ಕಾಂಗ್ರೆಸ್ ಪಕ್ಷ ಮತ್ತು ಅದರ ಹಿರಿಯ ಸದಸ್ಯರು ವಿಧಾನಸಭೆಯಲ್ಲಿ ತಮ್ಮ ಗೂಂಡಾಗಿರಿ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದರು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಮತ್ತು ಪಕ್ಷದ ಹಿರಿಯ ಮುಖಂಡ ಬಿ. ಸುರೇಶಗೌಡರು ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಪ್ರಜಾಪ್ರಭುತ್ವದ ಆಶಯ ಮತ್ತು ಸಿದ್ಧಾಂತಗಳಲ್ಲಿ ತನಗೆ ಕಿಂಚಿತ್ತೂ ಗೌರವ ಇಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷ ಮತ್ತು ಅದರ ಹಿರಿಯ ಸದಸ್ಯರು ವಿಧಾನಸಭೆಯಲ್ಲಿ ತಮ್ಮ ಗೂಂಡಾಗಿರಿ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದರು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಮತ್ತು ಪಕ್ಷದ ಹಿರಿಯ ಮುಖಂಡ ಬಿ. ಸುರೇಶಗೌಡರು ಕಿಡಿಕಾರಿದ್ದಾರೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ಹೊರಗೆ ಹೋಗುವಾಗ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲರು ಮತ್ತು ಅತ್ಯಂತ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಅಂಥವರು ರಾಜ್ಯಪಾಲರಿಗೆ ಘೇರಾವ್‌ ಹಾಕಿರುವುದು ಅಸಾಂವಿಧಾನಿಕ ನಡೆ ಮತ್ತು ಸದನದ ನಿಯಮಗಳಿಗೆ ಸಂಪೂರ್ಣ ವಿರುದ್ಧವಾದುದು ಎಂದು ಅವರು ತಿಳಿಸಿದ್ದಾರೆ. ಸಂಪುಟ ಪುನರ್ರಾಚನೆಯಾದರೆ ಸ್ಥಾನ ಕಳೆದುಕೊಳ್ಳುವ ಅಂಜಿಕೆಯಲ್ಲಿ ಇರುವ ಪಾಟೀಲರ ಮತ್ತು ಜೀವನದಲ್ಲಿ ಒಮ್ಮೆಯಾದರೂ ಸಚಿವನಾಗಬೇಕು ಎಂದು ಕಾಯುತ್ತಿರುವ ಹರಿಪ್ರಸಾದ್ ನಡೆ ಯಾರಿಗಾದರೂ ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಜಿ ರಾಮ್ ಜಿ ಕಾನೂನಿಗೆ ರಾಜ್ಯದ ವಿರೋಧ ಇದ್ದರೆ ಅದನ್ನು ಚರ್ಚಿಸಲು ಬೇಕಾದಷ್ಟು ವೇದಿಕೆಗಳು ಇವೆ. ಅದಕ್ಕೆ ಜಂಟಿ ಅಧಿವೇಶನ ಕರೆದು, ಅದನ್ನು ರಾಜ್ಯಪಾಲರ ಬಾಯಿಯಲ್ಲಿ ಹೇಳಿಸುವುದು ಕ್ಷುದ್ರ ರಾಜಕೀಯ ಮಾತ್ರವಲ್ಲ ತನ್ನ ಎಲ್ಲ ಆಡಳಿತ ವೈಫಲ್ಯ ಮತ್ತು ಮುಖ್ಯಮಂತ್ರಿ ಖುರ್ಚಿಗಾಗಿ ಕಾಂಗ್ರೆಸ್ ನಲ್ಲಿ ನಡೆದಿರುವ ಕಚ್ಚಾಟದಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ದುರುದ್ದೇಶವಾಗಿದೆ ಎಂದು ಅವರು ಕೆಂಡಕಾರಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರು ಮಾಡಿದ ಅನಾಹುತ ಒಂದೆರಡಲ್ಲ. ಆಗ ಕಾಂಗ್ರೆಸ್ ಪಕ್ಷದವರು ನಿದ್ದೆ ಮಾಡುತ್ತಿದ್ದರಾ? ಇವತ್ತು ನಮ್ಮರಾಜ್ಯಪಾಲರು ಕರ್ನಾಟಕ ಸರ್ಕಾರದಿಂದ ಕೇಂದ್ರದ ಜತೆಗೆ ಸಂಘರ್ಷ ಆಗಬಾರದು ಎಂದೇ ಅತ್ಯಂತ ಪ್ರಬುದ್ಧವಾಗಿ ನಡೆದುಕೊಂಡಿದ್ದಾರೆ. ಅಂಥ ಘನತೆವೆತ್ತ ರಾಜ್ಯಪಾಲರ ಜತೆಗೆ ಕಾಂಗ್ರೆಸ್ ಪಕ್ಷ ಅಗೌರವದಿಂದ ನಡೆದುಕೊಂಡಿದನ್ನು ಖಂಡಿಸಿ ನಾವು ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.