದೆ. ಇದರಿಂದಾಗಿ ಅವರು ಜನರಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಬಿಡುತ್ತಿಲ್ಲ. ಭಾರತದ ಶಕ್ತಿ ಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದ್ದಾರೆ. ಇದು ಇಡೀ ಪ್ರಜ್ಞಾವಂತ ಸಮಾಜಕ್ಕೆ ಮಾಡಿದ ಅಪಮಾನ. ಶ್ರೀರಾಮ ಹಿಂದುಗಳಿಗೆ ಶ್ರೇಷ್ಠ ಎಂದು ರಾಮನ ಹುಂಡಿಯಿಂದಲೇ ಹಣ ಕದ್ದಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ ಕಲ್ಲು, ಇಟ್ಟಿಗೆಗಳನ್ನು ಮಾರಿಕೊಂಡಿದ್ದಾರೆ. ಏನೇನು ಅನಾಚಾರ ಮಾಡಲು ಸಾಧ್ಯವೊ ಎಲ್ಲವನ್ನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ಬಿಜೆಪಿ ಮಾಡು ತ್ತಿದೆ. ಇದೇ ನಿಟ್ಟಿನಲ್ಲಿ ಮಲ್ಲಿಕಾರ್ಜುನಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ. ಅವರು ದಲಿತರು ಎಂಬ ಕಾರಣಕ್ಕೆಅವರು ಭಾಷಣ ಮಾಡಿದ ಜಾಗ ಶುದ್ಧಗೊಳಿಸಿರುವುದು ಇಡೀ ದೇಶದ ಜನರಿಗೆ ಮಾಡಿದ ಅವಮಾನ ಎಂದು ಹೇಳಿದರು.ಅಂಬೇಡ್ಕರ್‌ ಗೆ ಕುಡಿಯಲು ನೀರು ನೀಡದ, ಶಾಲೆಯಲ್ಲಿ ಕೂರಲು ಅವಕಾಶ ನೀಡದ ಆರ್‌ಎಸ್‌ಎಸ್ ಇಂದಿಗೂ ಜೀವಂತ ವಿದೆ. ದೇಶದ ಹಿಂದುಳಿದ ಹಾಗೂ ಶೋಷಿತ ದಲಿತ ಸಮಾಜದ ಜನ ಮುಂಬರುವ ೨೦೨೯ ರ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಮಲ್ಲೇಶ್‌ಸ್ವಾಮಿ, ಕೆ.ಮಹಮದ್, ತನೋಜ್ ನಾಯ್ಡು, ಗುರುಮಲ್ಲಪ್ಪ, ಹಿರೇಮ ಗಳೂರು ರಾಮಚಂದ್ರ, ಹಿರೇಗೌಜ ಶಿವು, ನಾಗಭೂಷಣ್, ಪ್ರಸಾದ್‌ಅಮೀನ್, ವೆಂಕಟೇಶ್, ಜಗದೀಶ್, ಶಿವರಾಮ್, ಶಾದಾಬ್, ರೂಬೆನ್ ಮೊಸೆಸ್, ಬೆಟಗೆರೆ ಪ್ರವೀಣ್, ಸಂತೋಷ್, ಲಾಕೇಶ್, ಶ್ರೀಕಾಂತ್, ಆಲ್ದೂರು ಸುರೇಶ್ ಇದ್ದರು.