ಸಾರಾಂಶ
- ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪಕ್ಷದ ಮುಖಂಡ ಹಾಗೂ ಕಾರ್ಯಕರ್ತರ ಸಭೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಂಬೇಡ್ಕರ್ ಸಂವಿಧಾನದ ತತ್ತ್ವ ಹೊಂದಿರುವ ಪಕ್ಷ ಕಾಂಗ್ರೆಸ್. ಚುನಾವಣೆಗೆ ಮಾತ್ರ ಪಕ್ಷ ಸೀಮಿತವಾಗದೇ ಜಾತ್ಯಾತೀತ ಸಿದ್ಧಾಂತದಡಿ ನಂಬಿಕೆಯಿಟ್ಟು ಎಲ್ಲಾ ಸಮಯದಲ್ಲೂ ಸಂಘಟಿಸುವಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಇದೀಗ 17ನೇ ಜಿಲ್ಲೆಯಾಗಿ ಚಿಕ್ಕಮಗಳೂರಿಗೆ ಆಗಮಿಸಿದ್ದೇವೆ. ಎಐಸಿಸಿ ವಹಿಸಿರುವ ಪಕ್ಷ ಸಂಘಟನೆಯಲ್ಲಿ ಜಿಲ್ಲಾ, ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಸ್ಥಳೀಯ ಮುಖಂಡರು ಸರ್ಕಾರದ ಯೋಜನೆ ತಲುಪಿಸಲು ನಿರಂತರವಾಗಿ ಶ್ರಮಿಸಬೇಕು ಎಂದು ಸೂಚನೆ ನೀಡಿದರು.ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿರುವ ಕ್ಷೇತ್ರ ಚಿಕ್ಕಮಗಳೂರು. ಇಲ್ಲಿನ ಎಲ್ಲಾ ವಿಧಾನಸಭಾ ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಜಯ ಭೇರಿ ಬಾರಿಸಿರುವುದು ಹೆಮ್ಮೆಯ ಸಂಗತಿ. ಇಂದಿಗೂ ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ನಿಲುವು, ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿದೆ. ಹೀಗಾಗಿ ಕ್ಷೇತ್ರವಾರು ಸಭೆ, ಸಮಾರಂಭ ನಡೆಸಿ ಪಕ್ಷದ ಸಿದ್ದಾಂತವನ್ನು ಮುಖಂಡರು ಪರಿಚಯಿಸಬೇಕು ಎಂದರು.
ರಾಜ್ಯ ಸರ್ಕಾರ ಅಧಿಕಾರ ಬಂದು ಆರೇ ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿಗೆ ತಂದು ನುಡಿದಂತೆ ನಡೆಯುತ್ತಿದೆ. ಇದಕ್ಕೆ ವಿರೋಧ ಪಕ್ಷದ ಬಿಜೆಪಿ ಮುಖಂಡರು ಇಲ್ಲಸಲ್ಲದ ಬಣ್ಣ ಕಟ್ಟಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಅವರ ಹೀನಾಯ ಸ್ಥಿತಿ ತೋರಿಸಿದಂತಾಗಿದೆ ಎಂದು ಹೇಳಿದರು.ಗ್ಯಾರಂಟಿ ಜೊತೆಗೆ ಸರ್ಕಾರಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಶಾಸನ ಹೆಚ್ಚಿಸಿದೆ. ಪ್ರತಿ ಕ್ಷೇತ್ರವಾರು ಕೋಟ್ಯಂತರ ಅನುದಾನ ಒದಗಿಸಿದೆ. ಇಡೀ ದೇಶದಲ್ಲೇ ರಾಜ್ಯದ ಜಿಡಿಪಿ ಪ್ರಥಮ ಸ್ಥಾನದಲ್ಲಿರುವ ವಿಷಯವನ್ನು ಜನ ಸಾಮಾನ್ಯರಿಗೆ ಮುಟ್ಟಿಸಿದಾಗ ಮುಂದಿನ ಚುನಾವಣೆಗಳಲ್ಲಿ ಪಕ್ಷ ಎಲ್ಲೆಡೆ ವಿಜಯ ಪತಾಕೆ ಹಾರಿಸಿ ಜನಪರವಾಗಿ ನಿಲ್ಲಬಹುದು ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಮಾತನಾಡಿ, 1947 ರಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ನೇರವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಂಘ ಪರಿವಾರದ ವಿರುದ್ಧ ಹೋರಾಟ ಮಾಡಿರುವುದು ಕಾಂಗ್ರೆಸ್ ಎಂದರು.ಗಾಂಧೀಜಿ, ಅಂಬೇಡ್ಕರ್ ಮತ್ತು ನೆಹರು ಆದರ್ಶಗಳನ್ನು ಒಪ್ಪಿಕೊಂಡಿರುವ ಕಾಂಗ್ರೆಸ್. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ಗಿರುವ ಹಲವಾರು ವ್ಯತ್ಯಾಸ. ಆ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಮುಖಂಡರು ಗೋಷ್ಠಿ, ಗ್ರಾಮಸಭೆ ನಡೆಸಿ ಸ್ಥಳೀಯವಾಗಿ ತಕ್ಕ ಉತ್ತರ ನೀಡಬೇಕು. ಜೊತೆಗೆ ಕಾಂಗ್ರೆಸ್ ಪಕ್ಷದ ಹಿನ್ನೆಲೆಯಲ್ಲಿ ಕೂಲಂಕೂಷವಾಗಿ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆ ಸ್ ಶಾಸಕರು ಗೆಲುವು ಸಾಧಿಸಲು ಕಾರ್ಯಕರ್ತರ ಪರಿಶ್ರಮವೇ ಕಾರಣ. ಹಾಗಾಗಿ ರಾಜ್ಯದಲ್ಲಿ ಅಧಿಕಾರ ಹಿಡಿದು ಎಲ್ಲಾ ಗ್ಯಾರಂಟಿ ಈಡೇರಿಸಿದ್ದು, ಸರ್ಕಾರದ ಜನಪ್ರಿಯತೆ ಆಡಳಿತ ಸಹಿಸಿಕೊಳ್ಳಲಾಗದ ವಿರೋಧ ಪಕ್ಷ ಅಪಪ್ರಚಾರದಲ್ಲಿ ತೊಡಗಿವೆ ಎಂದರು.ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ರಾಜ್ಯ ವಕ್ತಾರ ಅಬ್ದುಲ್ ಮುನೀರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹನೀಫ್, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಗಂಗಾಧರ್, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಪ್ರವೀಣ್, ಮುಖಂಡರಾದ ಸುಧೀರ್‌ಕುಮಾರ್ ಮುರೊಳ್ಳಿ, ಎಂ.ಸಿ.ಶಿವಾನಂದಸ್ವಾಮಿ, ಆರ್. ಚಂದ್ರು ಉಪಸ್ಥಿತರಿದ್ದರು. 4 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ಧ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ವಿನಯ್ ಕುಮಾರ್ ಸೊರಕೆ ಮಾತನಾಡಿದರು.